ADVERTISEMENT

ಕದನಕ್ಕೆ ವೇದಿಕೆಯಾದ ಕೆಡಿಪಿ ಸಭೆ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2012, 19:30 IST
Last Updated 23 ಫೆಬ್ರುವರಿ 2012, 19:30 IST
ಕದನಕ್ಕೆ ವೇದಿಕೆಯಾದ ಕೆಡಿಪಿ ಸಭೆ
ಕದನಕ್ಕೆ ವೇದಿಕೆಯಾದ ಕೆಡಿಪಿ ಸಭೆ   

ರಾಮನಗರ: ಅರಣ್ಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಸಿ.ಪಿ.ಯೋಗೇಶ್ವರ್ ಹಾಗೂ ಶಾಸಕ ಡಿ.ಕೆ.ಶಿವಕುಮಾರ್ ನಡುವೆ ನಡೆದ ಮಾತಿನ ಚಕಮಕಿ, ದಿಢೀರನೇ ಸಭೆಗೆ ನುಗ್ಗಿ ಪ್ರತಿಭಟಿಸಿದ ಸಮತಾ ಸೈನಿಕ ದಳದ (ಎಸ್‌ಎಸ್‌ಡಿ) ಸದಸ್ಯರು, ಮರಳು ಮತ್ತು ಗಣಿಗಾರಿಕೆ ಕುರಿತು ಬಿಸಿಬಿಸಿ ಚರ್ಚೆ ಆರಂಭವಾಗುತ್ತಿದ್ದಂತೆ ಸಭಾಂಗಣದಲ್ಲಿ ಉಂಟಾದ `ಶಾರ್ಟ್ ಸರ್ಕಿಟ್~, ಇದೆಲ್ಲದರ ಪರಿಣಾಮ ಅರ್ಧಕ್ಕೆ ಮೊಟಕುಗೊಳಿಸಿ ಮುಂದೂಡಲ್ಪಟ್ಟ ಸಭೆ...

ಇದು ರಾಮನಗರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಅರಣ್ಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಸಿ.ಪಿ.ಯೋಗೀಶ್ವರ್ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಪ್ರಗತಿ ಪರಿಶೀಲನಾ ಸಭೆಯ (ಕೆಡಿಪಿ) ಚಿತ್ರಣ.

ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಕೆಡಿಪಿ ಸಭೆಗೆ ರಾಮನಗರ ಶಾಸಕ ಕೆ.ರಾಜು, ಮಾಗಡಿ ಶಾಸಕ ಎಚ್.ಸಿ.ಬಾಲಕೃಷ್ಣ ಹಾಗೂ ಕನಕಪುರ ಶಾಸಕ ಡಿ.ಕೆ.ಶಿವಕುಮಾರ್ ಸಹ ಭಾಗವಹಿಸಿದ್ದರು. ಇದರಿಂದ ಸಭೆಯ ಗಾಂಭೀರ್ಯತೆ ಹೆಚ್ಚಾಗಿತ್ತು. ಕುಡಿಯುವ ನೀರು, ಬರ ಸೇರಿದಂತೆ ಮಹತ್ವದ ವಿಚಾರಗಳು ಸಭೆಯಲ್ಲಿ ಚರ್ಚೆಯಾಗಬೇಕಿತ್ತು. ಆದರೆ ಸಭೆಯಲ್ಲಿ ಉಂಟಾದ ಕೆಲ ಗೊಂದಲಗಳಿಂದ ಸಭೆಯನ್ನೇ ಮುಂದೂಡಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು.

ವೇದಿಕೆ ಏರದ ಡಿಕೆಶಿ: ಕೆಡಿಪಿ ಸಭೆ ಆರಂಭವಾಗಿ ಕುಡಿಯುವ ನೀರಿನ ಕುರಿತು ಚರ್ಚೆ ನಡೆಯುತ್ತಿದ್ದ ಸಂದರ್ಭದಲ್ಲಿ ಆಗಮಿಸಿದ ಶಾಸಕ ಡಿ.ಕೆ.ಶಿವಕುಮಾರ್ ಅವರು ಸಭೆಯ ವೇದಿಕೆಯ ಮೇಲೆ ಹತ್ತಲಿಲ್ಲ. ಅವರಿಗಾಗಿಯೇ ವೇದಿಕೆಯಲ್ಲಿ ಆಸನ ಮೀಸಲಿರಿಸಿದ್ದರೂ ಅಲ್ಲಿಗೆ ಹೋಗದ ಅವರು, ಜಿ.ಪಂ ಸದಸ್ಯರ ಜತೆ ಸಾಮಾನ್ಯ ಸದಸ್ಯರಂತೆ ಕುಳಿತುಕೊಂಡರು.

