ADVERTISEMENT

ಅಭಿವೃದ್ಧಿಯಿಂದ ವಂಚಿತಗೊಂಡ ಕನಕಪುರ: ವಿಷಾದ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2011, 18:30 IST
Last Updated 14 ಫೆಬ್ರುವರಿ 2011, 18:30 IST

ಕನಕಪುರ: ರಾಜಧಾನಿಯಿಂದ ಕೇವಲ 50 ಕಿ.ಮೀ. ಅಂತರದಲ್ಲಿರುವ ಕನಕಪುರ ತಾಲ್ಲೂಕು ಅತ್ಯಂತ ಹಿಂದುಳಿದ ತಾಲ್ಲೂಕು ಆಗಿರುವುದು ದುರಂತದ ಸಂಗತಿ ಎಂದು ಕುಕ್ಕುಟ ಮಹಾಮಂಡಳಿ ನಿರ್ದೇಶಕ ಬಿ.ನಾಗರಾಜು ಇಲ್ಲಿ ವಿಷಾದಿಸಿದರು.

ತಾಲ್ಲೂಕು ಕಚೇರಿ ಮುಂಭಾಗದಲ್ಲಿ ತಾಲ್ಲೂಕು ರೈಲ್ವೆ ಹೋರಾಟ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಸಾರ್ವಜನಿಕ ಜನಜಾಗೃತಿ ರ್ಯಾಲಿ ಉದ್ದೇಶಿಸಿ ಅವರು ಮಾತನಾಡಿ, ರಾಜಧಾನಿಯಿಂದ 400-500 ಕಿ.ಮೀ.ಶಾಸಕರ ನಿರ್ಲಕ್ಷ್ಯದಿಂದ ಅಭಿವೃದ್ಧಿಯಾಗಿಲ್ಲ.ಕನಕಪುರ ತಾಲ್ಲೂಕು ಸಹ ಈಗ ಅದೇ ಹಾದಿಯಲ್ಲಿರುವುದು ನಮ್ಮ ದೌರ್ಭಾಗ್ಯ ಎಂದರು. 

ಪ್ರಭಾವಿ ನಾಯಕರು ಈ ತಾಲ್ಲೂಕಿನಿಂದ ಗೆದ್ದು ಅಧಿಕಾರದ ಗದ್ದುಗೆ ಏರಿದ್ದರೂ, ತಾಲ್ಲೂಕಿನ ಅಭಿವೃದ್ಧಿಗೆ ಶ್ರಮಿಸದಿರುವುದು ದುರದೃಷ್ಟಕರ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಬೆಂಗಳೂರಿನಿಂದ ಕನಕಪುರ ಮಾರ್ಗವಾಗಿ ಸತ್ಯಮಂಗಲಕ್ಕೆ ರೈಲ್ವೆ ಮಾರ್ಗವನ್ನು ಸರ್ವೇ ಮಾಡಿಸಿದ್ದರು.ಆ ಸಂದರ್ಭದಲ್ಲಿ ಕರ್ನಾಟಕದ ಗಡಿ ಭಾಗದವರೆಗೂ ಸರ್ವೇ ಕಾರ್ಯ ಮುಗಿದಿತ್ತು. ತಮಿಳುನಾಡು ಅರಣ್ಯ ಪ್ರದೇಶದಲ್ಲಿ ಸರ್ವೇ ಕಾರ್ಯ ನೆನೆಗುದಿಗೆ ಬಿದ್ದಿದ್ದರಿಂದ ನಂತರದ ದಿನಗಳಲ್ಲಿ ರಾಜ್ಯ ಸರ್ಕಾರವಾಗಲಿ, ಕೇಂದ್ರ ಸರ್ಕಾರವಾಗಲಿ ಇದರ ಕಡೆಗೆ ಗಮನಹರಿಸಿಲ್ಲ ಎಂದು ಆರೋಪಿಸಿದರು.

ಜಯಕರ್ನಾಟಕ ಸಂಘಟನೆ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಮಾತನಾಡಿ, ಕಳೆದ 40 ವರ್ಷಗಳಿಂದ ಕೊಟ್ಟಂತಹ ಭರವಸೆಗಳ ಇಂದಿಗೂ ಭರವಸೆಯಾಗಿಯೇ ಉಳಿದಿವೆ.ಬೆಂಗಳೂರಿನಿಂದ ಸತ್ಯಮಂಗಲಕ್ಕೆ ಕನಕಪುರ ಮಾರ್ಗವಾಗಿ ರೈಲು ಮಾರ್ಗವನ್ನು ನಿರ್ಮಿಸಲು 1991ರಲ್ಲೇ ಸರ್ವೇ ಕಾರ್ಯ ಮಾಡಲು ಕನಕಪುರದಲ್ಲಿ ನಡೆದ ತಾಲ್ಲೂಕು ಸಾಹಿತ್ಯ ಸಮ್ಮೇಳನದಲ್ಲಿ ನಿರ್ಣಯ ಕೈಗೊಳ್ಳಲಾಯಿತು. ಆದರೂ ಸಹ ಇಲ್ಲಿಯವರೆಗೂ ರೈಲ್ವೆಮಾರ್ಗದ ಅನುಷ್ಠಾನದ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದರು.

ಜೆಡಿಎಸ್‌ನ ತಾಲ್ಲೂಕು ಅಧ್ಯಕ್ಷ ಸಿದ್ದಮರೀಗೌಡ, ಬಿಎಸ್‌ಪಿ. ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ್, ಕರವೇ ತಾಲ್ಲೂಕು ಅಧ್ಯಕ್ಷ ಕಬ್ಬಾಳೇಗೌಡ, ರೈತ ಸಂಘದ ಮುಖಂಡ ಕೆ.ಬಿ.ನಾಗರಾಜು, ಕೃಷಿ ಉತ್ಪನ್ನ ಮಾರುಕಟ್ಟೆ ವರ್ತಕ ಸಂಘದ ಅಧ್ಯಕ್ಷ ಗೋವಿಂದಪ್ಪ, ಎ.ಪಿ.ಕೃಷ್ಣಪ್ಪ ಈ ಹೋರಾಟವನ್ನು ಜನಾಂದೋಲನವಾಗಿ ರೂಪಿಸ ಬೇಕು ಎಂದರು.

ರೈಲ್ವೆ ಹೋರಾಟ ಸಮಿತಿ ಅಧ್ಯಕ್ಷ ಆನಮಾನಹಳ್ಳಿ ನಾಗರಾಜು, ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಸಂಪತ್ ಕುಮಾರ್, ಪುರಸಭೆ ಸದಸ್ಯ ನಾಗಾನಂದ, ಕೃಷಿ ಉತ್ಪನ್ನ ಮಾರುಕಟ್ಟೆ ವರ್ತಕರ ಸಂಘದ ಕಾರ್ಯದರ್ಶಿ ವೆಂಕಟೇಶ್, ರೈತ ಯುವ ಮುಖಂಡ ಸಂತೋಷ್ ಕುಮಾರ್, ಜಯಕರ್ನಾಟಕದ ತಾಲ್ಲೂಕು ಅಧ್ಯಕ್ಷ ರಾಮಚಂದ್ರ,  ಕರವೇ ಅಂದಾನಿಗೌಡ ಪ್ರಗತಿಪರ ಸಂಘಟನೆಗಳ ಮುಖಂಡರು ರ್ಯಾಲಿಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.