ADVERTISEMENT

ಕಳಪೆ ರಸ್ತೆ ಕಾಮಗಾರಿ: ಹೇಳೋರಿಲ್ಲ, ಕೇಳೋರಿಲ್ಲ..!

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2011, 19:30 IST
Last Updated 9 ಫೆಬ್ರುವರಿ 2011, 19:30 IST

ಕನಕಪುರ:  ಪಟ್ಟಣದ ಎಂ.ಜಿ.ರಸ್ತೆ ಅಭಿವೃದ್ದಿ ಕಾಮಗಾರಿ ಕಳಪೆಯಾಗಿದೆ ಎಂದು ಆರೋಪಿಸಿ ಬಹುಜನ ಸಮಾಜ ಪಕ್ಷದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಅವರು ಕಾಮಗಾರಿಗೆ ತಡೆಯೊಡ್ಡಿ ಸ್ಥಗಿತಗೊಳಿಸಿದರು.ಈ ರಸ್ತೆ ಕಾಮಗಾರಿ ಕಳಪೆಯಾಗಿದೆ. ಅಧಿಕಾರಿಗಳು ಮತ್ತು ಗುತ್ತಿಗೆದಾರರು ಶಾಮೀಲಾಗಿ ಭಾರಿ ಅವ್ಯವಹಾರ ನಡೆಸಿದ್ದಾರೆ. ಕೋಟ್ಯಂತರ ರೂಪಾಯಿ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಅವರು ಆರೋಪಿಸಿದರು.ಮಲ್ಲಿಕಾರ್ಜುನ ಅವರ ಆರೋಪದಿಂದ ಎಚ್ಚೆತ್ತುಕೊಂಡು ಗುತ್ತಿಗೆದಾರರು ರಸ್ತೆ ಕಾಮಗಾರಿಯನ್ನು ಸರಿಪಡಿಸಿ, ಮತ್ತೊಮ್ಮೆ ಭರ್ತಿ ತುಂಬಿರುವ ಮಣ್ಣನ್ನು ಹೊರತೆಗೆದು ಜಲ್ಲಿಪುಡಿಯನ್ನು ತುಂಬಿ ಗುಣಮಟ್ಟದ ಕಾಮಗಾರಿಗೆ ಚಾಲನೆ ನೀಡಿದರು.

ಕಾಮಗಾರಿ ಕಳಪೆ ಕುರಿತು ಪತ್ರಿಕೆಯೊಂದಿಗೆ ಮಾತನಾಡಿದ ಮಲ್ಲಿಕಾರ್ಜುನ ಅವರು, ಪಟ್ಟಣದ ವಾಣಿ ಟಾಕೀಸ್‌ನಿಂದ ಹೌಸಿಂಗ್ ಬೋರ್ಡ್‌ವರೆಗೂ ಪೂರ್ಣ ರಸ್ತೆಯ ಹಿಂದಿನ ಮಟ್ಟನ್ನು ತೆಗೆದು ಹೊಸದಾಗಿ ಗ್ರಾವೆಲ್ ಮತ್ತು ಜಲ್ಲಿ ಮಿಕ್ಸ್‌ಪುಡಿಯನ್ನು ತುಂಬಬೇಕು. ಆದರೆ ಈ ವಿಧಾನದಲ್ಲಿ ಕಾಮಗಾರಿ ನಡೆಯುತ್ತಿಲ್ಲ ಎಂದು ದೂರಿದರು.ಕನಕಪುರ ಪಟ್ಟಣ ಎಂ.ಜಿ.ರಸ್ತೆ ವಿಸ್ತೀರ್ಣಗೊಂಡು ಎರಡು ವರ್ಷಗಳಾಗಿವೆ. ಪರಿಣತ ಗುತ್ತಿಗೆದಾರರಿಗೆ ಅಭಿವೃದ್ಧಿ ಕಾಮಗಾರಿಯನ್ನು ನೀಡದೆ  ತಮಗೆ ಬೇಕಾದವರಿಗೆ ನೀಡಿದ್ದಾರೆ. ಅದನ್ನು ಮತ್ತೆ ತುಂಡು ಗುತ್ತಿಗೆದಾರರಿಗೆ ನೀಡಲಾಗಿದೆ. ಹೀಗಾಗಿ  ಪ್ರತಿ ಅರ್ಧ ಕಿಲೋ ಮೀಟರ್‌ಗೆ ಒಂದು ಭಾಗಮಾಡಿಕೊಂಡು ಕೆಲಸ ಮಾಡುತ್ತಿದ್ದು, ಇದು ಸಂಚಾರ ವ್ಯವಸ್ಥೆಗೆ ತೊಡಕಾಗಿದೆ ಎಂದು ಅವರು ವಿವರಿಸಿದರು. ಕಾಮಗಾರಿ ಸಹ ಕಳಪೆ ಮಟ್ಟದಿಂದ ಕೂಡಿದೆ.

