ADVERTISEMENT

ಕ್ಯಾಂಪಸ್‌ ಕಂಡು ಖುಷಿಪಟ್ಟ ಗಾಂಧಿ ಮೊಮ್ಮಗ

ವಾಯುವಿಹಾರ ನಡೆಸಿ ಕ್ಷೇಮ ವಿಚಾರಿಸಿದ ರಾಜ್‌ಮೋಹನ್ ಗಾಂಧಿ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2019, 13:29 IST
Last Updated 21 ಡಿಸೆಂಬರ್ 2019, 13:29 IST
ಮೈಸೂರು ವಿಶ್ವವಿದ್ಯಾಲಯದ ಗಾಂಧಿ ಭವನದ ಆವರಣದಲ್ಲಿ ಶನಿವಾರ ಮುಂಜಾನೆ ಮಹಾತ್ಮ ಗಾಂಧಿ ಮೊಮ್ಮಗ ರಾಜ್‌ಮೋಹನ್ ಗಾಂಧಿ ವಾಯುವಿಹಾರ ನಡೆಸಿದರು
ಮೈಸೂರು ವಿಶ್ವವಿದ್ಯಾಲಯದ ಗಾಂಧಿ ಭವನದ ಆವರಣದಲ್ಲಿ ಶನಿವಾರ ಮುಂಜಾನೆ ಮಹಾತ್ಮ ಗಾಂಧಿ ಮೊಮ್ಮಗ ರಾಜ್‌ಮೋಹನ್ ಗಾಂಧಿ ವಾಯುವಿಹಾರ ನಡೆಸಿದರು   

ಮೈಸೂರು: ಮೈಸೂರು ವಿಶ್ವವಿದ್ಯಾಲಯದ ಗಾಂಧಿ ಭವನದ ಆವರಣದಲ್ಲಿ ಶನಿವಾರ ಮುಂಜಾನೆ ಮಹಾತ್ಮ ಗಾಂಧಿ ಮೊಮ್ಮಗ ರಾಜ್‌ಮೋಹನ್ ಗಾಂಧಿ ವಾಯುವಿಹಾರ ನಡೆಸಿದರು.

ವಿ.ವಿ.ಯ ಅತಿಥಿಗೃಹದಿಂದ ಗಾಂಧಿಭವನದ ಆವರಣಕ್ಕೆ ಕಾರಿನಲ್ಲಿ ಬಂದಿಳಿಯುತ್ತಿದ್ದಂತೆ ಸಿಬ್ಬಂದಿ ಸ್ವಾಗತಿಸಿದರು. ಭವನದೊಳಗೆ ಬರುವಂತೆ ಕೋರಿದರು.

ನಯವಾಗಿಯೇ ಅವರ ಕೋರಿಕೆಯನ್ನು ತಿರಸ್ಕರಿಸಿದ ರಾಜ್‌ಮೋಹನ್ ಗಾಂಧಿ, ಅಲ್ಲಿದ್ದ ಎಲ್ಲರ ಕುಶಲೋಪರಿ ವಿಚಾರಿಸಿದರು. ಶ್ರೀಮತಿ ಅಮ್ಮಯ್ಯ ಅವರ ಬಳಿ ‘ನನಗೆ ಕನ್ನಡ ಬರಲ್ಲ’ ಎಂದರು.

ADVERTISEMENT

ನಾನಿಲ್ಲಿಗೆ ಏನನ್ನೂ ವೀಕ್ಷಿಸಲು ಬಂದಿಲ್ಲ. ವಾಕಿಂಗ್ ಮಾಡುವೆ ಎಂದು ಬಿರುಸಿನ ಹೆಜ್ಜೆ ಹಾಕಿದರು. ಗಾಂಧಿ ಭವನದ ಸಿಬ್ಬಂದಿಯೂ ಜತೆಗೆ ಹೆಜ್ಜೆ ಹಾಕಿದರು. ವಾಯುವಿಹಾರದ ನಡುವೆಯೇ ರಾಜ್‌ಮೋಹನ್ ಗಾಂಧಿ, ‘ಮೊದಲ ಬಾರಿಗೆ ಮೈಸೂರಿಗೆ ಬಂದಿರುವೆ. ಕ್ಯಾಂಪಸ್ ಇಷ್ಟವಾಯ್ತು. ಇಲ್ಲಿ ಮಾಲಿನ್ಯವೇ ಇಲ್ಲ. ಟ್ರಾಫಿಕ್‌ ಕಿರಿಕಿರಿಯೂ ಇಲ್ಲ. ನಿಸರ್ಗದತ್ತವಾದ ಕ್ಯಾಂಪಸ್ ಇದಾಗಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮಕ್ಕೆ ತಡವಾಗಲಿದೆ. ಸಿದ್ಧವಾಗಬೇಕು ಎಂದು ವಾಯುವಿಹಾರವನ್ನು ಮೊಟಕುಗೊಳಿಸಿ, ಅತಿಥಿಗೃಹಕ್ಕೆ ನಡೆದೇ ತೆರಳಿದರು. ಅಲ್ಲಿಗೆ ತೆರಳಿದ ಗಾಂಧಿಭವನದ ಸಿಬ್ಬಂದಿ ಕೊಡಗಿನ ಜೇನುತುಪ್ಪ, ಖಾದಿಯ ಶಲ್ಯವನ್ನು ಕಾಣಿಕೆಯಾಗಿ ನೀಡಿದರು. ಖಾದಿ ಹಾರವನ್ನು ಪಡೆದ ರಾಜ್‌ಮೋಹನ್ ಗಾಂಧಿ ಎಲ್ಲರಿಗೂ ಶುಭ ಕೋರಿ ಬೀಳ್ಕೊಟ್ಟರು.

ಕುಲಸಚಿವ ಪ್ರೊ.ಆರ್.ಶಿವಪ್ಪ, ಹಿರಿಯ ಪತ್ರಕರ್ತ ಡಿ.ಉಮಾಪತಿ, ಚಿಂತಕ ಜಿ.ರಾಮಕೃಷ್ಣ, ಗಾಂಧಿ ಭವನದ ನಿರ್ದೇಶಕ ಪ್ರೊ.ಎಂ.ಎಸ್.ಶೇಖರ್, ಹೋರಾಟಗಾರ ಪ.ಮಲ್ಲೇಶ್‌, ಸಂಸ್ಕೃತಿ ಸುಬ್ರಹ್ಮಣ್ಯ, ಡಾ.ಎಸ್.ನರೇಂದ್ರಕುಮಾರ್, ಕೆ.ಟಿ.ವೀರಪ್ಪ, ಪ್ರೊ.ಬಿ.ಕೆ.ಶಿವಣ್ಣ, ಡಾ.ಎಸ್.ಬಿ.ಯೋಗಣ್ಣ, ತಮ್ಮಣ್ಣೇಗೌಡ, ಗಾಂಧಿಭವನದ ಅಧ್ಯಾಪಕರು, ಸಿಬ್ಬಂದಿ, ಸಂಶೋಧನಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.