ADVERTISEMENT

ತಗ್ಗಿಕುಪ್ಪೆ ಹೆಬ್ಬಾಗಿಲು ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2011, 19:30 IST
Last Updated 16 ಅಕ್ಟೋಬರ್ 2011, 19:30 IST

ಮಾಗಡಿ: ತಾಲ್ಲೂಕಿನ ತಗ್ಗೆಕುಪ್ಪೆ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಆಂಜನೇಯ ಸ್ವಾಮಿ ದೇವಾಲಯದ ಬೃಹತ್ ಹಾಗೂ ಸುಂದರ ಹೆಬ್ಬಾಗಿಲನ್ನು ವಿಶ್ವ ಒಕ್ಕಲಿಗರ ಮಠದ ಕುಮಾರ ಚಂದ್ರಶೇಖರನಾಥ ಸ್ವಾಮಿಜಿ ಉದ್ಘಾಟಿಸಿದರು.

ಗ್ರಾಮ ದೇವತೆಗಳ ಉತ್ಸವ, ಜನಪದ ಕಲಾ ಉತ್ಸವ, ಸೋಬಾನೆ ಹಾಡುಗಳೊಂದಿಗೆ ನಡೆದ ಸಂಭ್ರಮದ ಕಾರ್ಯಕ್ರಮದಲ್ಲಿ ಶಾಸಕ ಎಚ್.ಸಿ.ಬಾಲಕೃಷ್ಣ ಸೇರಿದಂತ ವಿವಿಧ ಗಣ್ಯರು ಹಾಜರಿದ್ದರು.

ಹೆಬ್ಬಾಗಿಲನ್ನು ಉದ್ಘಾಟಿಸಿ ಮಾತನಾಡಿದ ಸ್ವಾಮೀಜಿ, `ಗ್ರಾಮದ ಹೆಬ್ಬಾಗಿಲು ಜನಪದ ಪರಂಪರೆಯ ಪ್ರತೀಕ. ಊರಿಗೆ ಬರುವ `ಜಾಡ್ಯ~ಗಳನ್ನು ತಡೆವ ಸಲುವಾಗಿ ಹೆಬ್ಬಾಗಿಲನ್ನು ಕಟ್ಟುತ್ತಿದ್ದರು ಎಂದು ವಿವರಿಸಿದರು.

ಶಾಸಕ ಎಚ್.ಸಿ.ಬಾಲಕೃಷ್ಣ ಮಾತನಾಡಿ, ಹಳ್ಳಿಯಲ್ಲಿ ಹುಟ್ಟಿ ನಗರಕ್ಕೆ ವಲಸೆ ಹೋಗಿರುವವರು ತಮ್ಮ ಸ್ವಗ್ರಾಮಗಳ ಕಡೆಗೆ ಗಮನ ಹರಿಸಬೇಕಿದೆ.

`ಜನನಿ ಜನ್ಮಭೂಮಿ ಸ್ವರ್ಗಕ್ಕಿಂತ ಮಿಗಿಲು~ ಎಂಬಂತೆ ನಾವು ಎಷ್ಟೇ ಬೆಳೆದರೂ ನಮ್ಮ ಹುಟ್ಟೂರು ಅಭಿವೃದ್ದಿಯಾದರೆ ಮಾತ್ರ ನೆಮ್ಮದಿ~ ಎಂದು ಶಾಸಕ ಎಚ್,ಸಿ. ಬಾಲಕೃಷ್ಣ ತಿಳಿಸಿದರು. ಸಮಾಜವಾದಿ ಚಿಂತಕರಾಗಿದ್ದ ದಿವಂಗತ ಟಿ.ಎ.ರಂಗಯ್ಯ ಹೆಸರಿನಲ್ಲಿ ರಂಗಮಂದಿರ ನಿರ್ಮಾಣಕ್ಕೆ ನೆರವು ನೀಡುವುದಾಗಿ ಭೆವಸೆ ನೀಡಿದರು.

ದಾನ: ತಾಲ್ಲೂಕಿನ ಅನ್ನದಾತನ ನೆರವಿಗಾಗಿ ಸದಾ ದುಡಿಯುತ್ತಿದ್ದ ಮಾಜಿ ಶಾಸಕ ಟಿ.ಎ, ರಂಗಯ್ಯ ಅವರ ನೆನಪಿಗಾಗಿ ನಿರ್ಮಾಣವಾಗುವ ಕಲಾ ಭವನಕ್ಕೆ  ರೂ.1 ಲಕ್ಷ ಹಣ ದಾನ ನೀಡುವುದಾಗಿ ರಾಜ್ಯ ಕೆ.ಪಿ.ಟಿ.ಸಿ.ಎಲ್ ನೌಕರರ ಸಂಘದ ಉಪಾಧ್ಯಕ್ಷ ಟಿ.ಆರ್.ರಾಮಕೃಷ್ಣಯ್ಯ ತಿಳಿಸಿದರು. 

