ADVERTISEMENT

ಕುಡಿಯುವ ನೀರಿನ ಕಾಮಗಾರಿಗೆ ಹೆಚ್ಚಿನ ಹಣ ಬಳಸಲು ತೀರ್ಮಾನ

​ಪ್ರಜಾವಾಣಿ ವಾರ್ತೆ
Published 27 ಜೂನ್ 2012, 19:30 IST
Last Updated 27 ಜೂನ್ 2012, 19:30 IST

ರಾಮನಗರ: ತಾಲ್ಲೂಕು ಪಂಚಾಯಿತಿಗೆ 13ನೇ ಹಣಕಾಸು ಯೋಜನೆಯಡಿ ಬರುವ ಸಂಪೂರ್ಣ ಅನುದಾನವನ್ನು ಗ್ರಾಮೀಣ ಪ್ರದೇಶದ ಕುಡಿಯುವ ನೀರಿನ ಕಾಮಗಾರಿಗೆ ಬಳಕೆ ಮಾಡುವ ಸಂಬಂಧ ಪಂಚಾಯಿತಿ ಸದಸ್ಯರು ಒಮ್ಮತದಿಂದ ನಿರ್ಣಯ ಅಂಗೀಕರಿಸಿದರು.

ನಗರದ ತಾ.ಪಂ. ಸಭಾಂಗಣದಲ್ಲಿ ಅಧ್ಯಕ್ಷೆ ಭಾನುಮತಿ, ಉಪಾಧ್ಯಕ್ಷೆ ಶೋಭಾ ಅವರ ನೇತೃತ್ವದಲ್ಲಿ ಮಂಗಳವಾರ ನಡೆದ ಸರ್ವ ಸದಸ್ಯರ ಸಭೆಯಲ್ಲಿ ಎಲ್ಲ ಸದಸ್ಯರು ಒಕ್ಕೊರಲಿನಿಂದ ಈ ನಿರ್ಣಯಕ್ಕೆ ಒಪ್ಪಿಗೆ ಸೂಚಿಸಿದರು.

ಇಡೀ ತಾಲ್ಲೂಕಿನಲ್ಲಿ ಬರದಿಂದ ಜನ ಜಾನುವಾರುಗಳಿಗೆ ಕುಡಿಯಲು ನೀರಿಲ್ಲದಂತಾಗಿದೆ. ಎಲ್ಲೆಡೆ ನೀರಿಗಾಗಿ ಹಾಹಾಕಾರ ಸೃಷ್ಟಿಯಾಗಿದೆ. 13ನೇ ಹಣಕಾಸಿನ ಅನುದಾನವನ್ನು ಕುಡಿಯುವ ನೀರಿನ ಯೋಜನೆಗೆ ಬಳಕೆ ಮಾಡಬೇಕು ಎಂಬ ಸೂಚನೆಯಿದ್ದರೂ ರಸ್ತೆ, ಚರಂಡಿ ಕಾಮಗಾರಿಗೆ ಬಳಕೆ ಮಾಡುತ್ತಿರುವುದು ಸರಿಯಲ್ಲ ಎಂದು ಸದಸ್ಯ ಭದ್ರಯ್ಯ ಆಕ್ಷೇಪಿಸಿದರು.