ಎಸ್‌ಎಸ್‌ಡಿ ಪ್ರತಿಭಟನೆ: ಸಭೆ ನಡೆಯುತ್ತಿರುವಾಗ ಅನಧಿಕೃತವಾಗಿ ಸಭಾಂಗಣದ ಒಳ ಪ್ರವೇಶಿಸಿದ ಸಮತಾ ಸೈನಿಕ ದಳ (ಎಸ್‌ಎಸ್‌ಡಿ) ಮತ್ತು ದಲಿತ ಸಂಘಟನೆಗಳ ಪ್ರತಿನಿಧಿಗಳು ಜಿಲ್ಲಾಡಳಿತದ ವಿರುದ್ಧ ಘೋಷಣೆಗಳನ್ನು ಕೂಗಿದ ಘಟನೆಯೂ ನಡೆಯಿತು.

`ಮೂರು ದಿನದಿಂದ ತಾಲ್ಲೂಕು ಕಚೇರಿಗಳಲ್ಲಿ ಕೆಲಸ ನಡೆಯುತ್ತಿಲ್ಲ~ ಎಂದು ಎಸ್‌ಎಸ್‌ಡಿ ಜಿಲ್ಲಾಧ್ಯಕ್ಷ ಜಿ. ಗೋವಿಂದಯ್ಯ, ದಲಿತ ಮುಖಂಡರಾದ ಮೋಹನ್ ಕುಮಾರ್, ಚಲುವರಾಜು ಕಿಡಿಕಾರಿದರು. ಕೆಡಿಪಿ ಸಭೆ ನಂತರ ಕಂದಾಯ ನೌಕರರ ಸಮಸ್ಯೆ ಪರಿಹರಿಸುವುದಾಗಿ ಸಚಿವ ಯೋಗೇಶ್ವರ್ ಭರವಸೆ ನೀಡಿದ ನಂತರ ಪ್ರತಿಭಟನಾಕಾರರು ಸಭೆಯಿಂದ ಹೊರ ನಡೆದರು.

ಡಿಕೆಶಿ ಸಿಡಿಮಿಡಿ :  `ಕೆಡಿಪಿ ಸಭೆಯೊಳಗೆ ನುಗ್ಗಿ ಪ್ರತಿಭಟನೆ ನಡೆಸುವುದು ಸರಿಯಲ್ಲ. ಇಂತಹದ್ದಕ್ಕೆಲ್ಲ ಜಿಲ್ಲಾಡಳಿತ ಮತ್ತು ಪೊಲೀಸರು ಅವಕಾಶ ನೀಡಬಾರದು. ಇದು ಸಭೆಗೆ ಗೌರವ ತರುವುದಿಲ್ಲ~ ಎಂದು ಶಾಸಕ ಡಿ.ಕೆ.ಶಿವಕುಮಾರ್ ಕಿಡಿಕಾರಿದರು.

ಅಜೆಂಡಾ ಬಗ್ಗೆ ಮಾತಾಡಿ-ಸಚಿವರ ತಾಕೀತು: ಜಿಲ್ಲಾಡಳಿತದ ಕಾರ್ಯವೈಖರಿ, ನಡತೆ, ಇತ್ತೀಚೆಗೆ ಅಧಿಕಾರಿಗಳು ನಡೆದುಕೊಳ್ಳುತ್ತಿರುವ ಧೋರಣೆ ವಿಷಯಗಳನ್ನು ಚರ್ಚೆಗೆ ತೆಗೆದುಕೊಳ್ಳೋಣ ಎಂದು ಡಿಕೆಶಿ ಪ್ರಸ್ತಾಪಿಸಿದಾಗ, ಸಚಿವ ಯೋಗೇಶ್ವರ್ ಸಭೆಯ ಅಜೆಂಡಾ ಬಗ್ಗೆ ಮಾತಾಡುವಂತೆ ತಾಕೀತು ಮಾಡಿದರು.

ಆಗ ಕುಪಿತಗೊಂಡ ಡಿಕೆಶಿ, `ಅಜೆಂಡಾ ಬಗ್ಗೆಯೇ ಮಾತನಾಡಲು ಸಭೆಗೆ ಬಂದಿದ್ದೇನಯ್ಯ~ ಎಂದು ಏರುಧ್ವನಿಯಲ್ಲಿ ಹೇಳಿದರು. `ಅಜೆಂಡಾದಲ್ಲಿ ಇಲ್ಲದ ಕುಡಿಯುವ ನೀರಿನ ವಿಚಾರವನ್ನೇಕೆ ಚರ್ಚೆಗೆ ತೆಗೆದುಕೊಂಡಿರಿ ಎಂದು~ ಅವರು ಪ್ರಶ್ನಿಸಿದರು. ಆಗ ಪ್ರತಿಕ್ರಿಯಿಸಿದ ಸಚಿವರು ಕುಡಿಯುವ ನೀರಿಗೆ ಪ್ರಥಮ ಆದ್ಯತೆ ನೀಡಲಾಗುವುದು ಎಂದು ಜೋರಾಗಿ ಹೇಳಿದರು.

