ADVERTISEMENT

`ಅನ್ನಭಾಗ್ಯ ಎಂದರೆ ಬಡವರ ಭಿಕ್ಷಾಟನೆ'

​ಪ್ರಜಾವಾಣಿ ವಾರ್ತೆ
Published 17 ಜುಲೈ 2013, 5:25 IST
Last Updated 17 ಜುಲೈ 2013, 5:25 IST

ರಾಮನಗರ: ಮುಂಬರುವ ಲೋಕಸಭಾ ಚುನಾವಣೆಯನ್ನು ಕೇಂದ್ರೀಕರಿಸಿಕೊಂಡು ಕೇಂದ್ರದ ಯುಪಿಎ ಮತ್ತು ರಾಜ್ಯದ ಕಾಂಗ್ರೆಸ್ ಸರ್ಕಾರ ಅಗ್ಗದ ದರದಲ್ಲಿ ಮುಗ್ಗಲು ಅಕ್ಕಿಯನ್ನು ಬಡಜನರಿಗೆ ನೀಡುತ್ತಿದೆ ಎಂದು ಬಹುಜನ ಸಮಾಜ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ್ ಆರೋಪಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಡಜನರಿಗೆ ಆಮಿಷಗಳನ್ನು ಒಡ್ಡುವ ಮೂಲಕ ಕೇಂದ್ರದಲ್ಲಿ ಮತ್ತೊಂದು ಅವಧಿಗೆ ಅಧಿಕಾರವನ್ನು ಹಿಡಿಯಲು ಸೋನಿಯಾಗಾಂಧಿ, ರಾಹುಲ್‌ಗಾಂಧಿ ನೇತೃತ್ವದ ಕಾಂಗ್ರೆಸ್ ಪಕ್ಷ ಹವಣಿಸುತ್ತಿರುವುದು ನಯವಂಚಕತನಕ್ಕೆ ಸಾಕ್ಷಿಯಾಗಿದೆ ಎಂದು ಕಿಡಿಕಾರಿದರು.

ಬಡವರು ಮತ್ತು ಹಿಂದುಳಿದ ಧಾರ್ಮಿಕ ಅಲ್ಪಸಂಖ್ಯಾತರನ್ನು ಮೋಸದ ಸುಳಿಗೆ ತಳ್ಳುತ್ತಲೇ ಬಂದಿರುವ ಕಾಂಗ್ರೆಸ್ಸಿಗರು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೂಲಕ ಒಂದು ರೂಪಾಯಿಗೆ ಅಗ್ಗದ ಮುಗ್ಗಲು ಅಕ್ಕಿ ನೀಡುವ ಮಾಡುವ ಮೂಲಕ ಬಡಜನರನ್ನು ಆಕರ್ಷಿಸಿ, ನೂತನ ಭಿಕ್ಷಾಟನೆಗೆ ಇಳಿಸಿದ್ದಾರೆ ಎಂದು ಆಪಾದಿಸಿದರು.

ಬಡ ಜನರಿಗೆ ಮುಗ್ಗಲು ಅಕ್ಕಿಯನ್ನು ನೀಡಿ ಕುಟುಂಬದ ಮಕ್ಕಳನ್ನು ಅಪೌಷ್ಠಿಕತೆಗೆ ನೂಕುತ್ತಿದ್ದಾರೆ. ಯುವ ಸಮುದಾಯದ ನಿರುದ್ಯೋಗಿಗಳಿಗೆ ಸರ್ಕಾರಿ ಉದ್ಯೋಗ ಕೂಡದೇ ಅವರ ವೃದ್ಧಾಪ್ಯದ ತಂದೆ ತಾಯಿಗಳಿಗೆ ನರೇಗಾ ಯೋಜನೆಯಲ್ಲಿ ಕೂಲಿಗೆ ಹಾಕಲಾಗುತ್ತಿದೆ. ದೇಶದ ಬಡಜನರು ಶೋಷಿತರು ಯಾವಾಗಲೂ ಏನನ್ನಾದರೂ ಬೇಡಿ ಪಡೆಯುತ್ತಾ ಗೋಗರೆಯುತ್ತಾ ಪರಾವಲಂಬಿಗಳಾಗಿ ಬಿದ್ದಿರಬೇಕು ಎಂಬ ಯಜಮಾನಿಕೆಯ ನೀತಿಯನ್ನು ಜಾರಿಯಲ್ಲಿಟ್ಟಿರುವುದು ದೇಶದ ಜನರಿಗೆ ಎಸಗಿದ ದ್ರೋಹವಾಗಿದೆ ಎಂದು ಅವರು ಕಿಡಿಕಾರಿದರು.

ಕೇಂದ್ರದ ಯುಪಿಎ ಮತ್ತು ರಾಜ್ಯ ಸರ್ಕಾರಗಳಿಗೆ ನಿಜಕ್ಕೂ ಬದ್ಧತೆ ಮತ್ತು ಜವಾಬ್ದಾರಿಗಳಿದ್ದರೆ ಕೂಡಲೇ ತಮ್ಮ ಜನಪ್ರಿಯತೆ ಹೆಚ್ಚಿಸಿಕೊಳ್ಳಲು ಮಾಡುತ್ತಿರುವ ಹುಚ್ಚು ಘೋಷಣೆಗಳನ್ನು ಬಿಟ್ಟು ಎಲ್ಲಾ ಇಲಾಖೆಗಳಲ್ಲಿ ಖಾಲಿ ಇರುವ ಬ್ಯಾಕ್‌ಲಾಗ್ ಹುದ್ದೆಗಳನ್ನು ತಕ್ಷಣ ತುಂಬಲಿ.

ರೈತರು, ದಲಿತರು, ದುರ್ಬಲರಿಗೆ ಬಗರ್ ಹುಕುಂ ಸಾಗುವಳಿ ಮಾಡುತ್ತಿರುವವರಿಗೆ ಸಾಗುವಳಿ ಚೀಟಿ ನೀಡಲಿ, ಅಪೌಷ್ಟಿಕತೆಯಿಂದ ನರಳುತ್ತಿರುವ ಮಕ್ಕಳಿಗೆ ಪೌಷ್ಟಿಕ ಆಹಾರ ನೀಡಲಿ, ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಿ ಹಾಸ್ಟೆಲ್ ವ್ಯವಸ್ಥೆ ಕಲ್ಪಿಸಿ, ಊಟೋಪಚಾರಗಳನ್ನು ಸರಿಯಾಗಿ ನೀಡಲಿ ಎಂದು ಅವರು ಒತ್ತಾಯಿಸಿದರು.

ಬಿಎಸ್‌ಪಿ ತಾಲ್ಲೂಕು ಘಟಕದ ಅಧ್ಯಕ್ಷ ನೇರಳಳ್ಳಿದೊಡ್ಡಿ ಕೃಷ್ಣಪ್ಪ, ಮುಖಂಡರಾದ ಶಿವಮಾದು, ಹರಿಹರ ಬಸವರಾಜು, ನಾಗರಾಜು, ಮುನಿಮಲ್ಲಯ್ಯ, ಮುನಿರಾಜು, ಸಿದ್ದರಾಜು, ಗುರು, ವಿ.ಜಿ. ರವಿಚಂದ್ರ ಇತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.