ADVERTISEMENT

ಇಂದು ಮಂಜುನಾಥ ಜೆಡಿಎಸ್‌ಗೆ ಸೇರ್ಪಡೆ

15ನೇ ವಾರ್ಡಿನಲ್ಲಿ ₹40 ಲಕ್ಷ ವೆಚ್ಚದಲ್ಲಿ ಕಾಂಕ್ರೀಟ್‌ ರಸ್ತೆ ಮತ್ತು ಚರಂಡಿ ಕಾಮಗಾರಿಗೆ ಶಂಕುಸ್ಥಾಪನೆ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2018, 7:44 IST
Last Updated 26 ಮಾರ್ಚ್ 2018, 7:44 IST

ಮಾಗಡಿ: ಶಾಸಕ ಎಚ್‌.ಸಿ.ಬಾಲಕೃಷ್ಣ ಮೂಲ ಕಾಂಗ್ರೆಸ್‌ ಕಾರ್ಯಕರ್ತರನ್ನು ಕಡೆಗಣಿಸಿ, ತಮ್ಮ ಹಿಂಬಾಲಕ ಸ್ವಜಾತಿಯವರಿಗೆ ಹೆಚ್ಚಿನ ಆದ್ಯತೆ ನೀಡಿರುವುದರಿಂದ ಮನನೊಂದು ಮಾರ್ಚ್‌ 25 ರಂದು ಜೆಡಿಎಸ್‌ ಸೇರುವುದಾಗಿ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಎಂ.ಎನ್‌.ಮಂಜುನಾಥ ತಿಳಿಸಿದರು.

ಪಟ್ಟಣದ 15ನೇ ವಾರ್ಡಿನಲ್ಲಿ ₹40 ಲಕ್ಷ ವೆಚ್ಚದಲ್ಲಿ ಕಾಂಕ್ರೀಟ್‌ ರಸ್ತೆ ಮತ್ತು ಚರಂಡಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ಮಾಗಡಿ ಯೋಜನಾ ಪ್ರಾಧಿಕಾರದಿಂದ ₹30 ಕೋಟಿ ವೆಚ್ಚದ ಕಾಮಗಾರಿಗಳನ್ನು ಅಗತ್ಯ ಇರುವ ಕಡೆಗಳಲ್ಲಿ ಯೋಜನೆ ತಯಾರಿಸಿ ಟೆಂಡರ್‌ ಕರೆಯಲಾಗಿತ್ತು. ಶಾಸಕರು ಅಧಿಕೃತವಾಗಿ ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆ ಆಗಿಲ್ಲ. ಆದರೂ ಕುದೂರು ಗ್ರಾಮದ ಅಭಿವೃದ್ಧಿಗೆ ಯೋಜನಾ ಪ್ರಾಧಿಕಾರದಿಂದ ನೀಡಿದ್ದ ₹1 ಕೋಟಿ, ಶ್ರೀಗಿರಿಪುರದ ಅಭಿವೃದ್ಧಿಗೆ ನೀಡಿದ್ದ ಅನುದಾನವನ್ನು ನಮ್ಮ ಗಮನಕ್ಕೆ ತರದೆ ಟೆಂಡರ್‌ ಬದಲಿಸಿ ಬೇರೆ ಕಡೆ ಬಳಸಿಕೊಂಡು ಅವರ ಹಿಂಬಾಲಕರ ಮೂಲಕ ಪೋಲು ಮಾಡಿದ್ದಾರೆ ಎಂದು ಹೇಳಿದರು.

ADVERTISEMENT

‘ಪಟ್ಟಣದಲ್ಲಿ ಯೋಜನಾ ಪ್ರಾಧಿಕಾರದ ಅನುದಾನದಲ್ಲಿ ಕೆಲವು ಕಾಮಗಾರಿಗಳಿಗೆ ಶಾಸಕರು ಶಂಕುಸ್ಥಾಪನೆ ನೆರವೇರಿಸಲು ಸಲಿಕೆ, ಗುದ್ದಲಿ ಮತ್ತು ಅನುದಾನ ನಮಗೆ ಸೇರಿದ್ದರೂ ಸಹಿತ ನಮ್ಮನ್ನು ಕಡೆಗಣಿಸಿದ್ದಾರೆ. ಜನರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಶಂಕುಸ್ಥಾಪನೆಗೆ ಅಡ್ಡಿಪಡಿಸಿಲ್ಲ. 20 ವರ್ಷಗಳಿಂದಲೂ ಶಾಸಕರು ಪಟ್ಟಣದ ಅಭಿವೃದ್ಧಿಗೆ ಏನೂ ಮಾಡಲಿಲ್ಲ’ ಎಂದು ದೂರಿದರು.