ಜೆ.ಡಿ.ಎಸ್.ಮುಖಂಡ ಟಿ.ಎಂ.ರಂಗೇಗೌಡ, ಜಿ,ಪಂ. ಸದಸ್ಯ ಮುದ್ದರಾಜ್ ಯಾದವ್, ತಾ.ಪಂ. ಸದಸ್ಯರಾದ ಜಿ.ಕೃಷ್ಮ, ಕಾಂತರಾಜ್, ಅನುಸೂಯಮ್ಮ ಕಾಂತರಾಜು, ಗ್ರಾ.ಪಂ ಅಧ್ಯಕ್ಷೆ ಮಹದೇವಮ್ಮ, ಗ್ರಾ.ಪಂ. ಸದಸ್ಯರಾದ ರೇಣುಕಪ್ಪ, ಹನುಮಂತರಾಯಪ್ಪ, ಮರಿಕುಪ್ಪೆ ಕಾಂತರಾಜು, ರಾಜಣ್ಣ, ಮಾಜಿ ಅಧ್ಯಕ್ಷ ಮೊದಲಾರಯ್ಯನಪಾಳ್ಯದ ಗಂಗಣ್ಣ, ಚಿಕ್ಕಣ್ಣ, ಪಟೇಲ್ ಮುದ್ದರಂಗೇಗೌಡ, ಜಿಲ್ಲಾ ಪಂಚಾಯಿತಿ  ಮಾಜಿ ಸದಸ್ಯ ವೀರಪ್ಪ, ಡಾ.ಶಶಾಂಕ್, ಆರ್.ಚಂದ್ರಮೋಹನ್ ವೇದಿಕೆಯಲ್ಲಿದ್ದರು.

ಜನಪದ ಉತ್ಸವ:  ಆಂಜನೇಯ ಸ್ವಾಮಿ ದೇವಾಲಯದ ಹೆಬ್ಬಾಗಿಲು ಉದ್ಘಾಟನಾ ಸಮಾರಂಭದ ಅಂಗವಾಗಿ ಜನಪದ ಉತ್ಸವ ನಡೆಯಿತು. ಜನಪದ ಜಂಗಮ ಜೋಗಿಲ ಸಿದ್ದರಾಜು ತಂಡದಿಂದ ಜನಪದ ಗೀತಾ ಗಾಯನ ನಡೆಯಿತು.

ಹೆಬ್ಬಾಗಿಲು ನಿರ್ಮಾಣ ಸಮಿತಿ ಅಧ್ಯಕ್ಷ ಟಿ.ಎಂ.ಕೃಷ್ಣಮೂರ್ತಿ ಮಾತನಾಡಿ, ತಗ್ಗಿಕುಪ್ಪೆಯಲ್ಲಿ ಜನಿಸಿದ್ದ ಟಿ.ಎ.ರಂಗಯ್ಯ, ದಿವಂಗತ ದೇವರಾಜ ಅರಸು ಮುಖ್ಯಮಂತ್ರಿಗಳಾಗಿದ್ದಾಗ ಈ ಗ್ರಾಮದ 286 ಜನರಿಗೆ ನೌಕರಿ ಕೊಡಿಸಿ, ಗ್ರಾಮಕ್ಕೆ ಬೇಕಾದ ವಿದ್ಯಾರ್ಥಿ ನಿಲಯಗಳು, ಸರ್ಕಾರಿ ಆಸ್ಪತ್ರೆ, ಪಶುವೈದ್ಯಶಾಲಾ, ರಸ್ತೆ, ಕುಡಿಯುವ ನೀರಿನ ವ್ಯವಸ್ಥೆ ಮಾಡಿಸಿದ್ದರು.

`ವಿಧಾನ ಪರಿಷತ್ ಸದಸ್ಯರಾಗಿದ್ದ ಅವರು ನೀರಾವರಿ ಯೋಜನೆಗೆ ಮತ್ತು ಸರ್ವರ ಏಳಿಗೆಗೆ ದುಡಿದಿದ್ದರು~ ಎಂದು ಹೆಬ್ಬಾಗಿಲು ನಿರ್ಮಾಣ ಸಮಿತಿಯ ಅಧ್ಯಕ್ಷ ಟಿ.ಎಂ.ಕೃಷ್ಣಮೂರ್ತಿ ನುಡಿದರು. ಟಿ.ಎ.ಆರ್. ವೇದಿಕೆ ರಚಿಸಿಕೊಂಡು ನಾವೆಲ್ಲರೂ  ಅವರ ಆದರ್ಶಗಳನ್ನು ಮುಂದುವರಿಸುವುದಾಗಿ ತಿಳಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.