ADVERTISEMENT

ತಾಪಂಗಳು ನಿರ್ದಿಷ್ಟ ಸಮಯಕ್ಕೆ ಕೆಡಿಪಿ ಸಭೆ ನಡೆಸಲು ಸಿಇಒ ಸೂಚನೆ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2012, 6:10 IST
Last Updated 11 ಫೆಬ್ರುವರಿ 2012, 6:10 IST

ರಾಯಚೂರು: ತಾಲ್ಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿಯಲ್ಲಿ ಕೆಡಿಪಿ ಸಭೆಗಳು ನಡೆಸಲಾಗುತ್ತಿದೆಯೇ ಅಥವಾ ಇಲ್ಲವೋ ಯಾವುದೂ ಗೊತ್ತಿಲ್ಲ. ಆಡಳಿತ ವರ್ಗದಿಂದ ಮಾತ್ರ ಈವರೆಗೂ ತಮಗೆ ಕೆಡಿಪಿ ಸಭೆ ನಡೆಸುವ ಬಗ್ಗೆಯಾಗಲಿ ಅಥವಾ ನಡೆಸುತ್ತಿರುವ ಬಗ್ಗೆಯಾಗಲಿ ಮಾಹಿತಿ ಇಲ್ಲ.

ಕೂಡಲೇ ಸಭೆಗೆ ಮಾಹಿತಿ ಕೊಡಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಸದಸ್ಯರು ಇಲ್ಲಿ ಶುಕ್ರವಾರ ನಡೆದ ಜಿಪಂ 5ನೇ ಸಾಮಾನ್ಯ ಸಭೆಯಲ್ಲಿ ಜಿಪಂ ಸಿಇಒ ಅವರಿಗೆ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ರಾಯಚೂರು, ಮಾನ್ವಿ, ಲಿಂಗಸುಗೂರು, ಸಿಂಧನೂರು ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳು ಮಾಹಿತಿ ನೀಡಬೇಕು ಎಂದು ಜಿಪಂ ಸಿಇಒ ಮನೋಜಕುಮಾರ ಜೈನ್ ಸೂಚಿಸಿದರು.
ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳು ನೀಡಿದ ಉತ್ತರ ಪ್ರಶ್ನಿಸಿದ ಸದಸ್ಯರಿಗೆ ಸಮಾಧಾನ ತರಲಿಲ್ಲ.

ತಾಪಂನಲ್ಲಿ ನಡೆಸಲಾಗುವ ತ್ರೈಮಾಸಿಕ ಸಭೆಗೆ ಆಹ್ವಾನಿಸಿಲ್ಲ. ಮಾಹಿತಿಯೂ ಇಲ್ಲ. ಕನಿಕಷ್ಠ ಪಕ್ಷ ಆ ಸಭೆಗಳಲ್ಲಿ ಏನು ನಡೆಯಿತು ಎಂಬ ಮಾಹಿತಿಯನ್ನೂ ಕೊಡುವುದಿಲ್ಲ ಎಂದು ಸ್ಥಾಯಿ ಸಮಿತಿ ಅಧ್ಯಕ್ಷ ಜಾಫರ್ ಅಲಿ ಪಟೇಲ್, ಸದಸ್ಯೆ ಬಸಮ್ಮ ಕುಂಟೋಜಿ, ಸದಸ್ಯರಾದ ವಿಶ್ವನಾಥ ಪಾಟೀಲ್, ಕೆ ಶರಣಪ್ಪ, ಎಚ್.ಬಿ ಮುರಾರಿ ಹಾಗೂ ಇತರ ಸದಸ್ಯರು ಹೇಳಿದರು.

ತಾಪಂ ಮತ್ತು ಗ್ರಾಪಂ ಕೆಡಿಪಿ ಸಭೆ ನಡೆಸಿದ ಬಗ್ಗೆ ಸಮರ್ಪಕ ಮಾಹಿತಿ, ಸಭೆ ನಡೆಸುವ ಬಗ್ಗೆ ಸದಸ್ಯರಿಗೆ ಒದಗಿಸಬೇಕು ಎಂದು ಜಿಪಂ ಸಿಇಒ ಆದೇಶಿಸಿದರು. ಅಲ್ಲದೇ ಮುಂಬರುವ ದಿನಗಳಲ್ಲಿ ಕೆಡಿಪಿ ಸಭೆ ನಡೆಸುವಾಗ  ವಿಡಿಯೋ ಗ್ರಾಫರ್ಸ್‌ ನಿಯೋಜಿಸಿ ಸಮರ್ಪಕ ಮಾಹಿತಿ ಒದಗಿಸುವ ಪ್ರಯತ್ನ ಮಾಡಲಾಗುವುದು ಎಂದು ಸಭೆಗೆ ಸಿಇಒ ತಿಳಿಸಿದರು.

