ADVERTISEMENT

‘ಜೆಡಿಎಸ್ ಬಿಜೆಪಿ ನಡುವೆ ನೇರ ಸ್ಪರ್ಧೆ’

ವಿಧಾನ ಪರಿಷತ್‌ ಚುನಾವಣೆ– ಜೆಡಿಎಸ್‌ ಅಭ್ಯರ್ಥಿ ಅಚ್ಚೆಗೌಡ ಶಿವಣ್ಣ

​ಪ್ರಜಾವಾಣಿ ವಾರ್ತೆ
Published 3 ಜೂನ್ 2018, 10:55 IST
Last Updated 3 ಜೂನ್ 2018, 10:55 IST

ರಾಮನಗರ: ಬೆಂಗಳೂರು ಪದವಿಧರ ಕ್ಷೇತ್ರಕ್ಕೆ ನಡೆಯುತ್ತಿರುವ ವಿಧಾನಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ಪಕ್ಷಕ್ಕೆ ಬಿಜೆಪಿ ಅಭ್ಯರ್ಥಿಯೇ ನೇರ ಸ್ಪರ್ಧಿಯಾಗಿದ್ದಾರೆ ಎಂದು ಜೆಡಿಎಸ್ ಅಭ್ಯರ್ಥಿ ಅಚ್ಚೆಗೌಡ ಶಿವಣ್ಣ ಹೇಳಿದರು.

ನಗರದಲ್ಲಿ ಜೆಡಿಎಸ್ ಪಧವೀದರ ಕ್ಷೇತ್ರ ವಿಭಾಗದ ವತಿಯಿಂದ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಬೆಂಗಳೂರು ಪದವೀಧರ ಕ್ಷೇತ್ರ ವ್ಯಾಪ್ತಿಗೆ ಬೆಂಗಳೂರು ನಗರ ವ್ಯಾಪ್ತಿಯ 28, ರಾಮನಗರ ಮತ್ತು ಬೆಂಗಳೂರು ಜಿಲ್ಲೆಯ ತಲಾ ನಾಲ್ಕು ವಿಧಾನಸಭಾ ಕ್ಷೇತ್ರಗಳು ಸೇರಿದಂತೆ ಒಟ್ಟು 36 ಕ್ಷೇತ್ರಗಳು ಒಳಪಡಲಿದ್ದು ಒಟ್ಟು 65 ಸಾವಿರಕ್ಕೂ ಹೆಚ್ಚು ಪದವೀಧರ ಮತದಾರರಿದ್ದು, ಇದೇ 8 ರಂದು ನಡೆಯುವ ಚುನಾವಣೆಯಲ್ಲಿ ಜೆಡಿಎಸ್ ಪಕ್ಷಕ್ಕೆ ಬೆಂಬಲ ನೀಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಈಗಾಗಲೇ ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದು ರಾಜ್ಯದ ಅಭಿವೃದ್ಧಿ ದೃಷ್ಠಿಯಿಂದ ಉತ್ತಮ ಯೋಜನೆಗಳನ್ನು ರೂಪಿಸುತ್ತಿದ್ದಾರೆ. ಸ್ಥಳೀಯ ಸಂಸ್ಥೆಗಳು ಮತ್ತು ವಿಧಾನ ಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗಳಿಗೆ ಮತದಾರರು ಶಕ್ತಿ ನೀಡಿದರೆ ಮತ್ತುಷ್ಟು ಉತ್ತಮ ಕಾರ್ಯಕ್ರಮಗಳನ್ನು ರೂಪಿಸಲು ಸಹಾಯಕವಾಗುತ್ತದೆ ಎಂದರು.

ADVERTISEMENT

‘ಒಕ್ಕಲಿಗರ ಸಂಘದ ನಿರ್ದೇಶಕನಾಗಿ ಉತ್ತಮ ಕೆಲಸ ಮಾಡಿದ್ದೇನೆ. ಅಲ್ಲದೆ ರಾಮನಗರ ಜಿಲ್ಲೆಯಲ್ಲಿ ಒಕ್ಕಲಿಗರ ಸಂಘದ ಚುನಾವಣೆಯಲ್ಲಿ ಅತಿ ಹೆಚ್ಚು ಮತಗಳನ್ನು ಪಡೆದು ಚುನಾಯಿತನಾಗಿದ್ದೇನೆ. ಇದೀಗ ನಡೆಯುತ್ತಿರುವ ವಿಧಾನ ಪರಿಷತ್ ಚುನಾವಣೆಯಲ್ಲಿ ಹೆಚ್ಚಿನ ಬಹುಮತದಿಂದ ಆಯ್ಕೆಯಾಗುವ ವಿಶ್ವಾಸ ಹೊಂದಿದ್ದೇನೆ. ನಾನು ಈಗಾಗಲೆ ಶೇ 50 ರಷ್ಟು ಶ್ರಮವನ್ನು ವಿನಿಯೋಗಿಸಿದ್ದು, ಜೆಡಿಎಸ್‌ ವರಿಷ್ಠ ಎಚ್.ಡಿ.ದೇವೇಗೌಡ ಮತ್ತು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ವರ್ಚಸ್ಸು ಶೇ 50 ರಷ್ಟಿದ್ದು ಇದು ಚುನಾವಣೆ ಫಲಿತಾಂಶದ ಮೇಲೆ ಹೆಚ್ಚು ಪ್ರಭಾವ ಬೀರಲಿದೆ’ ಎಂದರು.

ತಾಲ್ಲೂಕು ಜೆಡಿಎಸ್ ಘಟಕದ ಅಧ್ಯಕ್ಷ ರಾಜಶೇಖರ್, ಯುವ ಘಟಕದ ಅಧ್ಯಕ್ಷ ಎಚ್.ಸಿ.ರಾಜು, ವಕ್ತಾರ ಬಿ. ಉಮೇಶ್, ಜೆಡಿಎಸ್ ಪದವೀಧರ ವಿಭಾಗದ ಜಿಲ್ಲಾ ಘಟಕದ ಅಧ್ಯಕ್ಷ ಜಿ.ಟಿ.ಕೃಷ್ಣ, ಎಪಿಎಂಸಿ ನಿರ್ದೇಶಕ ದೊರೆಸ್ವಾಮಿ, ನಗರ ಯುವ ಘಟಕದ ಅಧ್ಯಕ್ಷ ಗೂಳಿಕುಮಾರ್, ಮುಖಂಡರಾದ ಪ್ರಾಣೇಶ್, ಅಜಯ್‌ದೇವೇಗೌಡ, ರೈಡ್‌ ನಾಗರಾಜ್‌, ವೆಂಕಟೇಶ್‌, ಡಿ. ನರೇಂದ್ರ, ನಗರಸಭಾ ಸದಸ್ಯ ಆರ್.ಎ. ಮಂಜುನಾಥ್, ವಕೀಲ ರಾಜಶೇಖರ್, ಜಯಕುಮಾರ್, ಮಣಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.