ADVERTISEMENT

ಚನ್ನಪಟ್ಟಣದ ಎಸ್‌ಬಿಎಂ ಶಾಖೆಗೆ ನೂರು ವರ್ಷ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2013, 10:39 IST
Last Updated 12 ಡಿಸೆಂಬರ್ 2013, 10:39 IST

ರಾಮನಗರ: ಜಿಲ್ಲೆಯಲ್ಲಿ ಬೊಂಬೆ ಉದ್ಯಮ, ರೇಷ್ಮೆ ವ್ಯವಹಾರ, ಸಣ್ಣ ಕೈಗಾರಿಕೆ, ಕೃಷಿ, ತೋಟಗಾರಿಕೆ ಕ್ಷೇತ್ರದ ಪ್ರಗತಿಗೆ ನೇರ ಮತ್ತು ಪರೋಕ್ಷವಾಗಿ ಕಾರಣವಾಗಿರುವ ಚನ್ನಪಟ್ಟಣದಲ್ಲಿನ ‘ಸ್ಟೇಟ್‌ ಬ್ಯಾಂಕ್‌ ಆಫ್‌ ಮೈಸೂರು’ (ಎಸ್‌ಬಿಎಂ) ಶಾಖೆಗೀಗ ನೂರು ವರ್ಷ. ಚನ್ನಪಟ್ಟಣ ಮತ್ತು ರಾಮನಗರದ ಜನರ ಆರ್ಥಿಕ ಪ್ರಗತಿ, ಗ್ರಾಮೀಣ ಪ್ರದೇಶದ ಏಳಿಗೆಗೆ ಮಹತ್ವದ ಕೊಡುಗೆ ನೀಡಿರುವ ಈ ಶಾಖೆ ಇದೇ 13ಕ್ಕೆ ನೂರನೇ ವರ್ಷ ಆಚರಿಸುತ್ತಿದೆ.

ಎಸ್‌ಬಿಎಂನ 2ನೇ ಶಾಖೆ:  ರಾಜ್ಯದಲ್ಲಿ ಮೊಟ್ಟಮೊದಲ ಎಸ್‌ಬಿಎಂ ಶಾಖೆ ಬೆಂಗಳೂರಿನಲ್ಲಿ 1913ರ ಅಕ್ಟೋಬರ್‌ 13ರಂದು ಆರಂಭವಾಯಿತು. ಅದಾದ ಎರಡು ತಿಂಗಳಲ್ಲಿಯೇ (1913 ಡಿಸೆಂಬರ್‌ 13) ಎಸ್‌ಬಿಎಂನ ಎರಡನೇ ಶಾಖೆ ಚನ್ನಪಟ್ಟಣದಲ್ಲಿ ಕಾರ್ಯಾರಂಭ ಮಾಡಿತು.

ಮೈಸೂರು ರಾಜ್ಯವಾಗಿದ್ದಾಗ ಸರ್ಕಾರಿ ಖಜಾನೆಯಾಗಿ ಬಳಸಿಕೊಳ್ಳುವ ಮಹತ್ವದ ಉದ್ದೇಶದಿಂದ ಮಹಾರಾಜರು ಮತ್ತು ಆಗಿನ ದಿವಾನ ಸರ್‌.ಎಂ.ವಿಶ್ವೇಶ್ವರಯ್ಯ ಅವರ ಕನಸಿನ ಕೂಸಾಗಿ ಎಸ್‌ಬಿಎಂ ಬೆಂಗಳೂರಿನಲ್ಲಿ ಆರಂಭವಾಯಿತು. ಬೆಂಗಳೂರು– ಮೈಸೂರು ಮಾರ್ಗ ಮಧ್ಯ ಚನ್ನಪಟ್ಟಣದಲ್ಲಿ ಆರಂಭವಾದ ಎರಡನೇ ಶಾಖೆಯು ಈ ಭಾಗದ ರೇಷ್ಮೆ, ಬೊಂಬೆ, ಕೃಷಿ, ತೋಟಗಾರಿಕೆ ಅಭಿವೃದ್ಧಿಗೆ ಸಹಕಾರಿಯಾಯಿತು ಎಂದು ಬ್ಯಾಂಕಿನ ಶಾಖಾ ವ್ಯವಸ್ಥಾಪಕ ವಿ.ಸುನೀಲ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಏಳುಬೀಳು ಕಂಡ ಶಾಖೆ:  ಚನ್ನ ಪಟ್ಟಣದಲ್ಲಿ ಇದ್ದ ಕೆಎಸ್‌ಐಸಿ ಸ್ಪನ್‌ ಸಿಲ್ಕ್‌ ಮಿಲ್‌, ಬೊಂಬೆ ಉದ್ಯಮ, ರೇಷ್ಮೆ ಉತ್ಪಾದನೆ, ಗೂಡಿನ ಮಾರುಕಟ್ಟೆ, ಕಣ್ವ ಜಲಾಶಯದ ನೀರಾವರಿಯಿಂದ ಸಮೃದ್ಧವಾಗಿದ್ದ ಕೃಷಿ ಚಟುವಟಿಕೆಯ ಏಳಿಗೆಗೆ ಈ ಶಾಖೆ ತನ್ನದೇ ಆದ ಕೊಡುಗೆ ನೀಡಿದೆ. ಹಾಗೆಯೇ  ಎಲ್ಲ ಚಟುವಟಿಕೆಗಳು ಶಾಖೆಯ ಪ್ರಗತಿಗೂ ಕಾರಣವಾಗಿವೆ ಎಂದು ಸುನೀಲ್‌ಅವರು  ವಿವರಿಸಿದರು.

