ADVERTISEMENT

ಅಭಿವೃದ್ಧಿ ಹೆಸರಿನಲ್ಲಿ ಪರಿಸರ ನಾಶ: ಆತಂಕ

​ಪ್ರಜಾವಾಣಿ ವಾರ್ತೆ
Published 6 ಜೂನ್ 2017, 10:12 IST
Last Updated 6 ಜೂನ್ 2017, 10:12 IST
ಕನಕಪುರ ನಗರದ ನ್ಯಾಯಾಲಯದ ಆವರಣದಲ್ಲಿ ನ್ಯಾಯಾಧೀಶ ಮಹಮ್ಮದ್‌ ಮುಜಾಹಿದ್‌ವುಲ್ಲಾ ಸಸಿ ನೆಟ್ಟರು. ಡಿ.ವೇಣುಗೋಪಾಲ್‌, ಕೆ.ನಂಜೇಗೌಡ, ಗೀತಾಮಣಿ, ನಾಗಮ್ಮ, ಹೇಮಶ್ರೀ ಉಪಸ್ಥಿತರಿದ್ದರು
ಕನಕಪುರ ನಗರದ ನ್ಯಾಯಾಲಯದ ಆವರಣದಲ್ಲಿ ನ್ಯಾಯಾಧೀಶ ಮಹಮ್ಮದ್‌ ಮುಜಾಹಿದ್‌ವುಲ್ಲಾ ಸಸಿ ನೆಟ್ಟರು. ಡಿ.ವೇಣುಗೋಪಾಲ್‌, ಕೆ.ನಂಜೇಗೌಡ, ಗೀತಾಮಣಿ, ನಾಗಮ್ಮ, ಹೇಮಶ್ರೀ ಉಪಸ್ಥಿತರಿದ್ದರು   

ಕನಕಪುರ: ‘ಜನಸಂಖ್ಯಾ ಸ್ಫೋಟದಿಂದ ಅಭಿವೃದ್ಧಿ ಹೆಸರಿನಲ್ಲಿ ಪರಿಸರ ನಾಶವಾಗುತ್ತಿದೆ, ವಾತಾವರಣ ಕಲುಷಿತವಾಗುತ್ತಿದ್ದು ಆದರೂ ಪ್ರಕೃತಿಯನ್ನು ಉಳಿಸಿಕೊಳ್ಳುವ ಕೆಲಸ ನಮ್ಮಿಂದ ಆಗುತ್ತಿಲ್ಲ’ ಎಂದು ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ಮಹಮ್ಮದ್‌ ಮುಜಾಯಿದ್‌ವುಲ್ಲಾ ಬೇಸರ ವ್ಯಕ್ತಪಡಿಸಿದರು.

ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಹಾಗೂ ಅರಣ್ಯ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ಸಸಿ ನೆಡುವ ಕಾರ್ಯಕ್ರಮದಲ್ಲಿ ಮಾತನಾಡಿದರು.

ವೈಜ್ಞಾನಿಕವಾಗಿ ಮುಂದುವರಿಯುತ್ತಿರುವ ನಾವು ಬೇಡಿಕೆಗೆ ಅನುಸಾರವಾಗಿ ಪ್ರಕೃತಿಯನ್ನು ನಾಶಮಾಡಿ ಅಭಿವೃದ್ಧಿಯ ಹೆಸರಿನಲ್ಲಿ ಮರ ಗಿಡಗಳನ್ನು ಕಡಿಯುತ್ತಿದ್ದೇವೆ, ಪರಿಸರ ಕಲುಷಿತಗೊಳಿಸುತ್ತಿದ್ದೇವೆ. ಪ್ರಕೃತಿಯ ಮೇಲೆ ಆಗುತ್ತಿರುವ ಅಕ್ರಮ ಚಟುವಟಿಕೆ ತಡೆಯಬೇಕಿದೆ, ಮನುಷ್ಯನಾಗಿ ಸಮಾಜ ಉಳಿಸುವ ಕೆಲಸ ಮಾಡದಿದ್ದರೆ ಮುಂದೆ ಆಪತ್ತು ಸಂಭವಿಸಲಿದೆ’ ಎಂದು ಎಚ್ಚರಿಸಿದರು.

