ADVERTISEMENT

‘ಜೆಡಿಎಸ್‌ಯೊಂದಿಗೆ ಬಿಜೆಪಿ ಒಳಒಪ್ಪಂದ‌’

ಕಾಂಗ್ರೆಸ್ ಸರ್ಕಾರ ನೀಡಿರುವ ಕೊಡುಗೆ ಮರೆಯಬಾರದು: ಜಮೀರ್ ಅಹಮದ್

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2018, 13:45 IST
Last Updated 29 ಏಪ್ರಿಲ್ 2018, 13:45 IST

ಚನ್ನಪಟ್ಟಣ: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಬಡವರು, ರೈತರು, ಅಲ್ಪಸಂಖ್ಯಾತ ಸಮುದಾಯಕ್ಕೆ ಕೊಟ್ಟಿರುವ ಕೊಡುಗೆಯನ್ನು ಜನ ಮರೆಯಬಾರದು ಎಂದು ಚಾಮರಾಜಪೇಟೆ ಶಾಸಕ ಜಮೀರ್ ಅಹಮದ್ ಹೇಳಿದರು.

ಪಟ್ಟಣದ ಮುಸ್ಲಿಂ ವಾರ್ಡ್‌ಗಳಲ್ಲಿ ಶುಕ್ರವಾರ ಸಂಜೆ ಕಾಂಗ್ರೆಸ್ ಅಭ್ಯರ್ಥಿ ಎಚ್.ಎಂ.ರೇವಣ್ಣ ಪರ ಪ್ರಚಾರ ನಡೆಸಿ ಅವರು ಮಾತನಾಡಿದರು.

‘ಕಾಂಗ್ರೆಸ್ ಋಣ ನಮ್ಮ ಅಲ್ಪಸಂಖ್ಯಾತ ಜನರ ಮೇಲಿದೆ. ನಾವು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ, ಅತ ಹೆಚ್ಚಿನ
ಬಹುಮತದಿಂದ ಗೆಲ್ಲಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ’ ಎಂದು ಅವರು ಹೇಳಿದರು.

ADVERTISEMENT

‌ಬಿಜೆಪಿ ಜಾತಿ, ಧರ್ಮದ ಮೇಲೆ ರಾಜಕಾರಣ ಮಾಡುತ್ತಾ ಜನರ ನೆಮ್ಮದಿ ಕೆಡಸುತ್ತಿದೆ. ಬಿಜೆಪಿ ಮತ್ತು ಜೆಡಿಎಸ್ ಎಂದೂ ಬಡವರ ಪರ ಇಲ್ಲ. ಜೆಡಿಎಸ್ ಅಧಿಕಾರಕ್ಕಾಗಿ ಬಿಜೆಪಿಯೊಂದಿಗೆ ಒಳಒಪ್ಪಂದ ಮಾಡಿಕೊಂಡಿದೆ. ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ಅಭ್ಯರ್ಥಿಗಳನ್ನು ತಿರಸ್ಕರಿಸಬೇಕು. ಕಾಂಗ್ರೆಸ್ ಪಕ್ಷದ ಕೈ ಹಿಡಿಯ ಬೇಕು ಎಂದು ಅವರು ಹೇಳಿದರು.

ಅಭ್ಯರ್ಥಿ ಎಚ್.ಎಂ.ರೇವಣ್ಣ ಮಾತನಾಡಿ, ‘ಪಕ್ಷದ ವರಿಷ್ಠರ ಆದೇಶದಂತೆ ತಾಲ್ಲೂಕಿನ ಅಭಿವೃದ್ಧಿಗೆ ಮತ್ತು ಜನರ ಸಮಸ್ಯೆಗೆ ಪ್ರಾಮಾಣಿಕವಾಗಿ ಸ್ಪಂದಿಸುವ ಆಸೆಯಿಂದ ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದೇನೆ. ನನಗೆ ಆಶೀರ್ವಾದ ಮಾಡಿದರೆ ನಿಮ್ಮ ಮನೆ ಮಗನಾಗಿ ಸೇವೆ ಮಾಡುತ್ತೇನೆ’ ಎಂದು ಹೇಳಿದರು.