ಗಣಿ ವಿಷಯ ಪ್ರಸ್ತಾಪ- `ಶಾರ್ಟ್ ಸರ್ಕಿಟ್~:
ಸಭೆಯಲ್ಲಿ ಗಣಿ ಮತ್ತು ಭೂ ವಿಜ್ಞಾನಕ್ಕೆ ಸಂಬಂಧಿಸಿದ ವಿಷಯದ ಬಗ್ಗೆ ಚರ್ಚೆ ಆರಂಭವಾಯಿತು.  ಈ ಸಂದರ್ಭದಲ್ಲಿ ಮಾಗಡಿ ಶಾಸಕ ಎಚ್.ಸಿ.ಬಾಲಕೃಷ್ಣ ಮತ್ತು ಜಿ.ಪಂ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಧನಂಜಯ ಅವರು ಮಾಗಡಿಯಲ್ಲಿನ ಅಕ್ರಮ ಮರಳು ಗಣಿಗಾರಿಕೆ ಬಗ್ಗೆ ಪ್ರಶ್ನಿಸಿದರು.

ಈ ಬಗ್ಗೆ ವಿಸ್ತೃತ ಚರ್ಚೆ ನಡೆಯಬೇಕಿದೆ ಎಂದು ಡಿ.ಕೆ.ಶಿವಕುಮಾರ್ ಮಾತು ಆರಂಭಿಸುವುದಕ್ಕೂ ಮುನ್ನ ಸಭಾಂಗಣದಲ್ಲಿ ವಿದ್ಯುತ್ ದೀಪವೊಂದರಿಂದ ಹೊಗೆ ಮತ್ತು ಬೆಂಕಿ ಕಾಣಿಸಿಕೊಂಡಿತು.

ಇದರಿಂದ ಕ್ಷಣಕಾಲ ಸಭಾಂಗಣದಲ್ಲಿ ಆತಂಕದ ವಾತಾವರಣ ನಿರ್ಮಾಣವಾಯಿತು. ಕೂಡಲೇ ವಿದ್ಯುತ್ ದೀಪಗಳನ್ನು ಆರಿಸಲಾಯಿತು. ಆದರೂ ಬೆಂಕಿ ಉರಿಯುತ್ತಿತ್ತು. ಆಗ ನೀರನ್ನು ಎರಚಿ ಬೆಂಕಿ ನಂದಿಸಲಾಯಿತು. ನಂತರ ಜಿ.ಪಂ ಸಿಇಒ ವೆಂಕಟೇಶಪ್ಪ ಅವರು ಸಭೆಯ ಅಧ್ಯಕ್ಷರಾದ ಸಚಿವ ಯೋಗೀಶ್ವರ್ ಸೂಚನೆ ಮೇರೆಗೆ ಸಭೆ ಮುಂದೂಡಲಾಗಿದೆ ಎಂದು ಘೋಷಿಸಿದರು.

ಯೋಗೇಶ್ವರ್ ರಣಹೇಡಿ

`ಜಿಲ್ಲಾ ಪಂಚಾಯಿತಿ ಕೆಡಿಪಿ ಸಭೆಯಲ್ಲಿ ಗಂಭೀರ ವಿಚಾರಗಳನ್ನು ಚರ್ಚಿಸಲು ನಾನು ಬಂದಿದ್ದೆ. ಆದರೆ ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ.ಪಿ.ಯೋಗೇಶ್ವರ್ ರಣಹೇಡಿಯಂತೆ ಸಭೆಯನ್ನು ಮುಂದೂಡಿ ಪಲಾಯನಗೈದಿದ್ದಾರೆ. ಇದು ಪ್ರಜಾಪ್ರಭುತ್ವಕ್ಕೆ ಅಗೌರವ ತೋರಿದಂತೆ~ ಎಂದು ಕನಕಪುರ ಶಾಸಕ ಡಿ.ಕೆ.ಶಿವಕುಮಾರ್ ಕಿಡಿಕಾರಿದರು.