ADVERTISEMENT

ವಕೀಲರ ಸಂಘದ ಅಧ್ಯಕ್ಷ ಕೆ.ನಂಜೇಗೌಡ ಮಾತನಾಡಿ ಪ್ರಕೃತಿಯನ್ನು ಪ್ರಕೃತಿಯಾಗಿಯೇ ಉಳಿಸುವ ಕೆಲಸ ಮಾಡುವುದನ್ನು ಬಿಟ್ಟು ಅದಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದೇವೆ. ನೈಸರ್ಗಿಕವಾಗಿ ದೊರೆಯುತ್ತಿದ್ದ ಹಾಗೂ ಬೆಳೆಯುತ್ತಿದ್ದ ಆಹಾರ ಪದಾರ್ಥಗಳನ್ನು ಬಿಟ್ಟು ಎಲ್ಲವನ್ನು ಕೃತಕವಾಗಿ ಪಡೆಯಲು ಹೋಗಿ ಆರೋಗ್ಯವನ್ನೇ ಕಳೆದುಕೊಂಡಿದ್ದೇವೆ. ದುರಾಸೆಯನ್ನು ಬಿಟ್ಟು ಪ್ರಕೃತಿಯನ್ನು ಉಳಿಸಬೇಕಿದೆ ಎಂದರು.

ವಲಯ ಅರಣ್ಯಾಧಿಕಾರಿ ದಿನೇಶ್‌ ಪರಿಸರ ಸಂರಕ್ಷಣೆ ಕುರಿತು ಉಪನ್ಯಾಸ ನೀಡಿ, ಕಾಡಿನ ರಕ್ಷಣೆಯೇ ಪ್ರಕೃತಿಯ ರಕ್ಷಣೆಯಾಗಿದೆ, ಸಮಾಜದಲ್ಲಿ ಎಲ್ಲವೂ ಸಮತೋಲವಾಗಿರಬೇಕಾದರೆ ವನ್ಯಜೀವಿ ಮತ್ತು ಕಾಡು ಸಮೃದ್ಧವಾಗಿರಬೇಕು ಎಂದರು. ಸರ್ಕಾರಿ ಜಾಗ ಸೇರಿದಂತೆ ರೈತರು ತಮ್ಮ ಜಮೀನುಗಳಲ್ಲಿ ಮರಗಳನ್ನು ಬೆಳಸಿ ಅರಣ್ಯೀಕರಣ ಮಾಡಬೇಕೆಂದು ಮನವಿ ಮಾಡಿದರು. 

ಹಿರಿಯ ಸಿವಿಲ್‌ ನ್ಯಾಯಾಧೀಶ ಹಾಗೂ ತಾಲ್ಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷ ಡಿ.ವೇಣುಗೋಪಾಲ್‌, ಪ್ರಧಾನ ಸಿವಿಲ್‌ ನ್ಯಾಯಾಧೀಶ ಗೀತಾಮಣಿ, ಒಂದನೇ ಹೆಚ್ಚುವರಿ ಸಿವಿಲ್‌ ನ್ಯಾಯಾಧೀಶೆ ನಾಗಮ್ಮ ಮಹದೇವಪ್ಪ ಇಚ್ಛಂಗಿ, ಎರಡನೇ ಹೆಚ್ಚುವರಿ ಸಿವಿಲ್‌ ನ್ಯಾಯಾಧೀಶೆ ಡಿ.ಹೇಮಾಶ್ರೀ, ವಕೀಲರ ಸಂಘದ ಉಪಾಧ್ಯಕ್ಷ ಸಿ.ಎಂ.ಜಗದೀಶ್‌, ಸಹಾಯಕ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಬಿ.ನಾರಾಯಣಸ್ವಾಮಿ, ತ್ರಿಶುಲ್‌ಜೈನ್‌, ಹಿರಿಯ ವಕೀಲ ರಾಮಚಂದ್ರ ಮತ್ತಿತರರು ಉಪಸ್ಥಿತರಿದ್ದರು.

* * 

ಜಮೀನುಗಳನ್ನೇ ಪಾಳು ಬಿಟ್ಟಿದ್ದರೂ ದುರಾಸೆಯಿಂದ ಇರುವ ಕಾಡನ್ನು ನಾಶ ಮಾಡಿ ಅರಣ್ಯ ಒತ್ತುವರಿ ಮಾಡಲಾಗುತ್ತಿದೆ. ಇದನ್ನು ತಡೆಯಬೇಕು
ದಿನೇಶ್‌
ವಲಯ ಅರಣ್ಯಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.