ADVERTISEMENT

ತುಂಬಿದ ಕೆರೆಯ ಏರಿಯಲ್ಲಿ ಗಿಡಗಂಟಿ

ವರದೋಹಳ್ಳಿ ಕೆರೆ ತುಂಬಿ ಕೋಡಿ, ಮರಕ್ಕೆ ಸಿಡಿಲು, ಬೆಂಕಿ ವೀಕ್ಷಣೆ

​ಪ್ರಜಾವಾಣಿ ವಾರ್ತೆ
Published 28 ಮೇ 2018, 9:24 IST
Last Updated 28 ಮೇ 2018, 9:24 IST
ತುಂಬಿರುವ ವರದೋಹಳ್ಳಿ ಕೆರೆಯ ಏರಿಯ ಒಳಗೆ ಬೆಳೆದಿರುವ ಗಿಡಗಂಟಿಗಳು (ಎಡಚಿತ್ರ) ತುಂಬಿರುವ ವರದೋಹಳ್ಳಿ ಕೆರೆಯ ಏರಿಯ ದುಸ್ಥಿತಿ
ತುಂಬಿರುವ ವರದೋಹಳ್ಳಿ ಕೆರೆಯ ಏರಿಯ ಒಳಗೆ ಬೆಳೆದಿರುವ ಗಿಡಗಂಟಿಗಳು (ಎಡಚಿತ್ರ) ತುಂಬಿರುವ ವರದೋಹಳ್ಳಿ ಕೆರೆಯ ಏರಿಯ ದುಸ್ಥಿತಿ   

ತಿಪ್ಪಸಂದ್ರ(ಮಾಗಡಿ): ವರದೋಹಳ್ಳಿ ಕೆರೆ ತುಂಬಿ ಕೋಡಿ ಹರಿದಿದೆ. ಕೆರೆಯ ಏರಿಯ ಎರಡು ಕಡೆಗಳಲ್ಲಿ 10 ವರ್ಷಗಳಿಂದ ಬೆಳೆದಿರುವ ಗಿಡಮರಗಳು ಅಪಾಯಕಾರಿಯಾಗಿವೆ.

ಕೆರೆಯ ಏರಿಯಲ್ಲಿ ಗಿಡಮರಗಳ ಬೇರುಗಳು ಬೆಳೆದು, ಏರಿಯಲ್ಲಿ ಬಿರುಕು ಉಂಟಾಗಿ ಕೆರೆಯಲ್ಲಿ ಸಂಗ್ರಹವಾಗಿರುವ ಮಳೆಯ ನೀರು ಸೋರಿ ಪೋಲಾಗುತ್ತಿದೆ ಎಂದು ತಾಲ್ಲೂಕು ರೈತ ಸಂಘ ಮತ್ತು ಹಸಿರು ಸೇನೆಯ ಅಧ್ಯಕ್ಷ ಹೊಸಪಾಳ್ಯ ಲೋಕೇಶ್ ತಿಳಿಸಿದ್ದಾರೆ.

ಕೆರೆಯಲ್ಲಿನ ಜಾಲಿಯ ಮರಕ್ಕೆ ಸಿಡಿಲು ಬಡಿದು ಬೆಂಕಿ ಹೊತ್ತಿಕೊಂಡಿದ್ದನ್ನು ವೀಕ್ಷಿಸಲು ಭೇಟಿ ನೀಡಿದ ಅಲ್ಲಿನ ಸ್ಥಿತಿಗತಿಯನ್ನು ಗಮನಿಸಿದ ನಂತರ ‘ಪ್ರಜಾವಾಣಿ’ಯೊಂದಿಗೆ ಅವರು ಮಾತನಾಡಿದರು. ಕೆರೆಯ ಒಳಗೆ ಜಾಲಿಯ ಮರಗಳನ್ನು ಬೆಳೆಸಲಾಗಿದೆ.

ADVERTISEMENT

ಏರಿಯನ್ನು ದುರಸ್ತಿ ಮಾಡದ ಕಾರಣ ಏರಿಯ ಎರಡು ಬದಿಗಳಲ್ಲಿ ಗಿಡಮರಗಳು ಹೆಮ್ಮರವಾಗಿ ಬೆಳೆದಿವೆ. ಅವುಗಳ ಬೇರುಗಳ ಏರಿಯಲ್ಲಿ ಬಿರುಕು ಉಂಟು ಮಾಡಿವೆ ಎಂದು ಲೋಕೇಶ್‌ ತಿಳಿಸಿದ್ದಾರೆ.

‘ಮಳೆಯ ನೀರನ್ನು ಸಂಗ್ರಹ ಮಾಡಲು ಪುರಾತನ ಕಾಲದಲ್ಲಿಯೇ ನಮ್ಮ ಪೂರ್ವಿಕರು ಕೆರೆ ಗೋಕಟ್ಟೆ, ಕಲ್ಯಾಣಿಗಳನ್ನು ಕಟ್ಟಿಸಿದ್ದಾರೆ. ದುರಂತ ಎಂದರೆ ನಾವು ಕೆರೆಕಟ್ಟೆಗಳನ್ನು ಉಳಿಸಿಕೊಳ್ಳುವಲ್ಲಿ ವಿಫಲರಾಗುತ್ತಿದ್ದೇವೆ’ ಎಂದಿದ್ದಾರೆ.

ಗ್ರಾಮದಲ್ಲಿ ಶೌಚಾಲಯಗಳಿಲ್ಲದ ಕಾರಣ ಕೆರೆಯ ಏರಿಯ ಮೇಲೆ ಬಯಲು ಬಹಿರ್ದೆಸೆಯ ತಾಣ ಮಾಡಿಕೊಂಡಿದ್ದು, ಕೆರೆಯ ಪಾವಿತ್ರ್ಯವನ್ನೇ ಹಾಳು ಮಾಡಿದ್ದಾರೆ. ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ಕನಿಷ್ಠ ಮಳೆಗಾಲದಲ್ಲಿ ಆದರೂ ಕೆರೆಗಳ ಸ್ಥಿಗತಿಗಳತ್ತ ಗಮನ ಹರಿಸಬೇಕಿದೆ ಎಂದಿದ್ದಾರೆ.

ಕೆರೆ ಒಡೆದು ಅನಾಹುತ ಸಂಭವಿಸಿದಾಗ ಭೇಟಿ ಕೊಡುವ ಬದಲು ಮೊದಲೇ ಕೆರೆಗಳಿಗೆ ಅಧಿಕಾರಿಗಳು ಭೇಟಿ ನೀಡುವಂತೆ ಆಗ್ರಹಪಡಿಸಿದ್ದಾರೆ. ವರದೋಹಳ್ಳಿ ಗ್ರಾಮದ ಮುಖಂಡರಾದ ತಿಮ್ಮಯ್ಯ, ಗಂಗಣ್ಣ ಹಾಗೂ ರೈತರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.