ADVERTISEMENT

ನೀರಿಗಾಗಿ ಪ್ರತಿ ತಾಲ್ಲೂಕಿಗೆ ₹20 ಲಕ್ಷ ಅನುದಾನ

ಜಿಲ್ಲಾ ಪಂಚಾಯಿತಿ ಸಿಇಓ ನೂರ್‌ ಜಹಾರ ಖಾನಂ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 12 ಮೇ 2022, 15:19 IST
Last Updated 12 ಮೇ 2022, 15:19 IST
ರಾಯಚೂರು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ನೂರ್‌ ಜಹಾರ್ ಖಾನಂ ಅವರು ಗುರುವಾರ ಪಂಚಾಯಿತಿ ಅಧಿಕಾರಿಗಳ ಸಭೆ ನಡೆಸಿದರು.
ರಾಯಚೂರು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ನೂರ್‌ ಜಹಾರ್ ಖಾನಂ ಅವರು ಗುರುವಾರ ಪಂಚಾಯಿತಿ ಅಧಿಕಾರಿಗಳ ಸಭೆ ನಡೆಸಿದರು.   

ರಾಯಚೂರು: ಜಿಲ್ಲೆಯಲ್ಲಿ ಕುಡಿಯುವ ನೀರಿನ ಉದ್ದೇಶಕ್ಕಾಗಿ ಪ್ರತಿ ತಾಲ್ಲೂಕಿಗೆ ₹15 ರಿಂದ ₹20 ಲಕ್ಷ ಅನುದಾನ ಮೀಸಲಿಡಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಲಾರಿ ನೂರ್‌ ಜಹಾರ್‌ ಖಾನಂ ಹೇಳಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಕುಡಿಯುವ ನೀರಿನ ಸಮಸ್ಯೆ ಕುರಿತ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.

ಬೇಸಿಗೆಯಲ್ಲಿ ಸಮಸ್ಯೆ ಕಾಣಿಸಿಕೊಳ್ಳುವ ಗ್ರಾಮಗಳಿಗೆ ನೀರು ಒದಗಿಸುವುದಕ್ಕೆ ಅಧಿಕಾರಿಗಳು ಕ್ರಮ ವಹಿಸಬೇಕು. ಅಗತ್ಯ ಇರುವ ಕಡೆಗಳಲ್ಲಿ ಮಾತ್ರ ಕೊಳವೆ ಬಾಗಿ ಕೊರೆಸುವುದು ಮತ್ತು ಪೈಪ್‌ಲೈನ್‌ ಅಳವಡಿಸುವ ಕಾರ್ಯ ಕೈಗೊಳ್ಳಬೇಕು ಎಂದರು.

ADVERTISEMENT

ಬಾಡಿಗೆ ಕೊಳವೆಬಾವಿ ಪಡೆದು ನೀರು ಒದಗಿಸುತ್ತಿರುವ ಕಡೆಗಳಲ್ಲಿ ಪೈಪ್‌ಲೈನ್‌ ಅಳವಡಿಸುವುದಕ್ಕೆ ಅವಕಾಶ ಇರುವುದಿಲ್ಲ. ಬೇಸಿಗೆಯಲ್ಲಿ ಮಾತ್ರ ಅವು ಬಳಕೆಗೆ ಬರುತ್ತವೆ. ಹೀಗಾಗಿ ಸದ್ಯಕ್ಕೆ ಪೈಪ್‌ಲೈನ್‌ ಅಳವಡಿಸುವ ಕಾರ್ಯಕ್ಕೆ ಅಧಿಕಾರಿಗಳು ಮುಂದಾಗಬಾರದು. ಮಳೆಗಾಲ ಬಳಿಕ ಪೈಪ್‌ಲೈನ್‌ ಬಳಕೆಯಾಗುವುದಿಲ್ಲ ಎಂದು ತಿಳಿಸಿದರು.

ಕುಡಿಯುವ ನೀರಿನ ಸಮಸ್ಯೆ ಇರುವ ಗ್ರಾಮಗಳ ಕುರಿತು ಮಾತನಾಡಿದ ಅವರು ಗ್ರಾಂ ಪಂಚಾಯಿತಿ ಅಭಿವೃದ್ಧಿ ಅದಿಕಾರಿಗಳು, ರಾಯಚೂರು ತಾಲ್ಲೂಕಿನ ಕಮಲಾಪೂರ ಗ್ರಾಮದಲ್ಲಿ ಕೊಳವೆಬಾವಿ ಕೊರೆಸುವ ಜೊತೆಗೆ ಪೈಪ್‌ಲೈನ್‌ ಅಳವಡಿಸುವ ಅಗತ್ಯವಿದೆ. ಗಿಲ್ಲೇಸುಗೂರು ಕ್ಯಾಂಪ್‌ನಲ್ಲಿ ನೀರಿನ ಸಮಸ್ಯೆ ಇದೆ. ವಡವಾಟಿ ಗ್ರಾಮದಲ್ಲೂ ಕೊಳವೆಬಾವಿ ಮತ್ತು ಪೈಪ್‌ಲೈನ್‌ ಮಾಡಬೇಕಿದೆ ಎಂದು ಹೇಳಿದರು.

ಮನ್ಸಲಾಪೂರ ಗ್ರಾಮಕ್ಕೆ ರಾಯಚೂರು ನಗರದ ಪೈಪ್‌ಲೈನ್‌ ಅಳವಡಿಸಿದ್ದು, ಅದು ಹಳೆಯದಾಗಿದೆ. ಪೈಪ್‌ಲೈನ್‌ ಬದಲಾಯಿಸಬೇಕಿದೆ. ಸಿದ್ರಾಂಪುರ, ಬೊಳಮಾನದೊಡ್ಡಿ ಗ್ರಾಮಗಳಲ್ಲಿ ಒಂದೇ ಕೊಳವೆಬಾವಿ ಇದ್ದು, ಸಮರ್ಪಕವಾಗಿ ನೀರು ಪೂರೈಸುವುದಕ್ಕೆ ಸಮಸ್ಯೆ ಆಗುತ್ತಿದೆ ಎಂದು ಗ್ರಾಮ ಪಂಚಾಯಿತಿ ಅಧಿಕಾರಿ ತಿಳಿಸಿದರು.

ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಶಶಿಕಾಂತ ಶಿವಪೂರೆ, ವಿವಿಧ ಗ್ರಾಮ ಪಂಚಾಯಿತಿಗಳ ಅಧಿಕಾರಿಗಳು, ತಾಲ್ಲೂಕು ಪಂಚಾಯಿತಿ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.