ರಾಯಚೂರು: ದೇಶದಲ್ಲಿ ಭಯೋತ್ಪಾದನೆಯಂತಹ ಮಾನವಕುಲ ನಾಶ ಮಾಡುವ ಕೃತ್ಯಗಳು ನಡೆಯುತ್ತಿವೆ. ಈ ಬಗ್ಗೆ ವಿದ್ಯಾರ್ಥಿ ಯುವ ಸಮೂಹವು ಯಾವ ರೀತಿ ಸ್ಪಂದಿಸುತ್ತದೆ. ಅವರಲ್ಲಿರುವ ಅಭಿಪ್ರಾಯವೇನು ಎಂಬುದನ್ನು ಅರಿಯುವ ಉದ್ದೇಶಕ್ಕಾಗಿ ಯುವ ಸಂಸತ್ ದೇಶದಾದ್ಯಂತ ಆಯೋಜಿಸಲಾಗುತ್ತಿದೆ ಎಂದು ರಾಯಚೂರಿ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪಾಂಡುರಂಗ ಎಂ. ಹೇಳಿದರು.
ನಗರದ ಪ್ರಥಮ ದರ್ಜೆ ಕಾಲೇಜು ಸಭಾಂಗಣದಲ್ಲಿ ಕೇಂದ್ರದ ಕ್ರೀಡಾ ಇಲಾಖೆಯ ಎನ್‌ಎಸ್‌ಎಸ್ ಯೋಜನೆ, ಗುಲಬರ್ಗಾ ವಿಶ್ವವಿದ್ಯಾಲಯ, ನೆಹರು ಯುವ ಕೇಂದ್ರ ಮತ್ತು ಪ್ರಥಮ ದರ್ಜೆ ಕಾಲೇಜಿನಿಂದ ಸೋಮವಾರ ಏರ್ಪಡಿಸಿದ್ದ ‘ಯುಥ್ ಪಾರ್ಲಿಮೆಂಟ್ ಫೆಸ್ಟಿವಲ್–2019’ ಉದ್ಘಾಟಿಸಿ ಮಾತನಾಡಿದರು.
ಕೇಂದ್ರ ಸರ್ಕಾರದ ನಿರ್ದೇಶನದಂತೆ ಜಿಲ್ಲಾ, ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಯುವ ಸಂಸತ್ ಆಯೋಜಿಸಲಾಗುತ್ತಿದೆ. ಜ್ವಲಂತ ವಿಷಯಗಳ ಕುರಿತು ಮಾತನಾಡಲು ಅವಕಾಶ ನೀಡಲಾಗುವುದು. ವಾಕ್ ಚಾತುರ್ಯ, ನಾಯಕತ್ವ ಗುಣಗಳನ್ನು ಪರಿಶೀಲಿಸಿ ಜಿಲ್ಲೆಯಿಂದ ಮೂವರನ್ನು ಆಯ್ಕೆ ಮಾಡಿ ರಾಜ್ಯಮಟ್ಟಕ್ಕೆ ಕಳುಹಿಸಲಾಗುವುದು ಎಂದರು.
ರಾಯಚೂರು ಮತ್ತು ಯಾದಗಿರಿ ಒಟ್ಟಾಗಿ ಜಿಲ್ಲಾಮಟ್ಟದ ಸ್ಪರ್ಧೆ ನಡೆಯುತ್ತಿದ್ದು, ವಿದ್ಯಾರ್ಥಿಗಳು ತಮ್ಮ ಪ್ರತಿಭೆ ಪ್ರದರ್ಶಿಸಲು ಇದೊಂದು ಅವಕಾಶ ಸಿಕ್ಕಿದೆ. ಜಾಗತಿಕ ಆಗುಹೋಗುಗಳ ಬಗ್ಗೆ ವಿದ್ಯಾರ್ಥಿಗಳು ತಮಗೆ ಅನಿಸುವ ಭಾವನೆಗಳನ್ನು ಮುಕ್ತವಾಗಿ ಹಂಚಿಕೊಳ್ಳಬಹುದು ಎಂದು ತಿಳಿಸಿದರು.
ಯಾದಗಿರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಜಟ್ಟೆಪ್ಪ, ಪ್ರಾಧ್ಯಾಪಕ ಜೆ.ಎಲ್. ಜೆ.ಎಲ್. ಈರಣ್ಣ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಭಾರಿ ಪ್ರಾಂಶುಪಾಲ ದಸ್ತಗಿರಸಾಬ್ ದಿನ್ನಿ ಮಾತನಾಡಿ, ಪ್ರತಿಯೊಂದು ವಿಷಯಕ್ಕೆ ವಿದ್ಯಾರ್ಥಿಗಳಲ್ಲಿ ಸ್ಪಂದಿಸುವ ಮನೋಭಾವ ತುಂಬಾ ಮುಖ್ಯ. ಪ್ರಶ್ನಿಸುವ ಗುಣ ಇರಬೇಕು. ಇದರಿಂದ ಹೆಚ್ಚು ವಿಷಯಾಸಕ್ತಿ ಬೆಳೆಯುತ್ತದೆ. ಈ ಮೂಲಕ ಒಳ್ಳೆಯ ನಾಯಕರಾಗಲು ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳಿಗೆ ಯುವ ಸಂಸತ್ ಉತ್ತಮ ವೇದಿಕೆಯಾಗಿದೆ ಎಂದು ಹೇಳಿದರು.
ಸಾಮಾಜಿಕ ಕಾರ್ಯಕರ್ತ ಭೀಮನಗೌಡ ಇಟಗಿ, ವಕೀಲ ವೇಣು ಜಾಲಿಬೆಂಚಿ, ಸಹಾಯಕ ಪ್ರಾಧ್ಯಾಪಕರಾದ ಪುಷ್ಪಾ, ಶಿವಯ್ಯ ಹಿರೇಮಠ, ಮಲ್ಲಣಗೌಡ, ಗೌಡಪ್ಪ ಪಾಟೀಲ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.