ನಂತರದ ದಿನಗಳಲ್ಲಿ ಕಣ್ವ ಜಲಾಶಯ ಬರಿದಾದದ್ದು, ಕೆಎಸ್‌ಐಸಿ ಸ್ಪನ್‌ ಸಿಲ್ಕ್‌ ಮಿಲ್‌ ಮುಚ್ಚಿದ್ದು, ಬೊಂಬೆ ಉದ್ಯಮಕ್ಕೆ ಚೀನಾ ಬೊಂಬೆಗಳಿಂದಾದ ಹೊಡೆತ ಹಾಗೂ ಆಮದು ನೀತಿಯಿಂದ ರೇಷ್ಮೆ ಉದ್ಯಮಕ್ಕೆ ಬಿದ್ದ ಏಟಿನಿಂದಾಗಿ ನಿರೀಕ್ಷಿತ ಪ್ರಮಾಣದಲ್ಲಿ ಬ್ಯಾಂಕಿನ ವಹಿವಾಟು ಕೆಲ ವರ್ಷ ನಡೆಯಲಿಲ್ಲ. ಆದರೂ ಗ್ರಾಹಕರು ಬ್ಯಾಂಕನ್ನು ಕೈಬಿಟ್ಟಿಲ್ಲ ಎಂದು ಅವರು ತಿಳಿಸಿದರು.

ಇತ್ತೀಚೆಗೆ ಹೆಚ್ಚುತ್ತಿರುವ ರಿಯಲ್‌ ಎಸ್ಟೇಟ್‌ ಉದ್ಯಮ, ಕಟ್ಟಡ ನಿರ್ಮಾಣ ಕೆಲಸಗಳು, ನರೇಗಾ, ವಸತಿ ಯೋಜನೆಗಳು, ವಿವಿಧ ಬಗೆಯ ಕೃಷಿ ಮತ್ತು ತೋಟಗಾರಿಕಾ ಚಟುವಟಿಕೆಗಳು, ರೇಷ್ಮೆ ಉದ್ಯಮದಲ್ಲಿ ಆಗಿರುವ ಚೇತರಿಕೆ, ವಿದೇಶಕ್ಕೆ ಬೊಂಬೆಗಳು ರಫ್ತಾಗುತ್ತಿರುವುದೂ ಸೇರಿದಂತೆ ಮತ್ತಿತರ ಕಾರಣಗಳಿಂದ ಶಾಖೆಗೆ ಉತ್ತಮ ವಹಿವಾಟು ಆಗುತ್ತಿದೆ. 2010ರಿಂದ ಈಚೆಗೆ ವರ್ಷಕ್ಕೆ ಸುಮಾರು 160 ಕೋಟಿ ರೂಪಾಯಿ ವಹಿವಾಟು ನಡೆಯುತ್ತಿದೆ.

1978–76ರಲ್ಲಿ ಶಾಖೆ ಕೇವಲ 55 ಲಕ್ಷ ವಹಿವಾಟು ಹೊಂದಿತ್ತು ಎಂದು ಅವರು ಮಾಹಿತಿ ನೀಡಿದರು. ವಿವಿಧ ಕಾರ್ಯಕ್ರಮ: ಶತ ಮಾನೋತ್ಸವ ಪ್ರಯುಕ್ತ ಇದೇ 12, 13, 14ರಂದು ಬ್ಯಾಂಕ್‌ ಕಚೇರಿಯಲ್ಲಿ ವಿವಿಧ ಕಾರ್ಯಕ್ರಮ ಹಮ್ಮಿಕೊಂಡಿದೆ. 12ರಂದು ಗ್ರಾಹಕರ ಸಂಪರ್ಕ ಸಭೆ, 13ರಂದು ಕೇಕ್‌ ಕತ್ತರಿಸುವ ಮೂಲಕ ನೂರನೇ ವರ್ಷದ ಆಚರಣೆ ಹಾಗೂ 14ರಂದು ಶತಮಾನೋತ್ಸವ ಮತ್ತು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಏರ್ಪಡಿಸಿದೆ. 14ರಂದು ತಾಲ್ಲೂಕಿನ ಕೆಲ ಹಿರಿಯ ನಾಗರಿಕರು ಹಾಗೂ ಸಾಹಿತಿಗಳನ್ನು ಸನ್ಮಾನಿಸಿ ಗೌರವಿಸಲಾಗುವುದು  ಎಂದು ಬ್ಯಾಂಕಿನ ಶಾಖಾ ವ್ಯವಸ್ಥಾಪಕ ವಿ.ಸುನೀಲ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.