ADVERTISEMENT

ಋತುಮಾನದ ಹುಡುಗಿ ಕೃತಿ ಬಿಡುಗಡೆ:ಸಮ ಸಮಾಜಕ್ಕಾಗಿ ಮೌಢ್ಯಗಳ ಧಿಕ್ಕರಿಸಿ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2012, 19:30 IST
Last Updated 24 ಮಾರ್ಚ್ 2012, 19:30 IST

ರಾಮನಗರ : ಸಮಾಜದ ಅಭಿವೃದ್ಧಿಗೆ ಮಾರಕವಾಗಿರುವ ಜಾತಿ ಪದ್ಧತಿ ಸೇರಿದಂತೆ ಸಾಮಾಜಿಕ ಪಿಡುಗಗಳು ತೊಲಗಿ ಆರೋಗ್ಯವಂತ ಸಮಾಜವನ್ನು ನಿರ್ಮಾಣ ಮಾಡುವ ನಿಟ್ಟಿನಲ್ಲಿ ಸಾಹಿತ್ಯವನ್ನು ರಚಿಸಬೇಕಾದ ಅವಶ್ಯಕತೆಯಿದೆ ಎಂದು ಕನ್ನಡ ವಿಷಯದ ಸಹ ಪ್ರಾಧ್ಯಾಪಕ ಜಿ.ಶಿವಣ್ಣ ತಿಳಿಸಿದರು.

ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಸಾಹಿತ್ಯ ವೇದಿಕೆ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಧು ಪಬ್ಲಿಕೇಷನ್ಸ್‌ನ `ಋತುಮಾನದ ಹುಡುಗಿ~ ಕವನ ಸಂಕಲನವನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಸಮಾಜದಲ್ಲಿ ಜನರು ಶಾಂತಿ, ನೆಮ್ಮದಿ, ಸಮಾನತೆಯ ಜೀವನ ನಡೆಸಬೇಕಾದರೆ ಸಾಮಾಜಿಕ ಮೌಢ್ಯತೆಗಳು ಹಾಗೂ ಆಚಾರ, ವಿಚಾರಗಳನ್ನು ಧಿಕ್ಕರಿಸಿ ಮುನ್ನಡೆಯಬೇಕು. ಪ್ರಶ್ನೆ ಮಾಡದೇ ಯಾವುದೇ ವಿಚಾರವನ್ನು ಒಪ್ಪಿಕೊಳ್ಳಬಾರದು.

ವಿಶ್ವಕ್ಕೆ ಮಾದರಿಯಾದ ಸಂಸ್ಕೃತಿಯನ್ನು ಹೊಂದಿರುವ ಭಾರತೀಯರು ಬೆಳೆದು ದೊಡ್ಡವರಾದಂತೆಲ್ಲಾ ವಿಶ್ವಮಾನವರಾಗಿ ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎಂಬ ತತ್ವದ ಆಶಯದಂತೆ ಜೀವನ ನಡೆಸದೇ ಸ್ವಾರ್ಥಿಗಳಾಗಿ  ಬದುಕು ನಡೆಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಡಿ.ರಂಗಸ್ವಾಮಿಗೌಡ, ಪ್ರೊ.ಜಯಣ್ಣ, ಪ್ರೊ.ವಿ.ಎಚ್.ರಾಜಶೇಖರ್ ಮಾತನಾಡಿದರು. ಪ್ರಾಂಶುಪಾಲರಾದ ಪ್ರೊ. ಎಂ.ಎಸ್. ಮಹದೇವಮೂರ್ತಿ ಅಧ್ಯಕ್ಷತೆ ವಹಿಸಿದ್ದರು.   ಅಧ್ಯಾಪಕರಾದ ಪ್ರೊ. ಎಲ್.ಸಿ.ರಾಜು, ವೀಣಾ, ಡಾ.ಸರ್ವಮಂಗಳ, ವೆಂಕಾಟಾಚಲಯ್ಯ, ಹೇಮಾವತಿ, ಸುಲೋಚನಾ, ಪ್ರಕಾಶಕ ಡಾ.ಅಂಕನಹಳ್ಳಿ ಪಾರ್ಥ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.