ಸದಸ್ಯರಾದ ಎಚ್.ಶಿವಪ್ರಸಾದ್, ಕೆ.ಎಸ್.ಸಿದ್ದಲಿಂಗೇಗೌಡ, ವೆಂಕಟರಂಗಯ್ಯ ಮತ್ತಿತರರು ಮಾತನಾಡಿ, ತಾಲ್ಲೂಕಿನಲ್ಲಿ ಮಳೆ ಕೊರತೆಯಿಂದ ಬರ ಎದುರಾಗಿದೆ. ಇಂತಹ ಸಂದರ್ಭದಲ್ಲಿ ರಸ್ತೆ, ಚರಂಡಿ ಕಾಮಗಾರಿಗಳನ್ನು ಕೈಗೆತ್ತಿಕೊಂಡಿರುವುದು ಸರಿಯಲ್ಲ. ಮೊದಲು ಕೊರೆಸಿರುವ ಕೊಳವೆ ಬಾವಿಗಳಿಗೆ ಪಂಪ್ ಅಳವಡಿಸಿ ಸಮರ್ಪಕವಾದ ಕುಡಿಯುವ ನೀರು ಸರಬರಾಜು ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಕಾಮಗಾರಿ ಸ್ಥಾಯಿ ಸಮಿತಿಗೆ ಒತ್ತಾಯ: ತಾ.ಪಂ. ವ್ಯಾಪ್ತಿಯಲ್ಲಿ ನಡೆಯುತ್ತಿರುವ ಕಾಮಗಾರಿಗಳ ಬಗ್ಗೆ ಸರಿಯಾಗಿ ಪರಿಶೀಲನೆ ಆಗುತ್ತಿಲ್ಲ. ಈ ಬಗ್ಗೆ ಸಭೆಗಳಲ್ಲಿ ಚರ್ಚಿಸಲು ಅವಕಾಶ ದೊರೆಯುತ್ತಿಲ್ಲ. ಇದರಿಂದ ಕಳಪೆ ಗುಣಮಟ್ಟದ ಕಾಮಗಾರಿಗಳು ನಡೆಯುತ್ತಿವೆ ಎಂದು ಸದಸ್ಯ ಕೆ.ಎಸ್.ಶಂಕರಯ್ಯ ದೂರಿದರು. ಇದಕ್ಕೆ ಬೆಂಬಲ ವ್ಯಕ್ತಪಡಿಸಿ ಮಾತನಾಡಿದ ಸದಸ್ಯ ಕೆ.ಎಸ್.ಸಿದ್ದಲಿಂಗೇಗೌಡ ಕಾಮಗಾರಿ ಸ್ಥಾಯಿ ಸಮಿತಿ ರಚನೆಗೆ ಒತ್ತಾಯಿಸಿದರು.

ಟ್ಯಾಂಕರ್ ನೀರು: ಗ್ರಾಮೀಣ ಪ್ರದೇಶದಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿದೆ. ಟ್ಯಾಂಕರ್‌ಗಳಲ್ಲಿ ನೀರು ಸರಬರಾಜು ಮಾಡಲು ಎಷ್ಟು ಹಣ ಖರ್ಚಾಗಿದೆ ಎಂದು ಸದಸ್ಯ ಎಚ್.ಶಿವಪ್ರಸಾದ್ ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಕಾರ್ಯ ನಿರ್ವಹಣಾಧಿಕಾರಿ ನಾರಾಯಣ ಸ್ವಾಮಿ, 2010-11ನೇ ಸಾಲಿನಲ್ಲಿ ಟ್ಯಾಂಕರ್ ಮೂಲಕ ಕುಡಿಯುವ ನೀರು ಸರಬರಾಜು ಮಾಡಲು 10 ಲಕ್ಷ ಹಣ ಬಿಡುಗಡೆಯಾಗಿತ್ತು. ಇದರಲ್ಲಿ 2.5 ಲಕ್ಷ ರೂಪಾಯಿ ಖರ್ಚಾಗಿದ್ದು 7.5 ಲಕ್ಷ ರೂಪಾಯಿ ಬಾಕಿ ಉಳಿದಿತ್ತು.

ಕಳೆದ ಸಾಲಿನಲ್ಲಿ 5 ಲಕ್ಷ ಬಿಡುಗಡೆಯಾಗಿದ್ದು ಇಲ್ಲಿಯವರಗೆ ಉಳಿಕೆಯಾಗಿದ್ದ 12.5 ಲಕ್ಷ ಸೇರಿದಂತೆ ಒಟ್ಟು 15 ಲಕ್ಷ ರೂಪಾಯಿಯನ್ನು ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜು ಮಾಡಲು ಖರ್ಚು ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.