ADVERTISEMENT

ಆನೆ ಸಾಯಿಸಲು ಅನುಮತಿ ಕೊಡಿ

​ಪ್ರಜಾವಾಣಿ ವಾರ್ತೆ
Published 13 ಜೂನ್ 2012, 5:40 IST
Last Updated 13 ಜೂನ್ 2012, 5:40 IST

ಕನಕಪುರ: ರೈತ ವೆಂಕಟೇಶ್ ಅವರು ಆನೆ ದಾಳಿಗೆ ಬಲಿಯಾಗಿದ್ದಕ್ಕೆ ಆಕ್ರೋಶಗೊಂಡ ನಾರಾಯಣಪುರ ಗ್ರಾಮಸ್ಥರು ಮತ್ತು ಯುವ ಕಾಂಗ್ರೆಸ್ ಕಾರ್ಯಕರ್ತರು ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿದರು.

`ಈ ಪ್ರದೇಶಕ್ಕೆ ಆನೆಗಳು ಆಗಾಗ್ಗೆ ದಾಳಿ ನಡೆಸುತ್ತಿದ್ದರೂ ಅರಣ್ಯ ಇಲಾಖೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡಿಲ್ಲ. ಆನೆ ದಾಳಿಯಿಂದ ಮೃತಪಟ್ಟ ಕುಟುಂಬಕ್ಕೆ ನೀವು ಕೊಡುವ 5 ಲಕ್ಷ ರೂಪಾಯಿ ಪರಿಹಾರವೂ ನಮಗೆ ಬೇಡ. ನಮ್ಮ ಮೇಲೆ ದಾಳಿ ನಡೆಸುವ ಆನೆಗಳನ್ನು ಸಾಯಿಸಲು ಅನುಮತಿ ಕೊಡಿ~ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೋಡಿಹಳ್ಳಿ ಮುಖ್ಯರಸ್ತೆಯನ್ನು ಬಂದ್ ಮಾಡಿದ ಪ್ರತಿಭಟನಾಕಾರರು ವಾಹನ ಸಂಚಾರವನ್ನು ಸುಮಾರು 3 ಗಂಟೆಗೂ ಹೆಚ್ಚುಕಾಲ ತಡೆ ಹಿಡಿದರು. ಸ್ಥಳಕ್ಕೆ ಬಂದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಕೇವಲ ಒಂದು ತಿಂಗಳಲ್ಲಿ ಕಾಡಾನೆಗಳು ಮೂರು ಮಂದಿ ರೈತರನ್ನು ಬಲಿ ಪಡೆದಿವೆ. ಅರಣ್ಯ ಇಲಾಖೆ ಅಧಿಕಾರಿಗಳು ಘಟನೆ ನಡೆದ ಸಂದರ್ಭದಲ್ಲಿ ಸ್ಥಳಕ್ಕೆ ಧಾವಿಸಿ ಸಾಂತ್ವನ ಹೇಳಿ, ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳುವ ಭರವಸೆ ನೀಡುತ್ತಾರೆ. ಆದರೆ ಯಾವುದೇ ಭದ್ರತಾ ಕ್ರಮಗಳನ್ನು ಕೈಗೊಳ್ಳುವುದಿಲ್ಲ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.

