ADVERTISEMENT

ಜಲಮಂಡಳಿ ಕಚೇರಿಗೆ ಮುತ್ತಿಗೆ

20 ದಿನಗಳಾದರೂ ಪೂರೈಕೆಯಾಗದ ನೀರು: ರೆಹಮಾನಿಯಾ ನಗರದ ನಿವಾಸಿಗಳ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 16 ಜೂನ್ 2015, 7:48 IST
Last Updated 16 ಜೂನ್ 2015, 7:48 IST
ರಾಮನಗರದ ರೆಹಮಾನಿಯಾ ನಗರದಲ್ಲಿ ಜಲಮಂಡಳಿ ಸರಿಯಾಗಿ ನೀರು ಪೂರೈಸುತ್ತಿಲ್ಲ ಎಂದು ಆರೋಪಿಸಿ ಅಲ್ಲಿನ ನಿವಾಸಿಗಳು ಸೋಮವಾರ ಜಲಮಂಡಳಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು
ರಾಮನಗರದ ರೆಹಮಾನಿಯಾ ನಗರದಲ್ಲಿ ಜಲಮಂಡಳಿ ಸರಿಯಾಗಿ ನೀರು ಪೂರೈಸುತ್ತಿಲ್ಲ ಎಂದು ಆರೋಪಿಸಿ ಅಲ್ಲಿನ ನಿವಾಸಿಗಳು ಸೋಮವಾರ ಜಲಮಂಡಳಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು   

ರಾಮನಗರ:  ಇಲ್ಲಿನ ರೆಹಮಾನಿಯಾ ನಗರ (ವಾರ್ಡ್‌ 21, 22)ದಲ್ಲಿ ಜಲಮಂಡಳಿ ಸರಿಯಾಗಿ ನೀರು ಸರಬರಾಜು ಮಾಡುತ್ತಿಲ್ಲ ಎಂದು ಆರೋಪಿಸಿ ನಿವಾಸಿಗಳು ಸೋಮವಾರ ಜಲಮಂಡಳಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಸುಮಾರು 15– 20 ದಿನಗಳಾದರೂ ಈ ಭಾಗದಲ್ಲಿ ನೀರು ಪೂರೈಕೆಯಾಗುತ್ತಿಲ್ಲ. ಇಲ್ಲಿನ ನೀರು ಗಂಟಿಯು ಹಣ ಪಡೆದು ಗಂಟೆಗಟ್ಟಲೆ ಫಿಲೇಚರ್‌ಗಳಿಗೆ ನೀರು ಸರಬರಾಜು ಮಾಡುತ್ತಿದ್ದಾರೆ. ಆದರೆ ನಿವಾಸಿಗಳಿಗೆ 20 ನಿಮಿಷವೂ ನೀರು ಬಿಡುತ್ತಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಬಡಾವಣೆಯಲ್ಲಿ ಸ್ವಚ್ಛತೆಯೇ ಇಲ್ಲ. ನಗರಸಭೆ ಸ್ವಚ್ಛತಾ ಆಂದೋಲನ ಮಾಡುವುದಾಗಿ ಹೇಳಿ ಕೇವಲ ಬೀದಿ ನಾಟಕವನ್ನಷ್ಟೇ ಮಾಡಿ ಸುಮ್ಮನಾಗಿದೆ. ಸ್ವಚ್ಛಗೊಳಿಸುವ ಕಾರ್ಯವನ್ನು ನಗರಸಭೆ  ಮರೆತು ಹೋಗಿದೆ. ಇದರಿಂದ ಇಡೀ ಬಡಾವಣೆಯಲ್ಲಿ ಸ್ವಚ್ಛತೆಯ ಕೊರತೆ ಎದುರಾಗಿದೆ ಎಂದು ಕಿಡಿಕಾರಿದರು.

ನಗರಸಭೆ ಸದಸ್ಯರಾದ ರವಿ ಹಾಗೂ ರಫೀಕ್ ಅವರ ವ್ಯಾಪ್ತಿಗೆ ಈ ಬಡಾವಣೆ ಒಳಪಡುತ್ತದೆ. ಇವರಿಗೆ ಎಷ್ಟು ಬಾರಿ ಹೇಳಿದರೂ ಏನು ಪ್ರಯೋಜನವಾಗಿಲ್ಲ. ಇನ್ನೂ ನಗರಸಭೆ ಅಧ್ಯಕ್ಷ ಚೇತನ್‌ ಕುಮಾರ್‌ ಅವರು ವಾರ್ಡ್‌ ಸಂಚಾರ ಮಾಡಿದ್ದೂ ನಮ್ಮ ಗಮನಕ್ಕೆ ಬಂದೇ ಇಲ್ಲ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು. ಸಾವಿತ್ರಮ್ಮ, ತಾಹೀರುನ್ನಿಸಾ, ರೇಣುಕಾ, ಸರಸ್ವತಿ, ಶೈಲಜಾ, ಸುನೀತಾ   ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.