ADVERTISEMENT

ಅಕ್ರಮ ಕ್ರಷರ್–ತಹಶೀಲ್ದಾರ್‌ ತಂಡದ ದಾಳಿ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2013, 6:55 IST
Last Updated 26 ಸೆಪ್ಟೆಂಬರ್ 2013, 6:55 IST
ಅಕ್ರಮ ಕ್ರಷರ್–ತಹಶೀಲ್ದಾರ್‌ ತಂಡದ ದಾಳಿ
ಅಕ್ರಮ ಕ್ರಷರ್–ತಹಶೀಲ್ದಾರ್‌ ತಂಡದ ದಾಳಿ   

ಕನಕಪುರ:  ತಾಲ್ಲೂಕಿನ ಮರಳವಾಡಿ ಹೋಬಳಿ ವ್ಯಾಪ್ತಿಯ ಬನವಾಸಿಯಲ್ಲಿ ಕೃಷಿ ಜಮೀನಿನಲ್ಲಿ ಅಕ್ರಮವಾಗಿ ಜಲ್ಲಿ ಕ್ರಷರ್ ನಡೆಸುತ್ತಿದ್ದ ಕಾರ್ಖಾನೆ ಮೇಲೆ ಬುಧವಾರ ತಹಶೀಲ್ದಾರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.

ಜಿಲ್ಲಾಧಿಕಾರಿ ಆದೇಶದ ಮೇರೆಗೆ ತಹಶಿೀಲ್ದಾರ್ ಡಾ.ದಾಕ್ಷಾಯಿಣಿ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಕಂದಾಯ, ಗಣಿ ಮತ್ತು ಭೂವಿಜ್ಞಾನ, ಪರಿಸರ ಮಾಲಿನ್ಯ ಮಂಡಳಿ ಮತ್ತು ಪೋಲಿಸ್ ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದರು.

ಈ ಕುರಿತು ಕಾರ್ಯಾಚರಣೆ ನಂತರ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ತಹಶಿೀಲ್ದಾರ್ ಡಾ. ದಾಕ್ಷಾಯಿಣಿ ಅವರು, ‘ದಾಳಿ ವೇಳೆ ಗಣಿಗಾರಿಕೆ ಮಾಡಲು ಬಳಸುತ್ತಿದ್ದ ಯಂತ್ರೋಪಕರಣ, ಕ್ರಷರ್ ನಲ್ಲಿದ್ದ 610 ಟನ್‌ ಜಲ್ಲಿ ಪೌಡರ್ ಮತ್ತು ಜಲ್ಲಿಯನ್ನು ವಶಪಡಿಸಿಕೊಳ್ಳಲಾಗಿದೆ’ ಎಂದು ತಿಳಿಸಿದರು.

‘ಬನವಾಸಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ವಡೇರಹಳ್ಳಿ ಗ್ರಾಮಕ್ಕೆ ಹೊಂದಿಕೊಂಡಂತೆ ಇರುವ ಸರ್ವೇ ನಂಬರ್‌143/5ರ ಕೃಷಿ ಜಮೀನಿನಲ್ಲಿ ಭೀಮೇಶ್ವರ್ ಹೆಸರಿನಲ್ಲಿ ಅಕ್ರಮವಾಗಿ ಜಲ್ಲಿ ಕ್ರಷರ್ ನಡೆಸಲಾಗುತ್ತಿತ್ತು. ಕ್ರಷರ್ ಮಾಲೀಕರು ತಾಲ್ಲೂಕು, ಜಿಲ್ಲಾಡಳಿತ ಅಥವಾ ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದ ಯಾವುದೇ ಪರವಾನಗಿ ಪಡೆದಿರಲಿಲ್ಲ’ ಎಂದರು.

