ADVERTISEMENT

`ಗುರುವಿನ ಹಾದಿ ಆದರ್ಶವಾಗಿರಲಿ'

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2013, 10:12 IST
Last Updated 4 ಸೆಪ್ಟೆಂಬರ್ 2013, 10:12 IST

ಚನ್ನಪಟ್ಟಣ: ಗುರುವಾದವನು ಮಕ್ಕಳಲ್ಲಿ ಸಂಸ್ಕಾರ, ಬದುಕುವ ಕಲೆ, ಪ್ರೀತಿ ಮುಂತಾದವುಗಳನ್ನು ಬೋಧನೆ ಮಾಡಿ ಅವರ ಭವಿಷ್ಯವನ್ನು ಉತ್ತಮವಾಗಿ ರೂಪಿಸುವ ಕಾರ್ಯ ಮಾಡಬೇಕು ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಬಿ.ಟಿ. ನಾಗೇಶ್ ಅಭಿಪ್ರಾಯಪಟ್ಟರು.

ಪಟ್ಟಣದ ಆನಂದ ವಿದ್ಯಾಸಂಸ್ಥೆಯ ಹಿರಿಯ ವಿದ್ಯಾರ್ಥಿಗಳ ಬಳಗ ಹಾಗೂ ಓರಿಯಂಟಲ್ ಇನ್ಶೂರೆನ್ಸ್ ಕಂಪೆನಿ ಆಶ್ರಯದಲ್ಲಿ ಇತ್ತೀಚಿಗೆ ಪಟ್ಟಣದ ತಿಮ್ಮಮ್ಮ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ `ಗುರುನಮನ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ತಾಲ್ಲೂಕು ಮಟ್ಟದ ಗೀತಗಾಯನ ಸ್ಪರ್ಧೆ'ಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನಮ್ಮ ಸಂಸ್ಕೃತಿಯಲ್ಲಿ ಎಲ್ಲರಿಗಿಂತಲೂ ಗುರುವಿನ ಸ್ಥಾನ ದೊಡ್ಡದು. ಮಕ್ಕಳು ತಮ್ಮ ವಿದ್ಯಾಭ್ಯಾಸದ ವೇಳೆ ಗುರುವಿನ ಜೊತೆಯಲ್ಲಿ ಗುರಿ ಇಟ್ಟುಕೊಳ್ಳುವ ಮೂಲಕ ಸಾಧನೆ ಮಾಡಿ ಬದುಕು ರೂಪಿಸಿಕೊಳ್ಳಬೇಕು ಎಂದರು.

ತಾಲ್ಲೂಕು ಪ್ರೌಢಶಾಲೆಗಳ ಮುಖ್ಯಶಿಕ್ಷಕರ ಸಂಘದ ಅಧ್ಯಕ್ಷ ಎಂ.ಬಿ.ದಶರಥ್ ಸಿಂಗ್ ಮಾತನಾಡಿ, ಪ್ರೌಢಶಾಲೆಯ ಹಂತ ಹೊಸ ತಿರುವ ನೀಡುವ ಪ್ರಮುಖಘಟ್ಟ. ಈ ಹಂತದಲ್ಲಿ ವಿದ್ಯಾರ್ಥಿಗಳು ಶಿಕ್ಷಕರು ಹಾಕಿಕೊಟ್ಟ ಮಾರ್ಗದರ್ಶನದಂತೆ ನಡೆದುಕೊಂಡು ಉನ್ನತ ಸ್ಥಾನ ಪಡೆಯಬೇಕು. ಜೊತೆಗೆ ಅಕ್ಷರ ಕಲಿಸಿದ ಗುರುಗಳನ್ನು ನೆನಸಿಕೊಂಡು ಗುರು ನಮನ ಸಲ್ಲಿಸಬೇಕು ಎಂದರು.

ಬಹುಮಾನ ವಿತರಿಸಿದ ಪ್ರೌಢಶಾಲಾ ಸಹಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಸಿ.ರಾಜಶೇಖರ್ ಮಾತನಾಡಿ, ಗುರು ಮತ್ತು ಗುರಿ ಇಲ್ಲದ ವ್ಯಕ್ತಿಯ ಬಾಳು ಶೂನ್ಯ. ಇಂದಿನ ವ್ಯವಸ್ಥೆಯಲ್ಲಿ ಗುರು ಹಿರಿಯರಿಗೆ ಗೌರವ ನೀಡುವ ಮನಸ್ಥಿತಿಗಳು ಅಪರೂಪವಾಗುತ್ತಿದೆ ಎಂದರು.

ನಿವೃತ್ತ ಶಿಕ್ಷಕರಾದ ಎಂ.ಪಿ.ನಾರಾಯಣ ಸ್ವಾಮಿ, ಬಿ.ವಿ.ದೊಡ್ಡಯ್ಯ, ಎಂ.ರಮೇಶ್, ಎಸ್.ಅರ್.ವಿಶ್ವಭಾರತಾಂಬಿಕೆ, ಕೆ.ಸಿ.ಬಸವರಾಜು, ಎಸ್.ಸಿದ್ದಪ್ಪ, ಪಿ.ಎಸ್.ಕೃಷ್ಣಮೂರ್ತಿ, ಎಸ್.ಡಿ.ರಾಮಯ್ಯ ಮುಂತಾದವರಿಗೆ ಗುರುನಮನ ಸಲ್ಲಿಸಲಾಯಿತು.

ಮುಖ್ಯಶಿಕ್ಷಕ ವಿ.ವೀರೇಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಓರಿಯಂಟಲ್ ಇನ್ಶೂರೆನ್ಸ್ ಕಂಪೆನಿಯ ಆಡಳಿತಾಧಿಕಾರಿ ಕೃಷ್ಣಯ್ಯ, ಕ್ರೀಡಾ ಮತ್ತು ಸಾಂಸ್ಕೃತಿಕ ಕ್ಲಬ್‌ನ ನಿರ್ದೇಶಕ ಸಿ.ಅಜಯ್‌ಕುಮಾರ್, ಶಿಕ್ಷಕರಾದ ನಾಗರಾಜು, ಶಿವಕುಮಾರ್, ರಾಜು, ಹಿರಿಯ ವಿದ್ಯಾರ್ಥಿಗಳ ಬಳಗದ ಪದಾಧಿಕಾರಿಗಳು ಭಾಗವಹಿಸಿದ್ದರು.ತಾಲೂಕಿನ ವಿವಿಧ ಪ್ರೌಢಶಾಲೆಗಳಿಂದ ಆಗಮಿಸಿ ಗೀತಗಾಯನ ಸ್ವರ್ಧೆಯಲ್ಲಿ ಭಾಗವಹಿಸಿ ಗೆಲುವು ಪಡೆದ ಮಕ್ಕಳಿಗೆ ಬಹುಮಾನ ವಿತರಣೆ ಹಾಗೂ ಪ್ರತಿಭಾ ಪುರಸ್ಕಾರ ನೀಡಲಾಯಿತು. ಇದೇ ವೇಳೆ ಕಲಾವಿದರಿಂದ ಸಾಂಸ್ಕೃತಿಕ ಕಾರ‌್ಯಕ್ರಮ ಏರ್ಪಡಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.