ಮಾನ್ವಿ ಶಾಸಕ ಹಂಪಯ್ಯ ನಾಯಕ ಅವರು, ಬರಗಾಲ ಕಾಮಗಾರಿಗೆ ರೂಪಿಸಿದ ಕ್ರಿಯಾ ಯೋಜನೆ, ಎಷ್ಟು ಅನುದಾನ ಬಿಡುಗಡೆ ಆಗಿದೆ ಎಂಬ ಗಂಭೀರ ವಿಷಯ ಪ್ರಸ್ತಾಪಿಸಲು ಯತ್ನಿಸಿದಾಗ, ಅನುಪಾಲನಾ ವರದಿ ವಿಷಯ ಚರ್ಚೆ ಬಳಿಕ ತಾವು ಪ್ರಸ್ತಾಪಿಸಿದ ವಿಷಯದ ಬಗ್ಗೆ ಸಭೆ ಚರ್ಚೆ ಮಾಡಬಹುದು ಎಂದು ಸಿಇಒ ಮನೋಜಕುಮಾರ ಜೈನ್ ಹೇಳಿದರು.

ಸಿಇಒ ಉತ್ತರಕ್ಕೆ ಕೆಲ ಕ್ಷಣ ಸುಮ್ಮನೆ ಕುಳಿತ ಶಾಸಕ ಹಂಪಯ್ಯ ನಾಯಕ ಅವರು, ಸಭೆಯಿಂದಲೇ ಹೊರ ನಡೆದು ಹೋಗುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದು ಕಂಡು ಬಂದಿತು.

ಉದ್ಯೋಗ ಖಾತರಿ ಯೋಜನೆಯಡಿ ಕೆಲಸ ಮಾಡಿದ ಕೂಲಿಕಾರರಿಗೆ 15 ದಿನದಲ್ಲಿ ಹಣ ಪಾವತಿಸಬೇಕು ಎಂಬ ನಿಯಮವಿದೆ. ಆದರೆ ಹಲವು ತಿಂಗಳಾದರೂ ಕೆಲಸ ಮಾಡಿದವರಿಗೆ ಹಣ ಪಾವತಿ ಆಗಿಲ್ಲ. ಪ್ರಶ್ನಿಸಿದರೆ ನೋಡಲ್ ಅಧಿಕಾರಿಗಳು ಪರಿಶೀಲನೆ ನಡೆಸಬೇಕು. ಥರ್ಡ್ ಪಾರ್ಟಿ ಭೇಟಿ ನೀಡಿ ವರದಿ ಕೊಡಬೇಕು ಎಂಬ ಏನೆಲ್ಲ ಕಾರಣ ಹೇಳಿ ಕಾಲ ಹರಣ ಮಾಡಲಾಗುತ್ತಿದೆ ಎಂದು ಸದಸ್ಯ ಹನುಮೇಶ  ಮದ್ಲಾಪುರ ಹೇಳಿದರು.

ಸದ್ಯ ಕೆಲಸ ಮಾಡುವವರಿಗೆ ಹಣ ದೊರಕಿಸಲು ಸಮಸ್ಯೆ ಇಲ್ಲ. ಹಿಂದೆ ಕೆಲಸ ಮಾಡಿದ್ದರೆ ಅದಕ್ಕೆ ಹಣ ಪಾವತಿ ತಡವಾಗಿದೆ. 6ರಂದು 14 ಕೋಟಿ ಬಿಡುಗಡೆ ಆಗಿದೆ. ಆ ಹಣ ಪಾವತಿಗೆ ಈಗ ಸಮಸ್ಯೆ ಇಲ್ಲ. ಈ ದಿಶೆಯಲ್ಲಿ ಲೋಪ ಇದ್ದರೆ ಸರಿಪಡಿಸಲಾಗುವುದು ಎಂದು ಉಪ ಕಾರ್ಯದರ್ಶಿ ಮಹಮ್ಮದ್ ಯೂಸೂಫ್ ಉತ್ತರಿಸಿದರು.
 

ಅಂಗನವಾಡಿಗಳ ಮಕ್ಕಳ ಸಂಖ್ಯೆ ಸಮರ್ಪಕ ದಾಖಲಾತಿ ಇಡಬೇಕು. ಕಡಿಮೆ ಸಂಖ್ಯೆ ಮಕ್ಕಳಿದ್ದರೂ ಹೆಚ್ಚಿನ ಮಕ್ಕಳು ಇರುವ ಬಗ್ಗೆ ದಾಖಲೆ ಇರುವ ಬಗ್ಗೆ ದೂರುಗಳು ಬರುತ್ತಿವೆ. ಈ ಬಗ್ಗೆ ಅಧಿಕಾರಿಗಳು ಪರಿಶೀಲನೆ ಮಾಡಬೇಕು. ಅಲ್ಲದೇ ಅಂಗನವಾಡಿ ಶುಚಿತ್ವ ಬಹುಮುಖ್ಯ.
 
