ADVERTISEMENT

ಕುಂಬಾರಿಕೆಯ ಕುಲಿಮೆ ಬದುಕು ಬದಲಿಸಿದಾಗ...

ಗ್ರಾಮೀಣ ಮಹಿಳೆಯ ಮೌನ ಸಾಧನೆ n ಜಾಗ ನೀಡಿದ ಜಾನಪದ ಲೋಕ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2014, 11:08 IST
Last Updated 8 ಮಾರ್ಚ್ 2014, 11:08 IST

ರಾಮನಗರ: ಒಂಬತ್ತು ವರ್ಷದ ಹುಡುಗಿ ತನ್ನ ಕೈಯ್ಯಲ್ಲಿದ್ದ ಒಂದಿಷ್ಟು ಚಿಲ್ಲರೆ ಕಾಸನ್ನು ಕೂಡಿಡಬೇಕು ಎಂಬ ಆಸೆಯಿಂದ ಮಣ್ಣಿನ ಹುಂಡಿ ತರಲು ಮೂರು ಮೈಲಿ ನಡೆದುಕೊಂಡು ರಾಮನಗರದ ಕರಕುಶಲ ವಸ್ತುವಿನ ಕುಂಬಾರಿಕೆ ವಿಭಾಗಕ್ಕೆ ಬಂದಳು. ಅಲ್ಲಿ ಮಣ್ಣಿನಿಂದ ವಿವಿಧ ರೀತಿಯ ಬೊಂಬೆ­ಗಳ ತಯಾರಿಕೆಯನ್ನು ನೋಡತ್ತಾ ನಿಂತ ಹುಡುಗಿಗೆ ತಾನು ಏಕೆ ಇಲ್ಲಿಗೆ ಬಂದೆ ಎಂಬುದೇ ಮರೆತು ಹೋಯಿತು. ಅಲ್ಲಿದ್ದ ಕಲಾವಿದ ಅಗಸರ ಕರಿಯಪ್ಪ ಈಕೆಯ ಕುತೂಹಲವನ್ನು ಗುರುತಿಸಿ ಬೊಂಬೆ ಮಾಡುವುದನ್ನು ಕಲಿಯು­ತ್ತೀಯಾ ಮಗು ಎಂದು ಕೇಳಿದರು.

ಅಂದಿನಿಂದ ಹುಡುಗಿ ಮಣ್ಣಿನ ಗೀಳು ಹತ್ತಿಸಿಕೊಂಡಳು. ಇದಕ್ಕೆ ಮನೆಯವರು ಮೂಗು ಮುರಿದರು. ಬರೀ ಗಂಡಸರೇ ಇರುವ ಜಾಗಕ್ಕೆ ಏಕೆ ಹೋಗುತ್ತಿಯಾ ಎಂದು ಅಕ್ಕಪಕ್ಕದವರು ಪ್ರಶ್ನಿಸಿದರು. ಆ ಹುಡುಗಿ ಅದ್ಯಾವುದಕ್ಕೂ ಸೊಪ್ಪು ಹಾಕಲಿಲ್ಲ. ಮನಸ್ಸಿನ ತುಂಬಾ ಕುಂಬಾ­ರಿಕೆ ಕಲೆಯ ಗೀಳು ತುಂಬಿಸಿ­ಕೊಂಡು ಕೂತುಬಿಟ್ಟಳು. ಶಾಲೆಗೆ ಹೋಗಲಿಲ್ಲ. ಮನೆಯಲ್ಲಿ ಅದು ಬೇಕು, ಇದು ಬೇಕು ಎಂದು ಕೇಳಲಿಲ್ಲ. ಕುಂಬಾರಿಕೆಯ ತರಬೇತಿ ಪಡೆದಳು.

ದಿನ ಕಳೆದಂತೆ ಈ ಹುಡುಗಿಯ ಕೈಯಲ್ಲಿ ಮಣ್ಣು ರೂಪುಗೊಳ್ಳುವು­ದನ್ನು ನೋಡಿ ಅವರಿಗೆ ತರಬೇತಿ ಕೊಟ್ಟವರೂ ಅಚ್ಚರಿಗೊಂಡರು. ಹೀಗೆ ಮಣ್ಣಿನ ಜತೆ ನಂಟು ಬೆಳೆಸಿಕೊಂಡ ಹುಡು­ಗಿಗೆ ಮಣ್ಣೇ ಎಲ್ಲವೂ ಆದದ್ದು ಮುಂದಿನ ಕತೆ.

ದಿನವೊಂದಕ್ಕೆ ಹತ್ತು ಗಂಟೆ ಈ ಮಣ್ಣಿನ ಕೆಲಸದೊಳಗೆ ಮುಳುಗಿ ಹೋಗಿ ದಿನಕ್ಕೆ ಹತ್ತು ₨೨೦ ಸಂಪಾ­ದನೆ ಮಾಡುತ್ತಿದ್ದ ದಿನಗಳಿದ್ದವು. ನಂತರ ಅನುಭವ ಹೆಚ್ಚುತ್ತಿದ್ದಂತೆ ಸಂಪಾದನೆ ದಿನಕ್ಕೆ ₨ 100ರಿಂದ  200 ಅನ್ನು ದಾಟಿತು. ಈ ಮಹಿಳೆ ತನ್ನ ಈ ಕಲೆ­ಯಿಂದಲೇ ಇದೀಗ ತಿಂಗಳಿಗೆ ಐವತ್ತು ಸಾವಿರ ರೂಪಾಯಿ ವಹಿವಾಟು ನಡೆಸುವ ಮಟ್ಟಕ್ಕೆ ಬೆಳೆದಿದ್ದಾರೆ. ಅಂದ­ಹಾಗೆ ಅವರ ಹೆಸರು ರಾಮನಗರದ ಆರ್.ವಿ. ಅನುಸೂಯಬಾಯಿ.

