ADVERTISEMENT

ಕಾಡಾನೆ ದಾಳಿಗೆ ಕಬ್ಬು ಬೆಳೆ ನಾಶ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2011, 19:30 IST
Last Updated 13 ಫೆಬ್ರುವರಿ 2011, 19:30 IST

ಕನಕಪುರ:  ನಾಡಿಗೆ ಬಂದ ಕಾಡಾನೆಗಳು ಕಬ್ಬಿನ ಗದ್ದೆಗೆ ನುಗ್ಗಿ ಕಟಾವಿಗೆ ಬಂದಿದ್ದ ಕಬ್ಬನ್ನು ಧ್ವಂಸಗೊಳಿಸಿರುವ ಘಟನೆ ಉಯ್ಯಂಬಳ್ಳಿ ಹೋಬಳಿಯ ಹಾರೋಶಿವನಹಳ್ಳಿ ದಾಖಲೆ ಹೊಸದೊಡ್ಡಿ ಗ್ರಾಮದಲ್ಲಿ ನಡೆದಿದೆ.

ಸುಮಾರು 10 ಆನೆಗಳಿದ್ದ ಗುಂಪು ಕಬ್ಬಿನತೋಟಕ್ಕೆ ನುಗ್ಗಿ ಕಬ್ಬನ್ನು ನಾಶಪಡಿಸಿವೆ. ಆನೆಗಳು ಬಂದಿರುವುದನ್ನು ಅರಿತ ಗ್ರಾಮಸ್ಥರು ಅವುಗಳನ್ನು ಕಾಡಿಗೆ ಅಟ್ಟುವ ಪ್ರಯತ್ನ ನಡೆಸಿದ್ದಾರೆ. ಪ್ರತಿದಿನವು ಆನೆಗಳು ಜಮೀನಿನ ಹೊರವಲಯಕ್ಕೆ ಬರುತ್ತಿದ್ದವು. ಬೆಳೆ ಬೆಳೆದಿರುವ ರೈತರು ರಾತ್ರಿವೇಳೆ ಜಮೀನಿನಲ್ಲಿ ಕಾವಲು ಕಾದು ಶಬ್ಧಮಾಡಿ ಆನೆಗಳನ್ನು ಕಾಡಿಗೆ ಅಟ್ಟುತ್ತಿದ್ದರು. ಆದರೆ ಶುಕ್ರವಾರ ರಾತ್ರಿ ಯಾರು ಕಾವಲಿಗೆ ಹೋಗಿರಲಿಲ್ಲ. ಈ ವೇಳೆ ಕಬ್ಬಿನ ಗದ್ದೆಗೆ ಲಗ್ಗೆಯಿಟ್ಟ ಆನೆಗಳು ಕೈಗೆ ಬಂದಿದ್ದ ಫಸಲನ್ನು ನಾಶಮಾಡಿವೆ ಎಂದು ರೈತ ವೀರಭದ್ರೇಗೌಡ ತಮ್ಮ ಅಳಲು ತೋಡಿಕೊಂಡರು.

ಆನೆಗಳು ಬರದಂತೆ ಟ್ರಂಚ್ ಮತ್ತು ವಿದ್ಯುತ್ ಬೇಲಿ ನಿರ್ಮಿಸಿರುವುದು ಏನು ಪ್ರಯೋಜನವಾಗಿಲ್ಲ.ಯಾವುದೇ ರೀತಿಯ ಬಂದೋಬಸ್ತ್ ಮಾಡಿದರೂ ಸಹ ಆನೆಗಳು ನಿರಂತರವಾಗಿ ಜಮೀನುಗಳಿಗೆ ನುಗ್ಗಿ ಬೆಳೆಗಳನ್ನು ನಾಶಮಾಡುತ್ತಿವೆ.

ಆನೆದಾಳಿಯಿಂದ ಸುಮಾರು 50 ಸಾವಿರಕ್ಕೂ ಹೆಚ್ಚು ಬೆಳೆ ನಷ್ಟವಾಗಿದೆ. ಈ ಸಂಬಂಧ ಅರಣ್ಯ ಇಲಾಖೆಗೆ ದೂರು ನೀಡಲಾಗಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಪರಿಶೀಲನೆ ನಡೆಸಿ ಸರ್ಕಾರಕ್ಕೆ ವರದಿ ನೀಡಿ ಸೂಕ್ತ ಪರಿಹಾರ ಕೊಡಿಸಿಕೊಡುವಂತೆ ರೈತರು ಒತ್ತಾಯಿಸಿದ್ದಾರೆ.

ಕೋಡಿಹಳ್ಳಿ ಹೋಬಳಿ, ಸಾತನೂರು ಹೋಬಳಿ, ಉಯ್ಯಂಬಳ್ಳಿ ಹೋಬಳಿ ಸೇರಿದಂತೆ ಕಸಬಾ ಹೋಬಳಿಯ ಕೆಲವು ಗ್ರಾಮಗಳು ಮುತ್ತತ್ತಿ, ಬಿಳಿಕಲ್‌ಬೆಟ್ಟ, ಬನ್ನೇರುಘಟ್ಟ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿದ್ದು ಆನೆಗಳು ಆಗಾಗ ಜಮೀನುಗಳಿಗೆ ನುಗ್ಗಿ ಬೆಳೆ ನಾಶಮಾಡುತ್ತಿವೆ. ಕೆಲವು ರೈತರು ಆನೆಗಳಿಗೆ ಸಿಕ್ಕಿ ತಮ್ಮ ಜೀವ ಕಳೆದುಕೊಂಡಿದ್ದಾರೆ.ಆದರೂ ಅರಣ್ಯ ಇಲಾಖೆಯವರು ಇದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ಸಾರ್ವಜನಿಕರು ದೂರಿದರು. ಈ ಕೂಡಲೇ ಆನೆದಾಳಿಯನ್ನು ಸಂಪೂರ್ಣವಾಗಿ ತಡೆಗಟ್ಟಬೇಕೆಂದು ಅವರು ಆಗ್ರಹಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.