ADVERTISEMENT

ಕೃಷಿ ಹೊಂಡ ಸಾಮಗ್ರಿ ವೆಚ್ಚ ಕೊಡದೆ ವಂಚನೆ

​ಪ್ರಜಾವಾಣಿ ವಾರ್ತೆ
Published 2 ಜುಲೈ 2017, 9:47 IST
Last Updated 2 ಜುಲೈ 2017, 9:47 IST
ಕನಕಪುರ ತಾಲ್ಲೂಕಿನ ದಾಳಿಂಬ ಗ್ರಾಮದಲ್ಲಿ ರೈತರ ಸಭೆ ನಡೆಯಿತು
ಕನಕಪುರ ತಾಲ್ಲೂಕಿನ ದಾಳಿಂಬ ಗ್ರಾಮದಲ್ಲಿ ರೈತರ ಸಭೆ ನಡೆಯಿತು   

ಕನಕಪುರ: 2014 ಮತ್ತು 2015ರಲ್ಲಿ ನಿರ್ಮಾಣ ಮಾಡಿರುವ ದನದ ಕೊಟ್ಟಿಗೆ ಹಾಗೂ ಕೃಷಿ ಹೊಂಡಗಳಿಗೆ ಬರಬೇಕಿದ್ದ ಸಾಮಗ್ರಿ ವೆಚ್ಚದ ಹಣವನ್ನು ಪಂಚಾಯಿತಿಯವರು ಕೊಡುತ್ತಿಲ್ಲ ವೆಂದು ತಾಲ್ಲೂಕಿನ ದಾಳಿಂಬ ಗ್ರಾಮದ ಜನರು ಆರೋಪಿಸಿದ್ದಾರೆ.

ತಾಲ್ಲೂಕಿನ ಸಾತನೂರು ಹೋಬಳಿ ಅರೆಕಟ್ಟೆದೊಡ್ಡಿ ಗ್ರಾಮ ಪಂಚಾಯಿತಿ ಯಲ್ಲಿ ನರೇಗಾ ಯೋಜನೆಯಲ್ಲಿ ಸಾಮಗ್ರಿ ವೆಚ್ಚವನ್ನು ಕೊಡುತ್ತಿಲ್ಲವೆಂಬ ಆರೋಪ ಕೇಳಿಬಂದಿದೆ. ಈ ಸಂಬಂಧ ದಾಳಿಂಬ ಗ್ರಾಮದಲ್ಲಿ ದಾಳಿಂಬ ಮತ್ತು ಕಚ್ಚುವನ ಹಳ್ಳಿ ಗ್ರಾಮದ ಜನತೆ ಸಭೆ ನಡೆಸಿ ಪಂಚಾಯಿತಿ ವಿರುದ್ಧ ಆರೋಪ ಮಾಡಿದರು.

ದಾಳಿಂಬ ಗ್ರಾಮದ ಮುಖಂಡ ಡಿ.ಎಚ್‌.ಕೃಷ್ಣೇಗೌಡ ಮಾತನಾಡಿ ಅರೆಕಟ್ಟೆದೊಡ್ಡಿ ಪಂಚಾಯಿತಿ ವ್ಯಾಪ್ತಿ ಯಲ್ಲಿ 2014ನೇ ಸಾಲಿನಲ್ಲಿ 198 ಫಲಾನುಭವಿಗಳು ದನದ ಕೊಟ್ಟಿಗೆ  ನಿರ್ಮಿಸಿದ್ದಾರೆ. ಅವರೆಲ್ಲರಿಗೂ ಕೂಲಿವೆಚ್ಚ ಮಾತ್ರ ಬಂದಿದೆ. ಸಾಮಗ್ರಿ ವೆಚ್ಚವನ್ನು ಇಲ್ಲಿಯ ತನಕ ಕೊಟ್ಟಿಲ್ಲ ಎಂದು ದೂರಿದರು.

ADVERTISEMENT

‘2015ನೇ ಇಸವಿಯಲ್ಲಿ 256 ರೈತರು ಜಮೀನುಗಳಲ್ಲಿ ಕೃಷಿ ಹೊಂಡ ನಿರ್ಮಿಸಿದ್ದಾರೆ. ಅವರಿಗೆ ಬರಬೇಕಿದ್ದ ಸಾಮಗ್ರಿ ವೆಚ್ಚವನ್ನು ಪಂಚಾಯಿತಿ ಈವರೆಗೂ ಕೊಟ್ಟಿಲ್ಲ. ಕೇಳಿದರೆ ನಿಮ್ಮ ಹಣದಲ್ಲಿ ಟ್ಯಾಕ್ಸ್‌, ಕಂದಾಯ ಮತ್ತು ಇತರೆ ಖರ್ಚುಗಳಾಗಿದ್ದು 200 ರಿಂದ 300 ರೂ ಬಂದಿದೆ ತೆಗೆದುಕೊಳ್ಳಿ ಎಂದು ಹೇಳುತ್ತಿದ್ದಾರೆ’ ಎಂದು ಆರೋಪಿಸಿದರು.

