ADVERTISEMENT

ನಗರದತ್ತ ರೈತ ವರ್ಗ ವಲಸೆ: ಆತಂಕ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2011, 8:50 IST
Last Updated 14 ಮಾರ್ಚ್ 2011, 8:50 IST

ಚನ್ನಪಟ್ಟಣ: ರೈತರು ಕೃಷಿ ಚಟುವಟಿಕೆ ತೊರೆದು ನಗರದತ್ತ ಗುಳೆ ಹೋಗುತ್ತಿರುವುದು ಅಪಾಯಕಾರಿ ಬೆಳವಣಿಗೆಯಾಗಿದ್ದು, ಇದರಿಂದಾಗಿ ಭವಿಷ್ಯದಲ್ಲಿ ಆಹಾರದ ಹಾಹಾಕಾರ ಉಂಟಾಗಲಿದೆ ಎಂದು ಬಮೂಲ್ ಹಾಗೂ ಬಿಆರ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಎಸ್. ಲಿಂಗೇಶ್‌ಕುಮಾರ್ ತಿಳಿಸಿದರು.

ತಾಲ್ಲೂಕಿನ ಕೋಲೂರು ಗ್ರಾಮದಲ್ಲಿ ವಿದ್ಯಾನಿಕೇತನ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕ ಆಯೋಜಿಸಿದ್ದ ಯುವಜನರ ಪರಿಸರ ಜಾಗೃತಿ ಶಿಬಿರದಲ್ಲಿ ಅವರು ಮಾತನಾಡಿದರು.

ನಗರೀಕರಣದಿಂದ ಇಡೀ ದೇಶಕ್ಕೆ ಆಪತ್ತು ಉಂಟಾಗುತ್ತಿದೆ. ಐಟಿ-ಬಿಟಿ ಹೆಸರಿನಲ್ಲಿ ಯುವ ಜನರು ನಗರದತ್ತ ಆಕರ್ಷಿತರಾಗುತ್ತಿದ್ದಾರೆ.  ಇದರ ಸೆಳೆತಕ್ಕೆ ರೈತರೂ ಒಳಗಾಗುತ್ತಿರುವುದು ದುರಾದೃಷ್ಟಕರ ಸಂಗತಿ ಎಂದು ಅವರು ತಿಳಿಸಿದರು. 

ದೇಶಕ್ಕೆ ಅನ್ನ ನೀಡುತ್ತಿದ್ದ ರೈತರು ಮೂಲ ಕಸುಬನ್ನು ಮರೆತು ಪಟ್ಟಣ ಪ್ರದೇಶಗಳತ್ತ ಮುಖ ಮಾಡುತ್ತಿರುವುದರಿಂದ ಆಹಾರೋತ್ಪಾದನೆಯಲ್ಲಿ ಗಣನೀಯವಾಗಿ ಇಳಿಮುಖವಾಗುತ್ತಿದೆ. ಹೀಗೇ ಮಂದುವರಿದಲ್ಲಿ ದೇಶದಲ್ಲಿ ಆಹಾರ ಸಮಸ್ಯೆ ತಲೆದೋರುತ್ತದೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಕಲ್ಪನಾ ಮಲ್ಲಿಕಾರ್ಜುನೇಗೌಡ ಸ್ವಚ್ಛತೆ ಇರುವಲ್ಲಿ ಆರೋಗ್ಯವಿರುತ್ತದೆ, ಆರೋಗ್ಯವಿರುವಲ್ಲಿ ಐಶ್ವರ್ಯವಿರುತ್ತದೆ. ಗಿಡಮರಗಳನ್ನು ಬೆಳೆಸುವ ಮೂಲಕ ಪರಿಸರ ಸಂರಕ್ಷಿಸಿದರೆ ನಮ್ಮ ಆರೋಗ್ಯ ಉತ್ತಮವಾಗಿರುತ್ತದೆ. ಪ್ರತಿಯೊಬ್ಬರು ಪರಿಸರ ಸಂಕರಕ್ಷಣೆ ನಮ್ಮ ಕರ್ತವ್ಯ ಎಂಬ ಭಾವನೆ ಬೆಳೆಸಿಕೊಳ್ಳುವುದು ಅಗತ್ಯವಾಗಿದೆ ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಸದಸ್ಯೆ ಯು.ಪಿ. ನಾಗೇಶ್ವರಿ ಧ್ವಜಾರೋಹಣ ಮಾಡಿದರು. ತಾ.ಪಂ. ಸದಸ್ಯೆ ಪುಟ್ಟಮ್ಮ, ಗ್ರಾ.ಪಂ. ಅಧ್ಯಕ್ಷ ಕುಮಾರ್ ಮುಂತಾದವರು ಉಪಸ್ಥಿತರಿದ್ದರು. ಪ್ರಾಂಶುಪಾಲ ಟಿ.ಎಂ. ರಾಜು ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕ ಎನ್‌ಎಸ್‌ಎಸ್ ಅಧಿಕಾರಿ ಬಿ.ಪಿ. ಸುರೇಶ್ ಸ್ವಾಗತಿಸಿದರು. ಉಪನ್ಯಾಸಕ ವೆಂಕಟೇಶ್ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.