ADVERTISEMENT

ಅರ್ಹರಿಗೆ ಪಡಿತರ ಚೀಟಿ ನೀಡಲು ಸೂಚನೆ

ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2013, 9:17 IST
Last Updated 13 ಡಿಸೆಂಬರ್ 2013, 9:17 IST

ರಾಮನಗರ: ‘ಪಡಿತರ ಚೀಟಿಗಾಗಿ ಸಲ್ಲಿಸಿರುವ ಅರ್ಜಿಗಳನ್ನು ಶೀಘ್ರವೇ ಪರಿಶೀಲಿಸಿ ಅರ್ಹರಿಗೆ ಪಡಿತರ ಚೀಟಿ ನೀಡಲು ಕ್ರಮ ಕೈಗೊಳ್ಳಬೇಕು. ಈ ಕುರಿತು ಮುಂದಿನ ಕೆಡಿಪಿ ಸಭೆಗೆ ಸೂಕ್ತ ಮಾಹಿತಿ ನೀಡಬೇಕು’ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಚ್‌.ಸಿ.ರಾಜಣ್ಣ ಅವರು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಅಧಿಕಾರಿಗೆ ಸೂಚಿಸಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರು ವಾರ ನಡೆದ ವಿವಿಧ ಇಲಾಖೆಗಳ ಪ್ರಗತಿ ಪರಿಶೀ ಲನಾ (ಕೆಡಿಪಿ) ಸಭೆಯಲ್ಲಿ ಅವರು ಮಾತನಾ ಡಿದರು.

ಸಭೆಗೆ ಮಾಹಿತಿ ನೀಡಿದ ಆಹಾರ ಮತ್ತು ನಾಗರಿ ಪೂರೈಕೆಯ ಅಧಿಕಾರಿ, ಜಿಲ್ಲೆಯಲ್ಲಿ ಪಡಿತರ ಚೀಟಿಗಾಗಿ 67,948 ಅರ್ಜಿಗಳು ಬಂದಿದ್ದು, ಅದರಲ್ಲಿ 15,818 ಅರ್ಜಿಗಳ ಪರಿಶೀ ಲನಾ ಕೆಲಸ ಮುಗಿದಿದೆ. 4351 ಜನರಿಗೆ ಪಡಿತರ ಚೀಟಿ ನೀಡಲು ಸಿದ್ಧತೆ ನಡೆಸಲಾಗಿದೆ ಎಂದರು.

ಆಗ ಪ್ರತಿಕ್ರಿಯಿಸಿದ ಅಧ್ಯಕ್ಷ ರಾಜಣ್ಣ, ಸುಮಾರು 68 ಸಾವಿರ ಅರ್ಜಿಗಳಲ್ಲಿ ಅರ್ಧದಷ್ಟೂ ಪರಿಶೀಲನಾ ಕೆಲಸ ನಡೆದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ತ್ವರಿತವಾಗಿ ಈ ಕೆಲಸವನ್ನು ಮುಗಿಸಿ ಮುಂದಿನ ಕೆಡಿಪಿ ಸಭೆಯ ವೇಳೆಗೆ ಪ್ರಗತಿ ತಿಳಿಸಬೇಕು ಎಂದು ನಿರ್ದೇಶನ ನೀಡಿದರು.

ಗೇರು ಬೆಳೆಯಲು ಚಿಂತನೆ: ಜಲಾನಯನ ಇಲಾಖೆಯ ವತಿಯಿಂದ ಜಿಲ್ಲೆಯಲ್ಲಿ ಮಾವು ಸಸಿ ವಿತರಣೆ ಕಡಿಮೆ ಮಾಡಿ ಗೇರು ಸಸಿಗಳ ವಿತರಣೆಯನ್ನು ಆರಂಭಿಸುವ ಕುರಿತು ಚಿಂತನೆ ನಡೆದಿದೆ ಎಂದು ಜಿಲ್ಲಾ ಜಲಾನಯನ ಅಧಿಕಾರಿ ಅಶೋಕ್‌ ಸಭೆಗೆ ಮಾಹಿತಿ ನೀಡಿದರು.

