ADVERTISEMENT

ಅರಗು ಬಣ್ಣ: ಉಳಿಸಿ ಬೆಳೆಸಲು ಸೂಚನೆ

ಚನ್ನಪಟ್ಟಣದ ಬೊಂಬೆಗಳು ಬರಾಕ್ ಒಬಾಮ ಮನೆಯಲ್ಲಿ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2016, 11:49 IST
Last Updated 10 ಆಗಸ್ಟ್ 2016, 11:49 IST
ಚನ್ನಪಟ್ಟಣದಲ್ಲಿ ಏರ್ಪಡಿಸಿದ್ದ ಧಾನ್ವಿ ಸಾಂಪ್ರದಾಯಿಕ ಕರಕುಶಲ ಸೌಹಾರ್ದ ಪತ್ತಿನ ಸಹಕಾರ ನಿಯಮಿತದ 2015-16ನೇ ಸಾಲಿನ ವಾರ್ಷಿಕ ಮಹಾಸಭೆಯನ್ನು ಅರಗುಬಣ್ಣ ಕಲಾವಿದ  ಕೆಂಚಯ್ಯ ಉದ್ಘಾಟಿಸಿದರು
ಚನ್ನಪಟ್ಟಣದಲ್ಲಿ ಏರ್ಪಡಿಸಿದ್ದ ಧಾನ್ವಿ ಸಾಂಪ್ರದಾಯಿಕ ಕರಕುಶಲ ಸೌಹಾರ್ದ ಪತ್ತಿನ ಸಹಕಾರ ನಿಯಮಿತದ 2015-16ನೇ ಸಾಲಿನ ವಾರ್ಷಿಕ ಮಹಾಸಭೆಯನ್ನು ಅರಗುಬಣ್ಣ ಕಲಾವಿದ ಕೆಂಚಯ್ಯ ಉದ್ಘಾಟಿಸಿದರು   

ಚನ್ನಪಟ್ಟಣ: ಇತ್ತೀಚಿನ ದಿನಗಳಲ್ಲಿ ಕರಕುಶಲ ಕಲೆ ಅವನತಿಯ ಹಾದಿಯತ್ತ ಸಾಗುತ್ತಿರುವುದು ದುಃಖಕರ ಸಂಗತಿಯಾಗಿದೆ ಎಂದು ಅರಗುಬಣ್ಣ ಕಲಾವಿದ ಕೆಂಚಯ್ಯ ವಿಷಾದಿಸಿದರು.

ಪಟ್ಟಣದಲ್ಲಿ ಧಾನ್ವಿ ಸಾಂಪ್ರದಾಯಿಕ ಕರಕುಶಲ ಸೌಹಾರ್ದ  ಪತ್ತಿನ ಸಹಕಾರ ನಿಯಮಿತ  ಹಮ್ಮಿಕೊಂಡಿದ್ದ 2015-16ನೇ ಸಾಲಿನ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿದ ಅವರು, ಅರಗು ಬಣ್ಣದ ಕರಕುಶಲ ಕಲೆಯನ್ನು ಉಳಿಸಿ ಬೆಳೆಸಿಕೊಂಡು ಹೋಗಲು ಕಲಾವಿದರು ಶ್ರಮಿಸಬೇಕಿದೆ ಎಂದರು.

ಚನ್ನಪಟ್ಟಣದಲ್ಲಿ ತಯಾರಾದ ಬೊಂಬೆಗಳು ಅಮೆರಿಕಾದ ಅಧ್ಯಕ್ಷ ಬರಾಕ್ ಒಬಾಮ ನಿವಾಸದಲ್ಲಿ ಜಾಗ ಪಡೆದಿರುವುದು ಹೆಮ್ಮೆಯ ಸಂಗತಿಯಾಗಿದೆ. ಇದು ನಮ್ಮ ಕಲೆಯ ಬೆಲೆಯನ್ನು ಪ್ರಪಂಚಕ್ಕೆ ತೋರಿಸಿಕೊಟ್ಟಂತಾಗಿದೆ. ಕರಕುಶಲ ಕಲೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹೆಚ್ಚಿನ ಒತ್ತು ಕೊಡಬೇಕು ಎಂದರು.