ವಾಣಿ ಟಾಕೀಸ್‌ವರೆಗೂ ರಸ್ತೆಯನ್ನು ಅಭಿವೃದ್ಧಿ ಪಡಿಸಿದ ಗುತ್ತಿಗೆದಾರರು ಎರಡು ಬದಿಗಳ 15 ಅಡಿಯಷ್ಟು ರಸ್ತೆಯನ್ನು ಮಾತ್ರ ಅಭಿವೃದ್ಧಿಗೊಳಿಸುತ್ತಿದ್ದಾರೆ. ಇದನ್ನು ಪ್ರಶ್ನಿಸಿದರೆ, ಯಾರಲ್ಲೂ ಉತ್ತರವಿಲ್ಲ. ಕಾಮಗಾರಿಯ ನಿಜವಾದ ಗುತ್ತಿಗೆದಾರ ಯಾರು ಎಂದೇ ತಿಳಿಯುತ್ತಿಲ್ಲ. ಇಲ್ಲಿ ಕೆಲಸ ಮಾಡುವವರನ್ನು ಕೇಳಿದರೆ ಅವರಲ್ಲಿ ಉತ್ತರವಿಲ್ಲ. ಯಾವುದೇ ಕಾಮಗಾರಿಗಳು ನಡೆದರೂ ಅವಧಿಯೊಳಗೆ ಮುಗಿಸಬೇಕಿದೆ. ಅದರೆ ಇಲ್ಲಿ ಎರಡು ವರ್ಷಗಳಾದರು ಕಾಮಗಾರಿ ಮುಕ್ತಾಯವಾಗಿಲ್ಲ.

ಒಟ್ಟಾರೆ 13 ಕೋಟಿ ರೂ. ಮೊತ್ತದ  ಎಂ.ಜಿ.ರಸ್ತೆ ಅಭಿವೃದ್ಧಿ ಕಾಮಗಾರಿ ಸಂಪೂರ್ಣ ಕಳಪೆಯಿಂದ ಕೂಡಿದ್ದು, ಉದ್ಘಾಟನೆಗೆ ಮುನ್ನವೇ ರಸ್ತೆ ಬಿರುಕುಬಿಟ್ಟಿದೆ. ಇಷ್ಟೆಲ್ಲಾ ಅವ್ಯವಹಾರ ನಡೆಯುತ್ತಿದ್ದರೂ ಗುಣಮಟ್ಟ ತಪಾಸಣೆಗಾಗಲಿ, ಕಾಮಗಾರಿ ಪರಿಶೀಲನೆಯಾಗಲಿ ನಡೆಯುತ್ತಿಲ್ಲ. ಸ್ಥಳೀಯ ಆಡಳಿತಗಳು, ಜನಪ್ರತಿನಿಧಿಗಳು ವಿರೋಧ ಪಕ್ಷಗಳು ಇದರ ವಿರುದ್ಧ ಚಕಾರವೆತ್ತುತ್ತಿಲ್ಲ. ಇವೆಲ್ಲ ಗಮನಿಸಿದರೆ ಎಲ್ಲರೂ ಗುತ್ತಿಗೆದಾರರೊಂದಿಗೆ ಶಾಮೀಲಾಗಿರುವ ಅನುಮಾನ ಬರುತ್ತದೆ ಎಂದು ಅವರು ದೂರಿದರು.ಈ ಕಾಮಗಾರಿ ಪರಿಶೀಲನೆಗೆ ಕೇಂದ್ರ ಸರ್ಕಾರ ಉನ್ನತ ಮಟ್ಟದ ತನಿಖಾ ತಂಡ ಕಳುಹಿಸಿ ಪರಿಶೀಲನೆ ನಡೆಸಬೇಕು. ಇಂಥ ಅಕ್ರಮ, ಅವ್ಯವಹಾರ ತಡೆಯದಿದ್ದರೆ ಬಹುಜನ ಸಮಾಜ ಪಕ್ಷವು ಬೀದಿಗಿಳಿದು ಹೋರಾಟ ಮಾಡುತ್ತದೆ ಎಂದು ಎಚ್ಚರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.