ನಂತರ, ಶಾಸಕ ಜಮೀರ್ ಅಹಮದ್ ತೆರೆದ ವಾಹನದಲ್ಲಿ ಯಾರಬ್ ನಗರ, ಕಲಾನಗರ, ಷೇರೂ ಹೋಟೆಲ್ ವೃತ್ತ, ಮದೀನಾ ಚೌಕ್ ರಸ್ತೆ, ಮೆಹದಿ ನಗರ, ಮಸೀದಿ, ದರ್ಗಾ, ಬಡಾಮಕನ್, ನಿಜಾಮಿಚೌಕ್, ಸೈಯದ್ ವಾಡಿ ಸೇರಿದಂತೆ ಹಲವು ಮುಸ್ಲಿಂ ವಾರ್ಡ್‌ಗಳಲ್ಲಿ ಬಿರುಸಿನ ಪ್ರಚಾರ ನಡೆಸಿದರು.

ಜೆಡಿಎಸ್ ನಗರಸಭಾ ಸದಸ್ಯರಾದ ಭಾವಸಾ, ಫರೀದ್ ಖಾನ್ ಘೋರಿ, ಪೈಲ್ವಾನ್ ಅಕ್ರಂ ಖಾನ್, ಷರೀಫ್, ಆಶೀಫ್ ಹಾಗೂ ಹಲವು ಮುಖಂಡರ ಮನೆಗಳಿಗೆ ಜಮೀರ್ ಅಹಮ್ಮದ್ ಭೇಟಿ ನೀಡಿ ಮಾತುಕತೆ ನಡೆಸಿದರು.

ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಗಂಗಾಧರ್, ಮುಖಂಡರಾದ ಮಸ್ಸೂದ್ ಫೌಜ್ ದಾರ್, ನಿಜಾಮಿ ಫೌಜ್ದಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶಿವಮಾದು, ಎ.ಸಿ.ವೀರೇಗೌಡ, ಮುದ್ದುಕೃಷ್ಣೇಗೌಡ, ಪಿ.ರಮೇಶ್, ವಾಸಿಲ್ ಆಲಿಖಾನ್, ಲಿಯಾಕತ್ ಆಲಿಖಾನ್, ಶಬೀರ್ ಬೇಗ್, ಹನುಮಂತು ಇದ್ದರು.

‘ನಾನು ಮಂತ್ರಿ ಆಗುವುದು ಖಚಿತ’

‘ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ನನ್ನನ್ನು ರಾಜಕೀಯವಾಗಿ ಮುಗಿಸಲು ಚಾಮರಾಜಪೇಟೆ ಕ್ಷೇತ್ರದಲ್ಲಿ ನನ್ನ ವಿರುದ್ಧ ಕೆಲಸ ಮಾಡುತ್ತಿದ್ದಾರೆ, ಅದು ಎಂದಿಗೂ ಸಾಧ್ಯವಿಲ್ಲ’ ಎಂದು ಜಮೀರ್ ಅಹಮದ್ ಹೇಳಿದರು.

‘ಚಾಮರಾಜಪೇಟೆಯಲ್ಲಿ ನಾನು ಗೆಲ್ಲುವುದು ಖಚಿತ. ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವುದು ನಿಶ್ಚಿತ. ನಾನು ಮಂತ್ರಿ ಆಗುತ್ತೇನೆ. ಅದನ್ನು ತಡೆಯಲು ಜೆಡಿಎಸ್ ನಾಯಕರಿಂದ ಸಾಧ್ಯವಿಲ್ಲ’ ಎಂದರು.

‘ನಾನು ಯೋಗೇಶ್ವರ್‌ಗೆ ಸಹಕಾರ ನೀಡುತ್ತಿದ್ದೇನೆ ಎಂದು ಕೆಲವರು ಅಪಪ್ರಚಾರ ನಡೆಸುತ್ತಿದ್ದಾರೆ. ಅದು ಎಂದಿಗೂ ಸಾಧ್ಯವಿಲ್ಲ. ಯೋಗೇಶ್ವರ್ ನನ್ನ ವಿರೋಧಿ’ ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.