ಮಕ್ಕಳಿಗೆ ಆಹಾರ ವಿತರಿಸಲು ಉತ್ತಮ ರೀತಿ ತಟ್ಟೆ, ನೀರು ಕುಡಿಯಲು ಲೋಟದಂಥ ವ್ಯವಸ್ಥೆ ಮಾಡಬೇಕು. ಎಷ್ಟೋ ಅಂಗನವಾಡಿಗೆ ಕಟ್ಟಡವಿಲ್ಲ. ದಾನಿಗಳು  ನಿವೇಶನ ಒದಗಿಸಿದರೆ ಅಲ್ಲಿ ಕಟ್ಟಡ ನಿರ್ಮಿಸಿ ಅವರ ಹೆಸರು ಹಾಕುವ ವ್ಯವಸ್ಥೆ ಆಗಬೇಕು ಎಂದು ಸದಸ್ಯ ವಿಶ್ವನಾಥ ಪಾಟೀಲ್ ಸಭೆಯ ಗಮನಕ್ಕೆ ತಂದರು.

ಈಗಾಗಲೇ ಅನೇಕ ದಾನಿಗಳು ನಿವೇಶನ ಒದಗಿಸಿದ್ದಾರೆ. ಕಟ್ಟಡ ನಿರ್ಮಿಸಲಾಗಿದೆ. ಹೆಸರು ಹಾಕಿಲ್ಲ. ಹೆಸರು ಹಾಕಿಸುವ ಬಗ್ಗೆ ಗಮನಹರಿಸಲಾಗುವುದು. ಸದ್ಯ ಜಿಲ್ಲೆಯಲ್ಲಿ 12 ಅಂಗನವಾಡಿಗೆ ಕಟ್ಟಡಗಳಿಲ್ಲ. ಸರ್ಕಾರದ ಗಮನಕ್ಕೆ ತರಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿ ರೋಹಿಣಿ ಹಿರೇಮಠ ಹೇಳಿದರು.

ಮಾಹಿತಿ ಕೈಪಿಡಿ ಬಿಡುಗಡೆ:  ಜಿಲ್ಲಾ ಪಂಚಾಯತ, ಕೃಷಿ ಇಲಾಖೆ ಮತ್ತು ಜಿಲ್ಲಾಡಳಿತದಿಂದ ಪ್ರಕಟಿಸಿದ ಕೃಷಿ, ಜಲಾನಯನ, ತೋಟಗಾರಿಕೆ, ರೇಷ್ಮೆ, ಅರಣ್ಯ, ಪಶುಪಾಲನೆ ಹಾಗೂ ಮೀನುಗಾರಿಕೆ ಇಲಾಖೆಗಳಲ್ಲಿ ಅನುಷ್ಠಾನಗೊಳಿಸುತ್ತಿರುವ ವಿವಿಧ ಯೋಜನೆಗಳ ಮಾಹಿತಿ ಕೈಪಿಡಿಯನ್ನು ಜಿಪಂ ಅಧ್ಯಕ್ಷೆ ತನ್ವೀರಾ ಬಷಿರುದ್ದೀನ್ ಬಿಡುಗಡೆ ಮಾಡಿದರು. ಉಪಾಧ್ಯಕ್ಷೆ ಹರ್ಷಿತಾ ಜಗನ್ನಾಥರಾಯ, ಸಿಇಒ ಮನೋಜಕುಮಾರ ಜೈನ್, ಯೋಜನಾಧಿಕಾರಿ ಡಾ. ರೋಣಿ, ಶಾಸಕ ಹಂಪಯ್ಯ ನಾಯಕ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಭೂನಗೌಡ ಪಾಟೀಲ, ಜಾಫರ ಅಲಿ ಪಟೇಲ್ ಹಾಗೂ ಇತರರಿದ್ದರು.

ಸಭೆಯ ಅಧ್ಯಕ್ಷತೆಯನ್ನು ಜಿಪಂ ಅಧ್ಯಕ್ಷೆ ತನ್ವೀರಾ ಬಷಿರುದ್ದೀನ್ ವಹಿಸಿದ್ದರು. ಉಪಾಧ್ಯಕ್ಷೆ ಹರ್ಷಿತಾ ಜಗನ್ನಾಥರಾಯ, ಸಿಇಒ ಮನೋಜಕುಮಾರ, ಯೋಜನಾಧಿಕಾರಿ ಡಾ. ರೋಣಿ ವೇದಿಕೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT