ADVERTISEMENT

`ಅಂಗವಿಕಲರಿಗೆ ಸ್ವಾಭಿಮಾನಿ ಬದುಕು ಅವಶ್ಯ'

ಸಹಾಯ ಧನ ವಿತರಣೆ * ಸಂಸದರ ನಿಧಿಯಿಂದ ಶೇಕಡ 3ರ ಅನುದಾನಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2013, 12:04 IST
Last Updated 2 ಆಗಸ್ಟ್ 2013, 12:04 IST

ಚನ್ನಪಟ್ಟಣ: `ಅಂಗವಿಕಲರು ಸರ್ಕಾರ ನೀಡುವ ಧನಸಹಾಯವನ್ನು ಸದ್ಬಳಕೆ ಮಾಡಿಕೊಂಡು ಸ್ವಾಭಿಮಾನಿ ಜೀವನವನ್ನು ನಡೆಸಬೇಕು' ಎಂದು ಇಗ್ಗಲೂರು ಗ್ರಾ.ಪಂ. ಅಧ್ಯಕ್ಷೆ ಲಕ್ಷ್ಮಮ್ಮ  ಹೇಳಿದರು.

ತಾಲ್ಲೂಕಿನ ಇಗ್ಗಲೂರು ಗ್ರಾಮ ಪಂಚಾಯಿತಿ ಆವರಣದಲ್ಲಿ ಇತ್ತೀಚಿಗೆ ಏರ್ಪಡಿಸಿದ್ದ, ಗ್ರಾ.ಪಂ.ನ ಶೇ.3ರ ಅನುದಾನದ ಸಹಾಯ ಧನವನ್ನು ಐವರು ಅಂಗವಿಕಲರಿಗೆ ವಿತರಿಸಿ ಮಾತನಾಡಿದ ಅವರು, `ಅಂಗವಿಕಲರು ಸರ್ಕಾರ ಹಾಗೂ ವಿಶಾಲ ಹೃದಯಿಗಳ ಪ್ರೋತ್ಸಾಹವನ್ನು ಪಡೆದು ಜೀವನದಲ್ಲಿ ಪ್ರಗತಿ ಸಾಧಿಸಬೇಕು' ಎಂದರು.

ಸ್ವಾಭಿಮಾನಿ ಅಂಗವಿಕಲರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಶಿವಬೀರಯ್ಯ ಮಾತನಾಡಿ, `ಇತ್ತೀಚಿನ ದಿನಗಳಲ್ಲಿ ಸರ್ಕಾರ ಅಂಗವಿಕಲರ ಅಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು ರೂಪಿಸಿ ಸಾಕಾರಗೊಳಿಸುತ್ತಿದೆ. ಅಂಗವಿಕಲರು ಸರ್ಕಾರ ನೀಡುವ ಯೋಜನೆಗಳನ್ನು  ಬಳಕೆ ಮಾಡಿಕೊಂಡು ಪ್ರತಿಯೊಬ್ಬರೂ ಜೀವನದಲ್ಲಿ ಮುಂದೆ ಬರಬೇಕು' ಎಂದರು.

ಸಮುದಾಯ ಯೋಜನೆ ಸಂಯೋಜಕ ಸಿದ್ದೇಗೌಡ ಮಾತನಾಡಿ, `ಗ್ರಾ. ಪಂ, ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ಶಾಸಕರು ಹಾಗೂ ಸಂಸದರ ನಿಧಿಯಿಂದ ಶೇ.3ರ ಅನುದಾನವನ್ನು ಅಂಗವಿಕಲರಿಗೆ ಸ್ವಂತ ಉದ್ಯೋಗ ಮಾಡಲು ಮತ್ತು ಅವರ ಆರೋಗ್ಯ, ಶಿಕ್ಷಣಕ್ಕೆ ಒದಗಿಸಬೇಕು' ಎಂದು ಒತ್ತಾಯಿಸಿದರು.

ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಪರಶಿವಮೂರ್ತಿ, ಸದಸ್ಯರಾದ ದೇವರಾಜು, ರೇಣುಕಾ ಪ್ರಸಾದ್, ಕುಮಾರ್, ಕೃಷ್ಣಪ್ಪ, ಅಭಿವೃದ್ಧಿ ಅಧಿಕಾರಿಗಳಾದ ಸಿದ್ದಗಂಗಯ್ಯ, ಸೌಭಾಗ್ಯಮ್ಮ ಮೊದಲಾದವರು ಹಾಜರಿದ್ದರು.

ಇದೇ ಸಂದರ್ಭದಲ್ಲಿ ಅಂಗವಿಕಲರಾದ ಗುಂಡಯ್ಯ, ಪ್ರಭುಲಿಂಗಯ್ಯ, ಶಿವರಾಜು, ಸೋಮಶೇಖರ್, ಉಲ್ಲಾಸ್, ಇವರಿಗೆ ತಲಾ 3 ಸಾವಿರ ರೂ.ಗಳ ಗೌರವಧನವನ್ನು ವಿತರಣೆ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.