ಪ್ರತಿ ವರ್ಷದ ಅಂತ್ಯದೊಳಗೆ ಕೂಲಿ ಮೊತ್ತಕ್ಕೆ ಅನುಗುಣವಾಗಿ ಸಾಮಗ್ರಿ ವೆಚ್ಚವು ಬರಬೇಕು. ಆದರೆ ಪಂಚಾಯಿತಿ ಯಲ್ಲಿ ಹಣ ಕೊಡದೆ ದುರುಪಯೋಗ ಮಾಡಿಕೊಂಡು ಮೋಸ ಮಾಡುತ್ತಿ ದ್ದಾರೆ. ತಾಲ್ಲೂಕು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಕಚ್ಚುವನಹಳ್ಳಿ ಡಿ.ಶಿವಲಿಂಗೇಗೌಡ ಮಾತನಾಡಿ, ಈ ಗ್ರಾಮ ಪಂಚಾಯಿತಿ ಯಲ್ಲಿ ಸಾರ್ವಜನಿಕರಿಗೆ ವಂಚನೆ ಯಾಗುತ್ತಿದೆ, ಜನರಿಗೆ ಬರಬೇಕಾದ ಹಣವನ್ನು ಅಧಿಕಾರಿ ಮತ್ತು ಅಧ್ಯಕ್ಷ ಸೇರಿಕೊಂಡು ಮೋಸ ಮಾಡುತ್ತಿದ್ದಾರೆ. ದನದ ಕೊಟ್ಟಿಗೆ ಮತ್ತು ಕೃಷಿಹೊಂಡ ನಿರ್ಮಾಣಕ್ಕೆ ಹೆಚ್ಚಿನ ಆಸಕ್ತಿ ತೋರಿ ಕೆಲಸ ಮಾಡಿಸಿದ್ದರೆ ಪಂಚಾಯಿತಿ ಯವರು ಪೂರ್ಣ ಹಣ ಕೊಡುತ್ತಿಲ್ಲ ವೆಂದು ಆಪಾದಿಸಿದರು.

ಅಂದಾಜು ವೆಚ್ಚಕ್ಕೆ ಶೇಕಡ 10ರಷ್ಟು ತೆರಿಗೆ ವಿಧಿಸಲಾಗುತ್ತಿದೆ. ಕಾಮಗಾರಿ ಫಲಕ ಹಾಕಲು ₹1,200 ಖರ್ಚು ತೆಗೆದು ಸಾಮಗ್ರಿ ವೆಚ್ಚವನ್ನು ಸಂಪೂರ್ಣ  ಪಡೆಯುತ್ತಿದ್ದಾರೆ. ಪಂಚಾಯಿತಿಯಲ್ಲಿ ಭಾರಿ ಅವ್ಯವಹಾರ ನಡೆಯುತ್ತಿದ್ದು ಲೋಕಾಯುಕ್ತ ಮತ್ತು ಎ.ಸಿ.ಬಿ. ಅಧಿಕಾರಿಗಳು ಇದರ ವಿರುದ್ಧ ದೂರು ದಾಖಲಿಸಿಕೊಂಡು ಅನ್ಯಾಯವನ್ನು ತಡೆಗಟ್ಟಬೇಕೆಂದು ಮನವಿ ಮಾಡಿದರು.

ವಿ.ಎಸ್‌.ಎಸ್‌.ಎನ್‌. ನಿರ್ದೇಶಕ ಡಿ.ಕೆ.ರವಿ, ಡಿ.ಎಂ.ಚಿಕ್ಕಸಿದ್ದೇಗೌಡ, ವಿಜಿ, ಶಂಕರ್‌, ಕೆ.ಬಸವೇಗೌಡ, ಕಾಳೀರೇಗೌಡ, ಶಿವಮರೀಗೌಡ, ಬೋರೇಗೌಡ, ಶಿವಣ್ಣ, ಬಸವಣ್ಣ, ಮಹೇಶ್‌, ರಾಮು  ಉಪಸ್ಥಿತರಿದ್ದರು.

ಜನರಿಗೆ ಮೋಸ ಆಗಿಲ್ಲ
ಸಾಮಗ್ರಿ ವೆಚ್ಚ ಕೊಟ್ಟಿಲ್ಲವೆಂಬುದು ನಿಜ. ಆದರೆ ಪಂಚಾಯಿತಿಯಿಂದ ಜನರಿೆ ಯಾವುದೇ ಮೋಸ ಆಗಿಲ್ಲ ಎಂದು  ಅರೆಕಟ್ಟೆದೊಡ್ಡಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಲೋಕೇಶ್‌ ತಿಳಿಸಿದ್ದಾರೆ.ಪಂಚಾಯಿತಿಯಲ್ಲಿ 2014 ರಿಂದ ಇಲ್ಲಿಯವರೆಗೆ ನಡೆದಿರುವ ಎಲ್ಲಾ ಕಾಮಗಾರಿಗಳ ಸಾಮಗ್ರಿ ವೆಚ್ಚ ಖಾತೆಗೆ ಇನ್ನೂ ಬಂದಿಲ್ಲ.

ನರೇಗಾ ಯೋಜನೆಯಡಿ ಶೇಕಡ 60–40ರ ಅನುಪಾತ ಪಾಲನೆಯಾಗಿಲ್ಲ ಎಂಬ ಕಾರಣಕ್ಕೆ ಸಾಮಗ್ರಿ ವೆಚ್ಚವನ್ನು ಜಿಲ್ಲಾ ಪಂಚಾಯಿತಿಯಲ್ಲೇ ತಡೆ ಹಿಡಿಯಲಾಗಿದೆ ಎಂದಿದ್ದಾರೆ.

* * 

ಸಾಮಗ್ರಿ ವೆಚ್ಚವನ್ನು ಗುತ್ತಿಗೆದಾರ, ಪಂಚಾಯಿತಿ ಅಧಿಕಾರಿ ಮತ್ತು ಅಧ್ಯಕ್ಷ  ಹಂಚಿಕೊಂಡಿದ್ದಾರೆ. ರೈತರು ಕೇಳಿದರೆ ಸುಳ್ಳು ಕತೆ ಕಟ್ಟಿ ವಂಚಿಸುತ್ತಿದ್ದಾರೆ
ಡಿ.ಎಚ್‌.ಕೃಷ್ಣೇಗೌಡ
ಮುಖಂಡ ದಾಳಿಂಬ ಗ್ರಾಮ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.