‘ನಮ್ಮ ಮನೆತನ ಮೊದಲಿನಿಂದಲೂ ಕಾಂಗ್ರೆಸ್‌ಗೆ ಸೇರಿದೆ. ಸಾರಿಗೆ ಸಚಿವ ಎಚ್‌.ಎಂ.ರೇವಣ್ಣ ಮತ್ತು ಸಂಸದ ಡಿ.ಕೆ.ಸುರೇಶ್‌ ಅವರ ಮಾರ್ಗದರ್ಶನದಲ್ಲಿ ಪ್ರಾಮಾಣಿಕವಾಗಿ ಕಾಂಗ್ರೆಸ್‌ಗೆ ದುಡಿದಿದ್ದೇವೆ. ಜೆಡಿಎಸ್‌ ಅಭ್ಯರ್ಥಿ ಎ.ಮಂಜುನಾಥ ಅವರನ್ನು ಬೆಂಬಲಿಸಲು ಜೆಡಿಎಸ್‌ಗೆ ಅಧಿಕೃತವಾಗಿ ಸೇರ್ಪಡೆಯಾಗುತ್ತಿದ್ದೇವೆ’ ಎಂದು ತಿಳಿಸಿದರು.

ಮುಖಂಡರಾದ ರಾಧಾ ಮಂಜುನಾಥ್‌, ಬೆನಕ ಸುರೇಶ್‌, ರಹಮತ್‌ ಉಲ್ಲಾಖಾನ್‌, ಸ್ವಾಮಿ, ಧನಂಜಯ, ರೇಣುಕಾ, ಕಾರ್ತಿಕ, ಸಿದ್ದಾರೂಢಾಶ್ರಮದ ಅಧ್ಯಕ್ಷ ಹನುಮಂತಯ್ಯ, ನಿವೃತ್ತ ಶಿಕ್ಷಕ ತಿಮ್ಮಯ್ಯ ಹಾಗೂ 15ನೇ ವಾರ್ಡಿನ ನಿವಾಸಿಗಳು ಇದ್ದರು.

ಕಾಂಗ್ರೆಸ್‌ ಮುಖಂಡರಾದ ತ್ಯಾಗದೆರೆಪಾಳ್ಯದ ರಂಗಸ್ವಾಮಿ, ಕೆ.ಎಚ್‌.ಕೃಷ್ಣಮೂರ್ತಿ, ಗುಡ್ಡಹಳ್ಳಿ ಗಂಗಣ್ಣ, ಬೆಳಗುಂಬದ ನರಸಿಂಹಮೂರ್ತಿ ಇದ್ದರು.

ಅಧ್ಯಕ್ಷತೆಗೆ ರಾಜೀನಾಮೆ ನೀಡಿ

ಯೋಜನಾ ಪ್ರಾಧಿಕಾರದ ಅಧ್ಯಕ್ಷ ಎಂ.ಎನ್‌.ಮಂಜುನಾಥ್‌ ಮಾ.25 ರಂದು ನಡೆಯಲಿರುವ ವಿಕಾಸ ಪರ್ವದ ಪ್ಲೆಕ್ಸ್‌ಗಳಲ್ಲಿ ತಮ್ಮ ಭಾವಚಿತ್ರ ಹಾಕಿಸಿಕೊಂಡಿರುವುದು ಸರಿಯಲ್ಲ. ಅಧ್ಯಕ್ಷ ಸ್ಥಾನಕ್ಕೆ ಕೂಡಲೇ ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್‌ ಮುಖಂಡ ಸಿ.ಜಯರಾಮು ತಿಳಿಸಿದರು.

ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಮೊದಲು ಕಾಂಗ್ರೆಸ್‌ಗೆ ರಾಜೀನಾಮೆ ನೀಡಲಿ. ಆಮೇಲೆ ಅವರ ಇಷ್ಟ ಎಂದು ಸಿ.ಜಯರಾಮು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.