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ರೈತರು ಗೇರು ಸಸಿಗಳನ್ನು ಹೆಚ್ಚಿನ ಸಂಖ್ಯೆ ಹಾಕಿದ್ದಾರೆ. ವರ್ಷಕ್ಕೆ ಎರಡು ಬೆಳೆ ಬರುವುದರಿಂದ ಉತ್ತಮ ಆದಾಯವನ್ನು ಇದರಿಂದ ಪಡೆಯಬಹುದು ಎಂದ ಅವರು, ಈ ಸಂಬಂಧ ಜಿಲ್ಲೆಯ 30ರಿಂದ 40 ರೈತರನ್ನು ಚಿಕ್ಕಬಳ್ಳಾಪುರಕ್ಕೆ ಕರೆದುಕೊಂಡು ಹೋಗಿ, ಅಲ್ಲಿ ಗೇರು ಬೆಳೆಯಲಾಗಿರುವ ಪ್ರದೇಶಗಳ ವೀಕ್ಷಣೆ ಮತ್ತು ರೈತರ ಜತೆ ಚರ್ಚೆಗೆ ಆಸ್ಪದ ಕಲ್ಪಿಸಿಕೊಡುವ ಉದ್ದೇಶ ಇದೆ. ಆ ನಂತರ ಜಿಲ್ಲೆಯ ರೈತರು ಯಾವ ರೀತಿಯ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ನೋಡಿಕೊಂಡು ಜಿಲ್ಲೆಯಲ್ಲಿ ಗೇರು ಸಸಿಗಳನ್ನು ಬೆಳೆಯುವ ಬಗ್ಗೆ ನಿರ್ಧರಿಸಲಾಗುವುದು ಎಂದರು.

ಅಂಬೇಡ್ಕರ್‌ ಭವನ: ಜಿಲ್ಲೆಯ ಯಾವ ಗ್ರಾಮಗಳಲ್ಲಿ ಅಂಬೇಡ್ಕರ್‌ ಭವನದ ಅವಶ್ಯಕತೆ ಇದೆ ಎಂಬುದರ ಕುರಿತು ಗ್ರಾಮ ಮಟ್ಟದಲ್ಲಿ ಮಾಹಿತಿ ಪಡೆದು ಸಲ್ಲಿಸುವಂತೆ ಜಿ.ಪಂ ಅಧ್ಯಕ್ಷ ರಾಜಣ್ಣ ತಾ.ಪಂ ಇಒ ಗಳಿಗೆ ಸೂಚಿಸಿದರು.

ನಿರಂತರ ಜ್ಯೋತಿ: ತಾಲ್ಲೂಕಿನ ತಿಮ್ಮೇಗೌಡನದೊಡ್ಡಿ, ಬೈರಮಂಗಲ, ಕಲ್ಲುಗೋಪಳ್ಳಿ, ಬಿಡದಿಗೆ ನಿರಂತರ ಜ್ಯೋತಿ ಯೋಜನೆಯಡಿ ದಿನದ 24 ಗಂಟೆಯೂ ವಿದ್ಯುತ್‌ ಸರಬರಾಜು ಮಾಡುವ ಕುರಿತು ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ ಎಂದು ಬೆಸ್ಕಾಂ ಅಧಿಕಾರಿಗಳು ಸಭೆಗೆ ತಿಳಿಸಿದರು.

ಸುತ್ತೋಲೆ ಕಳುಹಿಸಿ: ಜಿಲ್ಲೆಯ ಎಲ್ಲ ಇಲಾಖೆ ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ ಅಂಗವಿಲರಿಗೆ ಶೆ 3ರಷ್ಟು ಅನುದಾನ, ಮಹಿಳಾ ಮತ್ತು ಮಕ್ಕಳ ಕಲ್ಯಾಣಕ್ಕೆ ಶೇ 33ರಷ್ಟು ಅನುದಾನ ಸಮರ್ಪಕವಾಗಿ ಬಳಸುವಂತೆ ಸೂಚಿಸಿ ಸುತ್ತೋಲೆ ಹೊರಡಿಸುವಂತೆ ಅಧ್ಯಕ್ಷ ರಾಜಣ್ಣ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಜಿ.ಪಂ. ಉಪಾಧ್ಯಕ್ಷೆ ಬಿ.ಎಸ್.ಗೌರಮ್ಮ, ಉಪ ಕಾರ್ಯದರ್ಶಿ ಲತಾ, ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.