ಬೇಡಿಕೆ ಹೆಚ್ಚು: ಜಾನಪದ ಲೋಕದ ಕುಂಬಾ­ರಿಕೆಯ ವಿಭಾಗದಲ್ಲಿ ಅನು­ಸೂಯಾ ಬಾಯಿ ತಯಾರಿಸುವ ಕರ­ಕುಶಲ ವಸ್ತುಗಳಿಗೆ ಅಪಾರ ಬೇಡಿಕೆ ಇದೆ. ಮದ್ರಾಸ್, ಸೇಲಂ, ಹೈದರಾ­ಬಾದ್‌, ಮುಂಬೈ ಮತ್ತಿತರ ನಗ­ರಗ­ಳಿಂದ ಬರುವ ಸಗಟು ವ್ಯಾಪಾ­ರಿಗಳು ಇಲ್ಲಿಂದ ವಸ್ತುಗಳನ್ನು ಕೊಂಡೊ­ಯ್ಯೊ­ತ್ತಾರೆ. ಈ ಮಹಿಳೆ ತಯಾರಿಸುವ ಬೊಂಬೆ­ಗಳು ಶ್ರೀಮಂತರ ಮನೆಯ ‘ಶೋಕೇಸ್‌’ಗಳಲ್ಲಿ ಶೋಭಿಸುತ್ತಿವೆ. ಸಣ್ಣ ಸಣ್ಣ ಆನೆಗಳಿಂದ ಹಿಡಿದು ದೊಡ್ಡ ಹೂವಿನ ಕುಂಡಗಳು, ಕುದುರೆ, ಬಸವಣ್ಣ, ಗಣಪತಿ, ವಿವಿಧ ರೀತಿಯ ದೀಪ­ಗಳು, ಪರಿಸರದಲ್ಲಿ ಕಾಣುವ ಹೂಬಳ್ಳಿಗಳು, ಹಣ್ಣುಕಾಯಿಗಳು ಹೀಗೆ ವಿವಿಧ ಕಲಾಕೃತಿಗಳು ಅನುಸೂಯ ಬಾಯಿಯ ಕೈಯ್ಯಲ್ಲಿ ರೂಪು ಪಡೆದಿವೆ.

‘ಈಗ ಜಾನಪದ ಲೋಕಕ್ಕೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದೆ. ಭಾನು­­ವಾರ, ರಜೆಯ ದಿನಗಳಲ್ಲಿ ಶಾಲಾ ಮಕ್ಕಳು, ಪ್ರವಾಸಿಗರು, ಹೊರ­ದೇಶದವರು ಹೆಚ್ಚಾಗಿ ಬರುತ್ತಾರೆ. ಬಂದವರೆಲ್ಲರೂ ನಾವು ತಯಾರು ಮಾಡಿರುವ ಕರಕುಶಲ ವಸ್ತುಗಳನ್ನು ಕೊಂಡುಕೊಳ್ಳುತ್ತಾರೆ' ಎಂದು  ಅನು­ಸೂಯಾಬಾಯಿ 'ಪ್ರಜಾವಾಣಿ'ಗೆ ತಿಳಿಸಿದರು.

'ನಾನು ಓದಿದವಳಲ್ಲ, ಒಂಬತ್ತನೇ ವರ್ಷಕ್ಕೆ ಕರಕುಶಲ ಕಲೆಯನ್ನು ಕಲಿತ ನಾನು 21 ವರ್ಷ ಕಾವೇರಿ ಕರಕುಶಲ ತರಬೇತಿ ಕೇಂದ್ರದಲ್ಲಿ ಕೆಲಸ ಮಾಡಿದೆ. ನಾಗೇಗೌಡರು ಜಾನಪದ ಲೋಕದಲ್ಲಿ ಸ್ಥಳವನ್ನು ಕೊಟ್ಟ ಮೇಲೆ ಇಲ್ಲಿ ಕುಂಬಾರಿಕೆ ಕೆಲಸ ಮಾಡುವುದನ್ನು ಪ್ರಾರಂಭಿಸಿದೆ. ಸತತ 18 ವರ್ಷದಿಂದ ಇದನ್ನೇ ಬದುಕಾಗಿಸಿಕೊಂಡಿದ್ದೇನೆ' ಎಂದು ಅವರು ಹೇಳುತ್ತಾರೆ.

'ನನ್ನ ಜತೆ ಆರು ಜನ  ಕೆಲಸ ಮಾಡು­ತ್ತಿದ್ದಾರೆ. ಅನಕ್ಷರಸ್ಥಳಾ­ಗಿರುವ ನಾನು  ಹಂತಹಂತವಾಗಿ ಮೇಲೆ ಬಂದಿದ್ದೇನೆ. ಮಹಿಳೆಯರಲ್ಲಿ ಗುರಿ ಇದ್ದರೆ ಸಾಧನೆ ಮಾಡಲು ಸಾಧ್ಯ. ಛಲವಿದ್ದು ಸಾಧಿಸಲೇಬೇಕೆಂಬ ದಿಟ್ಟತನವಿದ್ದರೆ ಮಹಿಳೆಯೂ ಏನನ್ನಾ­ದರೂ ಸಾಧಿ­ಸಬಲ್ಲಳು' ಎಂದು ವಿವರಿಸುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.