ADVERTISEMENT

‘ಕೆರೆಗಳಲ್ಲಿ ತುಂಬಿದ ನೀರು ಶುಭ ಸೂಚನೆ’

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2017, 10:14 IST
Last Updated 1 ಅಕ್ಟೋಬರ್ 2017, 10:14 IST

ಮಾಡಬಾಳ್‌(ಮಾಗಡಿ): ತಾಲ್ಲೂಕಿನಲ್ಲಿ ಉತ್ತಮ ಮಳೆಯಾಗಿ ಕೆರೆಗಳೆಲ್ಲ ತುಂಬಿ ಕೋಡಿ ಹರಿದಿರುವುದು ಪ್ರಕೃತಿಯ ಶುಭ ಸೂಚನೆ. ಅದರಂತೆ ರಾಜಕೀಯ ಕೊಳೆಯೂ ಹರಿದು ಹೋಗಲಿ ಎಂದು ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಪೂಜಾರಿ ಪಾಳ್ಯದ ಕೃಷ್ಣಮೂರ್ತಿ ತಿಳಿಸಿದರು. ಹಂಚಿಕುಪ್ಪೆ ಕೆರೆ ತುಂಬಿ ಕೋಡಿಬಿದ್ದಿರುವುದರಿಂದ ಬಾಗಿನ ಅರ್ಪಿಸಿ ಅವರು ಮಾತನಾಡಿದರು,

ರೈತರಿಗೆ ನೀರು ಇದ್ದರೆ ನಿಧಿ ಇದ್ದಂತೆ, ಎತ್ತುಗಳಿದ್ದರೆ ಗುಂಡಿಗೆ ಗಟ್ಟಿ ಇದ್ದಂತೆ ಎಂಬ ಜನಪದರ ಮಾತಿನಂತೆ ಕೆರೆಗಳೆಲ್ಲಾ ತುಂಬಿವೆ. ಇದು ರೈತರಲ್ಲಿ ಸಂತಸ ತಂದಿದೆ ಎಂದರು. ಜಿಲ್ಲಾ ಪಂಚಾಯಿತಿ ಸದಸ್ಯ ಎ.ಮಂಜುನಾಥ ಮಾತನಾಡಿ, ಹಂಚಿಕುಪ್ಪೆ ಕೆರೆ ಕಟ್ಟಿದಂದಿನಿಂದ ತುಂಬಿರಲಿಲ್ಲ. ಸುಭಿಕ್ಷಾ ಕಾಲ ಬಂದಿದೆ, ತುಂಬಿದ ಕೆರೆಗೆ ಮೊದಲ ಬಾರಿಗೆ ಬಾಗಿನ ಅರ್ಪಿಸಿದ್ದು ಸಂತಸ ತಂದಿದೆ ಎಂದರು.

ಹೇಮಾವತಿ ನದಿ ನೀರನ್ನು ತಾಲ್ಲೂಕಿಗೆ ಹರಿಸುವ ಕಾಮಗಾರಿ ಪ್ರಗತಿಯಲ್ಲಿದೆ. ಕಾಲುವೆ ತೆಗೆಯುವ ಕಾಮಗಾರಿಗೆ ಭೂಮಿ ನೀಡಿರುವ ರೈತರಿಗೆ ಹೆಚ್ಚಿನ ಪರಿಹಾರ ದೊರೆಯುವುದು ಖಚಿತ ಎಂದರು. ಜಿಲ್ಲಾ ಪಂಚಾಯಿತಿ ಸದಸ್ಯೆ ಚಂದ್ರಮ್ಮ ನಂಜಯ್ಯ ಮಾತನಾಡಿ ಮಳೆಬೆಳೆಯಾಗಿ ಸರ್ವರಲ್ಲೂ ಸಮೃದ್ಧಿಯನ್ನು ದೇವರು ಕರುಣಿಸಲಿ ಎಂದರು.

ADVERTISEMENT

ಜೆಡಿಎಸ್‌ ಮುಖಂಡ ಬಿ.ಆರ್‌.ಗುಡ್ಡೆಗೌಡ ಮಾತನಾಡಿದರು. ತಾಲ್ಲೂಕು ಪಂಚಾಯಿತಿ ಸದಸ್ಯ ಶಂಕರ್‌, ಗ್ರಾಮಪಂಚಾಯಿತಿ ಸದಸ್ಯರಾದ ಜಯಮ್ಮ ರಾಮಚಂದ್ರಯ್ಯ, ನಜೀರ್‌ ಅಹಮದ್‌, ಮುಖಂಡ ನಂಜುಂಡಪ್ಪ, ಬಿಎಸ್‌ಎನ್‌ಎಲ್‌ ರವಿ, ಗುತ್ತಿಗೆದಾರ ನಾಗರಾಜು, ಅನಿಲ್‌ ಕುಮಾರ್‌, ಗೊಲ್ಲರಹಟ್ಟಿ ತಮ್ಮಯ್ಯ, ದೊಡ್ಡಿ ಲೋಕೇಶ್‌, ನರಸಿಂಹಯ್ಯ, ಅತ್ತಿಂಗೆರೆ, ಮತ್ತ, ಹಂಚಿಕುಪ್ಪೆ, ಮಾರೇಗೌಡನ ದೊಡ್ಡಿ, ರಾಮಕಲ್‌ ಪಾಳ್ಯದ ಗ್ರಾಮಸ್ಥರು ಇದ್ದರು. ಗವಿನಾಗಮಂಗಲ ವೀರಭದ್ರ ಸ್ವಾಮಿ ದೇಗುಲು ಅರ್ಚಕ ಯಡಿಯೂರಪ್ಪ ಶಾಸ್ತ್ರಿ ಗಂಗಾಪೂಜೆ ನೆರವೇರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.