ADVERTISEMENT

ಅಧ್ಯಕ್ಷರ ಹೇಳಿಕೆಗೆ ಗ್ರಾಮಸ್ಥರ ಆಕ್ಷೇಪ

ಸಾತನೂರು ಗ್ರಾಮ ಪಂಚಾಯ್ತಿಗೆ ಮುತ್ತಿಗೆ, ಮಾತಿನ ಚಕಮಕಿ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2012, 11:04 IST
Last Updated 12 ಡಿಸೆಂಬರ್ 2012, 11:04 IST

ಕನಕಪುರ: ಕುಡಿಯುವ ನೀರಿನ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಸೋಮವಾರ ಚಿಕ್ಕಾಲಹಳ್ಳಿ ಗ್ರಾಮಸ್ಥರು ಗ್ರಾಮ ಪಂಚಾಯಿತಿಗೆ ಮುತ್ತಿಗೆ ಹಾಕಲು ಪ್ರಯತ್ನಿಸಿ ಅಧ್ಯಕ್ಷರೊಂದಿಗೆ ತೀವ್ರ ಮಾತಿನ ಚಕಮಕಿ ನಡೆಸಿದರು.

ಪಂಚಾಯಿತಿಗೆ ದಿಢೀರನೆ ಮುತ್ತಿಗೆ ಹಾಕಿದ ಗ್ರಾಮಸ್ಥರು `ಚಿಕ್ಕಾಲಹಳ್ಳಿ ಗ್ರಾಮದ ಕಿಡಿಗೇಡಿಗಳು ಕುಡಿಯುವ ನೀರಿಗೆ ಸಂಬಂಧಿಸಿದಂತೆ ತೊಂದರೆ ನೀಡುತ್ತಿದ್ದಾರೆ ಎಂದು ಆರೋಪಿಸಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಸ್.ಡಿ.ಚಂದ್ರಶೇಖರ್ ನೀಡಿರುವ ಹೇಳಿಕೆ ಖಂಡನೀಯ. ಇಂತಹ ಹೇಳಿಕೆಯನ್ನು ಸಹಿಸಲು ಸಾಧ್ಯವಿಲ್ಲ' ಎಂದು ಅಧ್ಯಕ್ಷರನ್ನು ತರಾಟೆಗೆ ತೆಗೆದುಕೊಂಡರು.

ಈ ಹಂತದಲ್ಲಿ ಅಧ್ಯಕ್ಷರು ಮತು ಗ್ರಾಮಸ್ಥರ ನಡುವೆ ಸ್ವಲ್ಪ ಕೆಲಕಾಲ ತೀವ್ರ ವಾಗ್ವಾದ ನಡೆಯಿತು. ನಂತರ ಅಧ್ಯಕ್ಷರು ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವ ಜತೆಗೆ ಕೊಳವೆ ಬಾವಿಯನ್ನು ಮುಚ್ಚಿರುವುದಕ್ಕೆ ಕ್ರಮ ಕೈಕೊಳ್ಳುವ ಭರವಸೆ ನೀಡಿದರು. ಈ ಮಾತಿಗೆ ಮತ್ತಷ್ಟು ಕೆರಳಿದ ಗ್ರಾಮಸ್ಥರು `ಇಲ್ಲಿಯವರೆಗೂ ಯಾವ ಕ್ರಮವನ್ನೂ ಕೈಗೊಳ್ಳದೆ ಇರುವಾಗ ಮುಂದಿನ್ಯಾವ ಕ್ರಮ ಕೈಗೊಳ್ಳುತ್ತೀರಾ' ಎಂದು ಖಾರವಾಗಿ ಪ್ರಶ್ನಿಸಿದರು.

`ಸಾತನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ದೇವಿರಮ್ಮನ ದೊಡ್ಡಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಹಾಗಾಗಿ ಚಿಕ್ಕಾಲಹಳ್ಳಿ ಗ್ರಾಮದಲ್ಲಿರುವ ಕೊಳವೆ ಬಾವಿಗೆ ಹೊಸ ಮೋಟಾರ್ ಅಳವಡಿಸಲು ಹೋದಾಗ ಕೆಲವು ಕಿಡಿಗೇಡಿಗಳು ಅದಕ್ಕೆ ಅವಕಾಶ ನೀಡದೆ ತಡೆ ಒಡ್ಡಿದ್ದಾರೆ ಎಂದು ಅಧ್ಯಕ್ಷರು ಮಾಡಿರುವ ಆರೋಪದಲ್ಲಿ ಹುರುಳಿಲ್ಲ' ಎಂದು ಪ್ರತಿಭಟನಾಕಾರರು ದೂರಿದರು.

`ಹೊಸ ಮೋಟಾರು ಅಳವಡಿಸಬೇಡಿ ಎಂದು ನಾವು ಹೇಳಲಿಲ್ಲ. ಸಿಂಗಲ್‌ಫೇಸ್ ಮೋಟಾರ್‌ನಲ್ಲಿ ನೀರು ಪೂರೈಕೆಯಾಗುವುದಿಲ್ಲ. ಕೊಳವೆ ಬಾವಿಯಲ್ಲಿ ನೀರಿನ ಗುಣಮಟ್ಟ ಉತ್ತಮವಾಗಿದೆ. ಹಾಗಾಗಿ ಒಳ್ಳೆಯ ಗುಣಮಟ್ಟದ 10 ಎಚ್.ಪಿ. ಮೋಟಾರನ್ನು ಅಳವಡಿಸಿ. ಆಗ ದೇವಿರಮ್ಮನ ದೊಡ್ಡಿಗೂ ನೀರು ಪೂರೈಕೆಯಾಗುತ್ತದೆ ಎಂದು ಸಲಹೆ ಮಾಡಿದ್ದೆವು. ಆದರೆ ಅಧ್ಯಕ್ಷರು ಅದಕ್ಕೆ ಮುಂದಾಗದೆ ದೇವಿರಮ್ಮನ ದೊಡ್ಡಿಗೆ ನೀರು ಕೊಡಿಸುವಲ್ಲಿ ವಿಫಲರಾಗಿ ಈ ರೀತಿ ಆರೋಪ ಮಾಡಿದ್ದಾರೆ' ಎಂದು ಆರೋಪಿಸಿದರು.

`ಮುಂದಿನ ಅಧ್ಯಕ್ಷರ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ದೇವಿರಮ್ಮನ ದೊಡ್ಡಿ ಮತ್ತು ಚಿಕ್ಕಾಲಹಳ್ಳಿ ಗ್ರಾಮಸ್ಥರ ನಡುವೆ ವೈಮನಸ್ಸು ಮೂಡಿಸಲೆಂದು ಅಧ್ಯಕ್ಷರು ಈ ರೀತಿಯ ಹೇಳಿಕೆ ನೀಡುತ್ತಿದ್ದಾರೆ. ಚಿಕ್ಕಾಲಹಳ್ಳಿ ಗ್ರಾಮದಲ್ಲಿ ಆರು ತಿಂಗಳ ಹಿಂದೆ ಪುಟ್ಟೇಗೌಡ ಎಂಬುವವರು ತಮ್ಮ ಮನೆ ಮುಂದೆ ಇದ್ದಂತಹ ಕೊಳವೆ ಬಾವಿಗೆ ಕಲ್ಲುಮಣ್ಣು ತುಂಬಿ ಮುಚ್ಚಿದ್ದಾರೆ. ಅದರ ವಿರುದ್ಧ ಕ್ರಮ ಕೈಕೊಳ್ಳುವಂತೆ ಲಿಖಿತ ದೂರು ನೀಡಿದ್ದರೂ ಅಧ್ಯಕ್ಷರು ಯಾವುದೇ ಕ್ರಮ ಕೈಕೊಂಡಿಲ್ಲ' ಎಂದು ಸಿದ್ದೇಶಕುಮಾರ್, ಸ್ಟುಡಿಯೊ ರಾಜು, ಸದಸ್ಯ ನಾಗರಾಜು, ಮಂಜು, ಶಿವಣ್ಣ, ಶಿವು, ಲೋಕೇಶ್, ಮುತ್ತರಾಜು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.