ರೈತ ಮುಖಂಡ ಎಂ.ಡಿ. ಶಿವಕುಮಾರ್ ಮಾತನಾಡಿ, ಆರೋಗ್ಯಕ್ಕೆ ಹಾನಿಕರವಾಗಿರುವ ಬೀಡಿ, ಸಿಗರೇಟ್ ಉದ್ಯಮಕ್ಕೆ ಕೊಡುವ ಉತ್ತೇಜನ ಕರಕುಶಲ ಕಲೆಗೆ ಸಿಗದಿರುವುದು ಕರಕುಶಲಿಗಳಿಗೆ ತೋರಿದ ಅಗೌರವವಾಗಿದೆ. ನಮ್ಮ ಸ್ವದೇಶಿ ಉತ್ಪನ್ನವಾದ ಖಾದಿ ಉದ್ಯಮಕ್ಕೆ ಉತ್ತೇಜನ ಕೊಡುವಂತೆ ಸ್ವದೇಶಿ ಕರಕುಶಲ ಕಲೆಗೂ ಕೊಡಬೇಕಾಗಿದೆ ಎಂದರು.

ಸಂಸ್ಥೆಯ ಉಪಾಧ್ಯಕ್ಷ ಅಪ್ಪಾಜಿಗೌಡ ಮಾತನಾಡಿ, ಗಂಗರ ಕಾಲದಲ್ಲಿ ಚನ್ನಪಟ್ಟಣ ಚಿತ್ತಾರ ಬೀದಿಯಲ್ಲಿ ಜನ್ಮ ತಾಳಿದ ಕರಕುಶಲ ಕಲೆ ಮೈಸೂರು ಅರಸರ ಕಾಲದಲ್ಲಿ ಹೆಚ್ಚಿನ ಉತ್ತೇಜನ ಪಡೆದು, ಟಿಪ್ಪು ಸುಲ್ತಾನರ ಕಾಲದಲ್ಲಿ ಪರ್ಷಿಯಾ ದೇಶಗಳಿಗೆ ನಮ್ಮ ಕರಕುಶಲ ವಿವಿಧ ಆಟಿಕೆಗಳು ರಫ್ತಾಗಲು ಕಾರಣವಾಗಿ ನಂತರ ಇದು ವಿಶ್ವವ್ಯಾಪಿ ಹರಡಿರುವುದು ಹೆಮ್ಮೆಯ ಸಂಗತಿಯಾಗಿದೆ,  ರಾಮನಗರ ಜಿಲ್ಲೆಯಲ್ಲೆ ಸುಮಾರು 14,600 ಕರಕುಶಲಗಳಿಗಳು ತಮ್ಮ ಬದುಕನ್ನು ಕಟ್ಟಿಕೊಳ್ಳುತ್ತಿದ್ದಾರೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಧಾನ್ವಿ ಸಂಸ್ಥೆ ನಿರ್ದೇಶಕ ರಮೇಶ್ ಮಾತನಾಡಿ, ಕರಕುಶಲಿಗಳಿಂದ ಕರಕುಶಲಿಗಳಿಗಾಗಿ, ಕರಕುಶಲಗೋಸ್ಕರವೇ ಜನ್ಮ ತಾಳಿರುವ ಧಾನ್ವಿ ಸಂಸ್ಥೆಯು ಸುಮಾರು ₹4 ಕೋಟಿಗೂ ಹೆಚ್ಚು ಸಾಲ ನೀಡುವಲ್ಲಿ ಯಶಸ್ವಿಯಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸಮಾಜ ಸೇವಕ ಸಿ.ಕೆ.ನಂದೀಶ್, ಜಾನಪದ ಗಾಯಕ ಚೌ.ಪು.ಸ್ವಾಮಿ, ಕಸಾಪ ಕಾರ್ಯದರ್ಶಿ ಮಂಜೇಶ್ ಬಾಬು, ಕೋಶಾಧ್ಯಕ್ಷ ಶ್ರೀನಿವಾಸ ರಾಂಪುರ, ಧಾನ್ವಿ ಬ್ಯಾಂಕ್ ನಿರ್ದೇಶಕರಾದ ಎಸ್.ಪೂರ್ಣಿಮಾ, ಪವಿತ್ರ, ಉಮೇಶ್ ಮುಂತಾದವರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.