ADVERTISEMENT

ಕೊಪ್ಪಳ ರೈತರ ಮೇಲೆ ಹಲ್ಲೆ ಖಂಡಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2011, 8:15 IST
Last Updated 29 ಮಾರ್ಚ್ 2011, 8:15 IST
ಕೊಪ್ಪಳ ರೈತರ ಮೇಲೆ ಹಲ್ಲೆ ಖಂಡಿಸಿ ಪ್ರತಿಭಟನೆ
ಕೊಪ್ಪಳ ರೈತರ ಮೇಲೆ ಹಲ್ಲೆ ಖಂಡಿಸಿ ಪ್ರತಿಭಟನೆ   

ದೊಡ್ಡಬಳ್ಳಾಪುರ: ಕೊಪ್ಪಳ ತಾ.ಪಂ. ಎದುರು ಕೂಲಿ ಹಣಕ್ಕೆ ಆಗ್ರಹಿಸಿ ರೈತರು ಪ್ರತಿಭಟನೆ ನಡೆಸುತ್ತಿದ್ದ ವೇಳೆ ಪೊಲೀಸರು ಲಾಠಿ ಪ್ರಹಾರ ನಡೆಸಿದ ಕ್ರಮ ಖಂಡಿಸಿ ಸೋಮವಾರ ರಾಜ್ಯ ರೈತ ಸಂಘದ ಕಾರ್ಯಕರ್ತರು ಪೊಲೀಸರಿಗೆ ಲಾಠಿ ನೀಡುವ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಿದರು.

‘ಲಾಠಿ ಏಟಿನಿಂದಲೇ ಸಮಸ್ಯೆಗಳನ್ನು ಬಗೆಹರಿಸುವುದಾದರೆ ನಾವೇ ಲಾಠಿ ನೀಡುತ್ತಿದ್ದೇವೆ ಪೊಲೀಸರೆ ಲಾಠಿ ಪ್ರಹಾರ ನಡೆಸ ಬನ್ನಿ’ ಎನ್ನುವ ಘೋಷಣೆಯೊಂದಿಗೆ ನೆಲದಾಂಜನೇಯ ಸ್ವಾಮಿ ದೇವಾಲಯದಿಂದ ಲಾಠಿಗಳನ್ನು ಕೈಯಲ್ಲಿಡಿದು ಡಿವೈಎಸ್‌ಪಿ ಕಚೇರಿವರೆಗೆ ರೈತರು ಮೆರವಣಿಗೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಡಾ.ಶ್ರೀನಿವಾಸ್, ಕೊಪ್ಪಳ ಜಿಲ್ಲೆಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ 64 ಕೋಟಿ ರೂಪಾಯಿಗಳಷ್ಟು ಅವ್ಯವಹಾರ ನಡೆದಿದೆ.

ಇದನ್ನು ಮುಚ್ಚಿಹಾಕುವ ಸಲುವಾಗಿಯೇ ಗುತ್ತಿಗೆದಾರರು ಪೊಲೀಸರನ್ನು ಬಳಸಿಕೊಂಡು ಕೂಲಿ ಹಣ ಕೇಳಲು ಬಂದವರ ಮೇಲೆ ಲಾಠಿ ಪ್ರಹಾರ ನಡೆಸಿದ್ದಾರೆ.
ಕೂಲಿ ಹಣ ನೀಡದೆ ವಂಚಿಸುವವರ ವಿರುದ್ಧ  ಕ್ರಿಮಿನಲ್ ಪ್ರಕರಣ ದಾಖಲಿಸಬೇಕು. ಆದರೆ ಕೂಲಿ ಹಣ ಕೇಳಿದವರ ಮೇಲೆಯೇ ಲಾಠಿ ಪ್ರಹಾರ ನಡೆಸಿರುವುದು ಹೇಡಿತನ.  ಕೂಲಿ ಹಣ ನೀಡುವಂತೆ ಮೂರು ದಿನಗಳಿಂದ ಶಾಂತಿಯುತವಾಗಿ ಧರಣಿ ನಡೆಸಿದರೂ ಅಧಿಕಾರಿಗಳು ಉತ್ತರ ನೀಡಿಲ್ಲ ಎಂದು ದೂರಿದರು.

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಪೊಲೀಸರು ಮಾನವ ಹಕ್ಕುಗಳನ್ನು ಮೀರಿ ವರ್ತಿಸುತ್ತಿದ್ದಾರೆ. ಪೊಲೀಸರು ತಮ್ಮ ನಡವಳಿಕೆ ತಿದ್ಧಿಕೊಳ್ಳಬೇಕು.
ಅಮಾಯಕ ರೈತರ ಮೇಲೆ ಲಾಠಿ ಪ್ರಹಾರ ನಡೆಸಿರುವ ಪೊಲೀಸರನ್ನು ಮತ್ತು ಕೂಲಿ ಹಣ ನೀಡದೆ ವಂಚಿಸಿರುವ ಅಧಿಕಾರಿಗಳನ್ನು ಸೇವೆಯಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದರು.

ರಾಜ್ಯ ರೈತ ಸಂಘದ ಉಪಾಧ್ಯಕ್ಷ ಡಾ.ಎನ್.ವೆಂಕಟರೆಡ್ಡಿ, ತಾಲ್ಲೂಕು ಮುಖಂಡರಾದ ಮುತ್ತೇಗೌಡ, ಸತೀಶ್, ಕೆ.ಪಿ.ಕುಮಾರ್, ಮುನಿರಾಜು, ತಾಲ್ಲೂಕು ಕನ್ನಡ ಪಕ್ಷದ ಅಧ್ಯಕ್ಷ ಸಂಜೀವ್‌ನಾಯ್ಕಿ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.