‘ಕೃಷಿ ಭೂಮಿಯಲ್ಲಿ ಜಲ್ಲಿ ಕ್ರಷರ್ ನಡೆಸುತ್ತಿರುವುದರಿಂದ ಸುತ್ತಮುತ್ತ ವಿಪರೀತ ದೂಳು ಬರುತ್ತಿದ್ದು ಪರಿಸರ ಮಾಲಿನ್ಯವಾಗುತ್ತಿದೆ. ಅಕ್ಕಪಕ್ಕದ ರೇಷ್ಮೆ ಕೃಷಿಕರಿಗೆ ತುಂಬಾ ತೊಂದರೆಯಾಗುತ್ತಿದೆ, ಆದ್ದರಿಂದ ಕೂಡಲೇ ಇದನ್ನು ನಿಲ್ಲಿಸಬೇಕು ಎಂದು ವಡೇರಹಳ್ಳಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದರು.

ತಾಲ್ಲೂಕು ಮತ್ತು ಜಿಲ್ಲಾಡಳಿತ ಹಾಗೂ ಪರಿಸರ ಮಾಲಿನ್ಯ ಮಂಡಳಿಯವರಿಗೆ ದೂರನ್ನೂ ನೀಡಿದ್ದರು. ಈ ದೂರಿನನ್ವಯ ಕಂದಾಯ ಇಲಾಖೆ, ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಕ್ರಷರ್‌ ಮಾಲೀಕರಿಗೆ ಕೂಡಲೆ ಗಣಿಗಾರಿಕೆಯನ್ನು ಸ್ಥಗಿತಗೊಳಿಸುವಂತೆ ನೋಟಿಸ್ ನೀಡಿದ್ದರು. 

ಆದರೆ ಕ್ರಷರ್ ನಡೆಸುತ್ತಿದ್ದವರು ಈ ನೋಟಿಸಿಗೆ ಯಾವುದೇ ಪ್ರತ್ಯುತ್ತರ ನೀಡಿರಲಿಲ್ಲ. ಅಂತೆಯೇ  ಕ್ರಷರ್ ಅನ್ನು ನಿರಂತರವಾಗಿ ನಡೆಸಿಕೊಂಡು ಹೋಗುತ್ತಿದ್ದರು. ಏತನ್ಮಧ್ಯೆ ಪರಿಸರ ಮಾಲಿನ್ಯ ಮಂಡಳಿಯು ಸಾರ್ವಜನಿಕರು ನೀಡಿದ ದೂರಿ ನನ್ವಯ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿತು. ಪರಿಸರ ಮಾಲಿನ್ಯ ಆಗುತ್ತಿರುವುದು ಹಾಗೂ ಕ್ರಷರ್ ನಡೆಸುವುದಕ್ಕೆ ಪರಿಸರ ಇಲಾಖೆಯಿಂದ ಯಾವುದೇ ಅನುಮತಿಯನ್ನೂ ಪಡೆಯದೆ ಅಕ್ರಮವಾಗಿ ನಡೆಸುತ್ತಿದ್ದುದು ಮನದಟ್ಟಾಗಿತ್ತು. ಕೂಡಲೇ ಕ್ರಷರ್ ಸ್ಥಗಿತಗೊಳಿಸುವಂತೆ ಜಿಲ್ಲಾಡಳಿತಕ್ಕೆ ದೂರು ನೀಡಿತ್ತು.

ಈ ದೂರಿನ ಅನ್ವಯ ಜಿಲ್ಲಾಧಿಕಾರಿಗಳು ಈ ಜಂಟಿ ಕಾರ್ಯಾಚರಣೆಗೆ ಆದೇಶಿಸಿದ್ದರು’ ಎಂದು ತಹಶೀಲ್ದಾರ್‌    ಡಾ.ದಾಕ್ಷಾಯಣಿ ವಿವರಿಸಿದರು.
ಕಾರ್ಯಾಚರಣೆಯಲ್ಲಿ ಕಂದಾಯ ಇಲಾಖೆಯ ಆರ್.ಐ.ಜಗದೀಶ್‌ ಮತ್ತು ಸಿಬ್ಬಂದಿ, ಪೋಲಿಸ್ ಇಲಾಖೆಯ ಎಸ್.ಐ.ಕುಮಾರ್ ಮತ್ತು ಸಿಬ್ಬಂದಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ಪರಿಸರ ಮಾಲಿನ್ಯ ಮಂಡಳಿಯ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.