ADVERTISEMENT

ಅಭಿವೃದ್ಧಿ ಕಾಣದ ಸಹಕಾರಿ ಬ್ಯಾಂಕ್

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2012, 2:55 IST
Last Updated 17 ನವೆಂಬರ್ 2012, 2:55 IST

ಕನಕಪುರ: `ರಾಷ್ಟ್ರೀಕೃತ ಹಾಗೂ ಖಾಸಗಿ ಬ್ಯಾಂಕುಗಳು ಅಭಿವೃದ್ಧಿ ಹೊಂದುತ್ತಿರುವ ಸಂದರ್ಭದಲ್ಲಿಯೂ ಸಹಕಾರಿ ಕ್ಷೇತ್ರದ ಬ್ಯಾಂಕುಗಳು ಅಭಿವೃದ್ಧಿ ಕಾಣದೆ ಹಿಂದುಳಿಯುತ್ತಿವೆ~ ಎಂದು ಪ್ರಾಥಮಿಕ ಭೂ ಅಭಿವೃದ್ಧಿ ಬ್ಯಾಂಕಿನ ಅಧ್ಯಕ್ಷ ಜೆ. ನಟರಾಜು ಬೇಸರ ವ್ಯಕ್ತಪಡಿಸಿದರು. 

 ಪಟ್ಟಣದ ಟೌನ್ ಟೆನ್ನಿಸ್ ಕ್ಲಬ್‌ನಲ್ಲಿ ನಡೆದ 59ನೇ ಅಖಿಲ ಭಾರತ ಸಹಕಾರಿ ಸಪ್ತಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, `ಆರ್ಥಿಕ ವ್ಯವಸ್ಥೆಗೆ ಅನುಗುಣವಾಗಿ ರಾಷ್ಟ್ರೀಕೃತ ಬ್ಯಾಂಕುಗಳು ಬದಲಾವಣೆ ಹೊಂದಿ ಅಭಿವೃದ್ಧಿಯತ್ತ ದಾಪುಗಾಲು ಹಾಕುತ್ತಿವೆ.
 
ಬದಲಾದ ಪರಿಸ್ಥಿತಿಗೆ ತಕ್ಕಂತೆ ಬ್ಯಾಂಕುಗಳನ್ನು ಮಾರ್ಪಾಡು ಮಾಡಿಕೊಂಡು ಗ್ರಾಹಕರನ್ನು ಆಕರ್ಷಿಸುತ್ತಾ ಬ್ಯಾಂಕುಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ಆದರೆ ಸಹಕಾರಿ ಕ್ಷೇತ್ರದ ಬ್ಯಾಂಕುಗಳು ಹಿಂದಿನಮಾನದಂಡವನ್ನೇ ಅನುಸರಿಸಿ ವ್ಯವಹರಿಸುತ್ತಿರುವುದರಿಂದ ಪೈಪೋಟಿಗೆ ತಕ್ಕಂತೆ ಸವಾಲುಗಳನ್ನು ಸಮರ್ಥವಾಗಿ ಎದುರಿಸಿ ಅಭಿವೃದ್ಧಿಹೊಂದಲು ಸಾಧ್ಯವಾಗುತ್ತಿಲ್ಲ~ ಎಂದರು. 

 ಅರ್ಬನ್ ಬ್ಯಾಂಕಿನ ಉಪಾಧ್ಯಕ್ಷ ಗೋವಿಂದರಾಜು ಮಾತನಾಡಿ, ಒಂದು ಸಂಸ್ಥೆಯನ್ನು ಕಟ್ಟಿ ನಿಸ್ವಾರ್ಥ ಸೇವೆಯಿಂದ ದುಡಿದಾಗ ಮಾತ್ರ ಆ ಸಂಸ್ಥೆಯು ಅಭಿವೃದ್ಧಿ ಹೊಂದಲು ಸಾಧ್ಯ. ಅರ್ಬನ್ ಕೋ-ಆಪರೇಟಿವ್ ಸೊಸೈಟಿಯು ಸಂಸ್ಥೆಯ ಆಡಳಿತ ಮಂಡಳಿಯ ಜೊತೆಗೆ ಬ್ಯಾಂಕ್ ಸಿಬ್ಬಂದಿ ಮತ್ತು ಗ್ರಾಹಕರ ಸಹಕಾರದಿಂದ ಉತ್ತಮವ್ಯವಹಾರದೊಂದಿಗೆ ಲಾಭಾಂಶದಲ್ಲಿ ನಡೆಯುತ್ತಿದೆ ಎಂದರು. 

ಅರ್ಬನ್ ಬ್ಯಾಂಕಿನ ಮಾಜಿ ಅಧ್ಯಕ್ಷ ರಾಮಚಂದ್ರ ಮಾತನಾಡಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಸಹಕಾರಿ ಕ್ಷೇತ್ರವು ಅಭಿವೃದ್ಧಿಯಾಗಿದೆ. ಸಹಕಾರಿ ಕ್ಷೇತ್ರದಿಂದ ಜನತೆಗೆ ಉಪಯೋಗವಿರುವುದರಿಂದ ಇಲ್ಲಿಯೂ ಅದನ್ನು ಅಭಿವೃದ್ಧಿ ಪಡಿಸಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರಾಮನಗರ ಜಿಲ್ಲಾ ಸಹಕಾರಿ ಸಂಘಗಳ ಉಪ ನಿಬಂಧಕ ಕೆ.ಎಸ್. ನರಸಿಂಹ ಮೂರ್ತಿ ಮಾತನಾಡಿದರು. ಕಾರ್ಯದರ್ಶಿ ರಾಮಚಂದ್ರ, ಅಪ್ಪಾಜಿಗೌಡ  ಮೊದಲಾದವರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.