12 ಆನೆಗಳು ಹಿಂಡು ಇಂದು ಗ್ರಾಮಕ್ಕೆ ನುಗ್ಗಿ ದಾಂಧಲೆ ಮಾಡಿವೆ. ಆನೆಗಳನ್ನು ನಾವು ಓಡಿಸಿದ್ದೇವೆ. ವೆಂಕಟೇಶ್ ಆನೆ ದಾಳಿಗೆ ಆಹುತಿಯಾಗಿದ್ದು, ನಾಲ್ಕೈದು ಮಹಿಳೆಯರು ಗಾಯಗೊಂಡಿದ್ದಾರೆ. ವೆಂಕಟೇಶ್‌ನನ್ನು ಕಳೆದುಕೊಂಡ ಕುಟುಂಬ ಅನಾಥವಾಗಿದೆ ಎಂದರು. ಕಾಡು ಪ್ರಾಣಿಗಳು ದಾಳಿ ಮಾಡಿ ಬೆಳೆನಾಶ ಮಾಡಿದರೆ, ಅರಣ್ಯ ಇಲಾಖೆಯವರು 500 ರಿಂದ ಒಂದು ಸಾವಿರ ರೂಪಾಯಿ ಪರಿಹಾರ ನೀಡುತ್ತಾರೆ. ಈ ಪರಿಹಾರದ ಹಣ ಯಾವುದಕ್ಕೂ ಸಾಲದು. ನಿಮ್ಮಿಂದ ಕಾಡಾನೆಗಳ ದಾಳಿ ತಡೆ ಸಾಧ್ಯವಿಲ್ಲಎಂದ ಮೇಲೆ, ನಮ್ಮನ್ನು ನಾವೇ ರಕ್ಷಿಸಿಕೊಳ್ಳುತ್ತೇವೆ. ನೀವು ಸುಮ್ಮನಿರಿ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ಪುರುಷೋತ್ತಮ್ ರೈತರನ್ನು ಸಮಾಧಾನಪಡಿಸಿದರು. ಅಧಿಕಾರಿಗಳು, ರೈತರ ಸಮಸ್ಯೆಯನ್ನು ಅರ್ಧಮಾಡಿಕೊಳ್ಳಬೇಕು. ನೀವು ಕೊಡುವ ಪರಿಹಾರ ಯಾವುದಕ್ಕೂ ಸಾಲದು ಎಂದರು. ಮೃತ ವೆಂಕಟೇಶ್ ಅವರ ಮಗನಿಗೆ ಇಲಾಖೆಯಲ್ಲಿ ಕೆಲಸ ಕೊಡಬೇಕು. ಪರಿಹಾರದ ಹಣವನ್ನು ತ್ವರಿತವಾಗಿ ನೀಡಬೇಕು. ಕಾಡಾನೆಗಳ ದಾಳಿ ತಡೆಗಟ್ಟಲು ಅರಣ್ಯದ ಅಂಚಿನ ಸುತ್ತ ಸೋಲಾರ್ ಬೇಲಿ ಅಳವಡಿಸಬೇಕು ಎಂದು ಪುರುಷೋತ್ತಮ್‌ಆಗ್ರಹಿಸಿದರು.

ನಂತರ ಪ್ರತಿಭಟನಾಕಾರರ ಮನವೊಲಿಸಿ ಧರಣಿಯನ್ನು ಅಂತ್ಯಗೊಳಿಸಲಾಯಿತು. ಲೋಕಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷ ಕೆಂಪರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಡಿ.ವಿಜಯದೇವು, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ವಿ.ಶ್ರೀನಿವಾಸ್ ಮತ್ತು ಗ್ರಾಮಸ್ಥರು ಪ್ರತಿಭಟನೆಯಲ್ಲಿ ಇದ್ದರು.

ಭೇಟಿ: ಮಾಜಿ ಸಚಿವ ಪಿ.ಜಿ.ಆರ್. ಸಿಂಧ್ಯ ಅವರು ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಆನೆ ದಾಳಿಗೆ ಮೃತಪಟ್ಟ ವೆಂಕಟೇಶ್ ಅವರ ಪತ್ನಿಗೆ ಸಾಂತ್ವನ ಹೇಳಿದರು. ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಡಿ.ಎಂ. ವಿಶ್ವನಾಥ್, ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಸಿದ್ದಮರೀಗೌಡ, ಪುರಸಭೆ ಮಾಜಿ ಅಧ್ಯಕ್ಷ ಬಿ.ನಾಗರಾಜು, ಸದಸ್ಯ ಪುಟ್ಟರಾಜು, ವಕ್ತಾರ ಸ್ಟುಡಿಯೊ ಚಂದ್ರು, ಬಿ.ಎಸ್.ಗೌಡ, ಡಿಕ್ಕಿಕುಮಾರ್ ಇದ್ದರು. 

 ಕಾಂಗ್ರೆಸ್ ಮುಖಂಡ .ಕೆ.ಸುರೇಶ್ ಆಸ್ಪತ್ರೆಗೆ ಭೇಟಿ ನೀಡಿ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿ 5 ಸಾವಿರ ರೂಪಾಯಿ ಧನ ಸಹಾಯ ಮಾಡಿದರು. ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ರವಿ, ಪುರಸಭೆ ಅಧ್ಯಕ್ಷ ಆರ್. ಕೃಷ್ಣಮೂರ್ತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ.ಡಿ.ವಿಜಯದೇವು, ಕೆ.ಎನ್.ದಿಲೀಪ್, ವಕ್ತಾರ ಮರಸಪ್ಪರವಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.