ADVERTISEMENT

ಕ್ರೀಡಾ ಚಟುವಟಿಕೆ ಪ್ರೋತ್ಸಾಹಿಸಿ

​ಪ್ರಜಾವಾಣಿ ವಾರ್ತೆ
Published 22 ಜನವರಿ 2011, 19:30 IST
Last Updated 22 ಜನವರಿ 2011, 19:30 IST

ದೇವನಹಳ್ಳಿ : ಕ್ರೀಡೆಯು ವ್ಯಕ್ತಿಯ ಸರ್ವಾಂಗೀಣ ಪ್ರಗತಿಗೆ  ಪೂರಕವಾಗಿದ್ದು, ಗ್ರಾಮೀಣ ಭಾಗದ ಮಕ್ಕಳಿಗೆ ತಳಮಟ್ಟದಿಂದ ಪ್ರೋತ್ಸಾಹ ನೀಡಿದರೆ ಉತ್ತಮ ಕ್ರೆಡಾ ಪಟುಗಳಾಗಿ ರೂಪಗೊಳ್ಳಲು ಸಾಧ್ಯ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಹನುಮಂತಪ್ಪ ತಿಳಿಸಿದರು. ಇಲ್ಲಿನ ಸರ್ಕಾರಿ ಜೂನಿಯರ್ ಕಾಲೇಜು ಆವರಣದಲ್ಲಿ ದೇವನಹಳ್ಳಿ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘ, ಜೆ.ಸಿ.ಐ ಸಂಸ್ಥೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಏರ್ಪಡಿಸಿದ್ದ ತಾಲ್ಲೂಕು ಮಟ್ಟದ ಅಥ್ಲೆಟಿಕ್ಸ್ ಕ್ರೆಡಾಕೂಟದಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಮಾತನಾಡಿದರು.

ಕೇವಲ ಶಿಕ್ಷಣ ಇಲಾಖೆಯಿಂದ ಮಾತ್ರ ಕ್ರೀಡಾ ಬೆಳೆವಣಿಗೆ ಸಾಧ್ಯವಿಲ್ಲ. ಇಲಾಖೆಯೊಂದಿಗೆ ಸಂಘ ಸಂಸ್ಥೆಗಳು ಸಹಕಾರ ನೀಡಬೇಕು ಎಂದು ಕೋರಿದರು. ಕ್ರೀಡಾ ಸಂಘದ ಅಧ್ಯಕ್ಷ ಟಿ.ಆರ್.ಲೋಕೇಶ್ ಮಾತನಾಡಿ, ಸತತ 8ವರ್ಷದಿಂದ ಸಂಘದ ಸದಸ್ಯರ ಹಾಗೂ ದಾನಿಗಳ ನೆರವಿನಿಂದ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಉತ್ತಮ ಕ್ರೀಡಾ ಪಟುಗಳನ್ನು ಹೊರತರಲು ಸಾಧ್ಯವಾಗಿದೆ. ಮುಂಬರುವ ದಿನಗಳಲ್ಲಿ ಕ್ರೀಡಾ ಜಾಗೃತಿ ಕಾರ್ಯಕ್ರಮದ ಮೂಲಕ ಗ್ರಾಮೀಣ ಪ್ರತಿಭೆಗಳನ್ನು ಹೊರತರಲಾಗುವುದೆಂದು ಭರವಸೆ ನೀಡಿದರು.

ಜೆ.ಸಿ.ಐ ಸಂಸ್ಥೆ ಅಧ್ಯಕ್ಷ ಎಸ್.ವಿಜಯಕುಮಾರ್, ನಿಕಟ ಪೂರ್ವ ಅಧ್ಯಕ್ಷ ಡಿ.ನಾರಾಯಣಸ್ವಾಮಿ ಮಾತನಾಡಿದರು. ಕಾರ್ಯಕ್ರಮ ನಿಯೋಜಕ ಆರ್.ಅಜೆಯ್, ಜೆ.ಸಿ.ಐ ಕಾರ್ಯದರ್ಶಿ ಎನ್.ರಮೇಶ್, ಕ್ರೀಡಾ ಸಂಘದ ಕಾರ್ಯದರ್ಶಿ ಸಿ.ಎಂ.ವೆಂಕಟೇಶ್, ಪುರಸಭೆ ಸದಸ್ಯ ಜಿ.ಎ.ರವೀಂದ್ರ, ಗ್ರಾ.ಪಂ.ಮಾಜಿ ಸದಸ್ಯ ನಾರಾಯಣ ಸ್ವಾಮಿ, ಕ್ರೀಡಾ ಸಂಘದ ಸದಸ್ಯರಾದ ನಟರಾಜ್, ಬಿ.ದೇವರಾಜ್ ಹಾಜರಿದ್ದರು. ದೈಹಿಕ ಶಿಕ್ಷಕ ಬಿ.ಪುಟ್ಟಸ್ವಾಮಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.