ರಾಮನಗರ: ನಮ್ಮ ನಾಡಿನ ಸಂಸ್ಕೃತಿಯನ್ನು ಪ್ರತಿಬಿಂಬಿಸುವಂತಿದ್ದ ಅಪ್ಪಟ ಗ್ರಾಮೀಣ ಕ್ರೀಡೆಗಳು ದಿನದಿಂದ ದಿನಕ್ಕೆ ನಶಿಸಿ ಹೋಗುತ್ತಿದ್ದು, ಮುಂದಿನ ದಿನಗಳಲ್ಲಿ ಇತಿಹಾಸ ಪುಟವನ್ನು ಸೇರುವ ಎಲ್ಲ ಸ್ಪಷ್ಟ ಲಕ್ಷಣಗಳು ಕಂಡುಬರುತ್ತಿದೆ.
ಸಾಮಾನ್ಯವಾಗಿ 20ರಿಂದ 30 ವರ್ಷಗಳ ಹಿಂದೆ ಗ್ರಾಮೀಣ ಪ್ರದೇಶದ ಮಕ್ಕಳ ಅವಿಭಾಜ್ಯ ಅಂಗವಾಗಿದ್ದ, ಗ್ರಾಮೀಣ ಕ್ರೀಡೆಗಳಾದ ಚಿನ್ನಿದಾಂಡು, ಲಗೋರಿ, ಸಾಲುಚೆಂಡು, ಹಗ್ಗಜಗ್ಗಾಟ, ಗೋಲಿ, ಕುಂಟೆಬಿಲ್ಲೆ, ಕಪ್ಪೆಓಟ, ಮರಕೋತಿ, ಚೆನ್ನಮಣೆ, ಕವಡೆ ಮುಂತಾದ ಆಟಗಳು ಇಂದು ಕೆಲವೇ ಕೆಲವು ಬೆರಳೆಣಿಕೆಯಷ್ಟು ಗ್ರಾಮಗಳಲ್ಲಿ ಮಾತ್ರ ಆಟವಾಡುವುದನ್ನು ಕಾಣ ಬಹುದಾಗಿದೆ.
ಕ್ರಿಕೆಟ್ ಆಟವೆಂಬ ದೈತ್ಯ ಆಟದ ಸಂಭ್ರಮದ ನಡುವೆ ಗ್ರಾಮೀಣ ಕ್ರೀಡೆಗಳನ್ನು ಒಂದೊಂದಾಗಿ ನುಂಗಿ ಹಾಕುವುದನ್ನು ನೋಡ ಬಹುದಾಗಿದೆ. ಈ ಹಿಂದೆ ಗ್ರಾಮೀಣ ಪ್ರದೇಶಗಳಲ್ಲಿ ಗ್ರಾಮೀಣ ಕ್ರೀಡೆಗಳನ್ನು ಆಡುವ ಮಕ್ಕಳ ಆಟವನ್ನು ಮನೆಮಂದಿಯೆಲ್ಲಾ ಒಂದೆಡೆ ಕುಳಿತು ವೀಕ್ಷಿಸಿ ಸಂಭ್ರಮಪಟ್ಟು, ಮಕ್ಕಳಿಗೆ ಪ್ರೋತ್ಸಾಹ ನೀಡುವ ಕೆಲಸವನ್ನು ಮಾಡುತ್ತಿದ್ದರು.
ಆದರೆ, ಅದೇಕೋ ಇತ್ತೀಚಿನ ದಿನಗಳಲ್ಲಿ ಪೋಷಕರಲ್ಲೂ ಕೂಡ ಈ ಗ್ರಾಮೀಣ ಕ್ರೀಡೆಗಳ ಬಗ್ಗೆ ನಿರುತ್ಸಾಹ ತುಂಬಿದೆ. ಕೇವಲ ಮಕ್ಕಳ ಓದು, ಬರಹದ ಬಗ್ಗೆ ಆಸಕ್ತಿ ವಹಿಸುವ ಪರಿಪಾಠ ಹೆಚ್ಚಾಗಿರುವುದು ಕೂಡಾ ಈ ಗ್ರಾಮೀಣ ಕ್ರೀಡೆಗಳು ಕಣ್ಮರೆ ಯಾಗುವುದಕ್ಕೆ ಪ್ರಮುಖ ಕಾರಣವಾಗಿದೆ.
'ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯವರು ಗ್ರಾಮೀಣ ಕ್ರೀಡೆಗಳನ್ನು ಆಯೋಜಿಸುವ ಯೋಜನೆ ಯಿದೆ. ಆದರೆ ಇಲ್ಲಿನ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ಇಲ್ಲಿಯವರೆವಿಗೂ ಆಯೋಜಿಸಿಲ್ಲ. ವರ್ಷದಲ್ಲಿ ನಾಲ್ಕೈದು ಬಾರಿ ಹೋಬಳಿ, ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಗ್ರಾಮೀಣ ಕ್ರೀಡೆಗಳನ್ನು ಆಯೋಜಿಸಿದರೆ ಮಾತ್ರ ಗ್ರಾಮೀಣ ಕ್ರೀಡೆಗಳನ್ನು ಜೀವಂತವಾಗಿಡಲು ಸಾಧ್ಯವಾಗುತ್ತದೆ' ಎಂದು ಕ್ರೀಡಾಪಟು ಪಿ. ಶಬರಿ ತಿಳಿಸಿದರು.
'ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಗ್ರಾಮೀಣ ಕ್ರೀಡೆಗಳ ಬಗ್ಗೆ ನಮ್ಮ ಮಕ್ಕಳಿಗೆ ಚಿತ್ರ ತೋರಿಸಿ ವಿವರಿಸುವ ಸಂದರ್ಭ ಬರುವುದರಲ್ಲಿ ಸಂದೇಹವಿಲ್ಲ. ಆದ್ದರಿಂದ ಕ್ರೀಡಾ ಇಲಾಖೆಯವರು ಗ್ರಾಮೀಣ ಕ್ರೀಡೆಗಳನ್ನು ಜನಪ್ರಿಯ ಗೊಳಿಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ರೂಪಿಸುವ ಅವಶ್ಯಕತೆಯಿದೆ' ಎಂದರು.
'ಆಡಾಡುವ ಅಂಬೆಗಾಲು ಕೂಸಿನಿಂದ ಎಳೆಯ ಯುವ ಎಲ್ಲಾ ವಯಸ್ಸಿನವರೆಗೂ ಪ್ರಾದೇಶಿಕ ಭಿನ್ನತೆ ವೈವಿಧ್ಯತೆಗಳೊಂದಿಗೆ ಗ್ರಾಮೀಣ ಆಟಗಳ ಆಡುವಿಕೆಯನ್ನು ನಮ್ಮ ಸಮಾಜ ಕಂಡುಕೊಂಡಿದೆ. ಕಾಲಮಾನದ ಜೀವನ ಪದ್ಧತಿ, ಶಿಕ್ಷಣ ಪದ್ಧತಿಗಳಲ್ಲಾದ ಬದಲಾವಣೆಗಳು ಗ್ರಾಮೀಣ ಆಟಗಳ ಆಡುವ ಕ್ರಮದಿಂದ ದೂರ ವಾಗುತ್ತಿದ್ದಾರೆ. ಹೊಸ ತಲೆಮಾರಿನ ಜನರು ಈ ಆಟಗಳೊಂದಿಗೆ ಕಳೆಯಲು ಹಚ್ಚಬೇಕಾಗಿದೆ' ಎಂದು ಜಾನಪದ ವಿದ್ವಾಂಸ ಡಾ. ಕುರುವ ಬಸವರಾಜು ತಿಳಿಸಿದರು.
** *** **
ದೈಹಿಕ, ಮಾನಸಿಕ ಸದೃಢತೆಗೆ ಅತ್ಯಂತ ಪೂರಕವಾದ ಈ ಆಟಗಳು ಕಾಲದ ಮರೆವಿಗೆ ಜಾರಿ ಹೋಗುವುದರ ಬದಲಿಗೆ ಸಾಧ್ಯವಿದ್ದಷ್ಟು ಚಟುವಟಿಕೆಗೆ ತಂದು ಪುನರ್ ಬಳಕೆಗೆ ಹಚ್ಚಬೇಕಾಗಿದೆ.
-ಡಾ. ಕುರುವ ಬಸವರಾಜು, ಜಾನಪದ ವಿದ್ವಾಂಸ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.