ಕೆಡಿಪಿ ಸಭೆ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, `ಜಿಲ್ಲೆಯ ಉಸ್ತುವಾರಿ ಸಚಿವರು, ಅವರ ಪಿ.ಎಗಳು ಹಾಗೂ ಅಧಿಕಾರಿಗಳು ಲೂಟಿ ಮಾಡುತ್ತಿದ್ದಾರೆ. ಮರಳು, ಕ್ರಷರ್, ಕ್ವಾರಿಯಿಂದ ಸಚಿವರು ಹಣ ವಸೂಲಿ ಮಾಡುತ್ತಿದ್ದಾರೆ. ಜಿಲ್ಲೆಯಲ್ಲಿ ಅಧಿಕಾರಿಗಳೆಲ್ಲ ಲಂಚ ತೆಗೆದುಕೊಳ್ಳುತ್ತಿದ್ದಾರೆ~ ಎಂದು ದೂರಿದರು.

`ಈ ಬಗ್ಗೆ ನಾನು ಚರ್ಚಿಸುತ್ತೇನೆ ಎಂದು ಹೆದರಿ ಸಣ್ಣ ಕಾರಣವೊಂದನ್ನು ಮುಂದಿಟ್ಟುಕೊಂಡು ಇಡೀ ಸಭೆಯನ್ನು ಮುಂದೂಡಿದ್ದಾರೆ~ ಎಂದು ಡಿಕೆಶಿ ಟೀಕಿಸಿದರು. `ಕಾನೂನಿಗಿಂತ ಯಾರೂ ದೊಡ್ಡವರಲ್ಲ ಎಂಬುದು ಸಚಿವರಿಗೆ ಕೆಲವೇ ದಿನಗಳಲ್ಲಿ ಗೊತ್ತಾಗಲಿದೆ. ಇನ್ನೇನು ಅವರ ಕೊನೆಯ ದಿನಗಳು ಬರುತ್ತಿವೆ~ ಎಂದು ಅವರು ಭವಿಷ್ಯ ನುಡಿದರು.

ಡಿಕೆಶಿ ಕೊಳಕು ವ್ಯಕ್ತಿ

`ಶಾಸಕ ಡಿ.ಕೆ.ಶಿವಕುಮಾರ್ ಒಬ್ಬ ಕೊಳಕು ಹಾಗೂ ಕೊಚ್ಚೆ ವ್ಯಕ್ತಿತ್ವದ ವ್ಯಕ್ತಿ. ಇವರ ಬಗ್ಗೆ ಮಾತನಾಡಿ ನನ್ನ ಬಾಯನ್ನು ಹೊಲಸು ಮಾಡಿಕೊಳ್ಳಲಾರೆ~ ಎಂದು ಅರಣ್ಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಸಿ.ಪಿ.ಯೋಗೀಶ್ವರ್ ತಿರುಗೇಟು ನೀಡಿದರು.

ಕೆಡಿಪಿ ಸಭೆ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, `ಡಿ.ಕೆ.ಶಿವಕುಮಾರ್ ವೈಯಕ್ತಿಕ ಹಿತಾಸಕ್ತಿ ಸಾಧಿಸಿಕೊಳ್ಳಲು ಸಭೆಗೆ ಬಂದಿದ್ದರು. ಅವರ ಬೆದರಿಕೆಗಳು ಸಭೆಯಲ್ಲಿ ನಡೆಯದ ಕಾರಣ ಬಾಯಿಗೆ ಬಂದಂತೆ ಮಾತನಾಡಿದ್ದಾರೆ~ ಎಂದು ಪ್ರತಿಕ್ರಿಯಿಸಿದರು.

`ಸಭಾಂಗಣದಲ್ಲಿ ಶಾರ್ಟ್ ಸರ್ಕಿಟ್ ಆದ್ದರಿಂದ ಸಭೆಯನ್ನು ಮುಂದಿನ ವಾರಕ್ಕೆ ಮುಂದೂಡಲಾಗಿದೆ. ಇದರಲ್ಲಿ ನನ್ನದೇನೂ ತಪ್ಪಿಲ್ಲ. `ಜಿಲ್ಲೆ ಮತ್ತು ರಾಜ್ಯದಲ್ಲಿ 25 ವರ್ಷದಿಂದ ಡಿಕೆಶಿ `ಹಫ್ತಾ~ ವಸೂಲಿ ಮಾಡುತ್ತಿದ್ದಾರೆ. ಅವರ ಚಾಳಿಯನ್ನು ನನ್ನ ಮೇಲೆ ಹೊರಿಸಲು ಪ್ರಯತ್ನಿಸುತ್ತಿದ್ದಾರೆ~ ಎಂದು ಅವರು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.