ರಾಮನಗರ: ಬೀದಿ ನಾಯಿ ಕಡಿತದಿಂದ ಶಾಲಾ ಬಾಲಕ ತೀವ್ರ ಗಾಯಗೊಂಡಿರುವ ಘಟನೆ ನಗರದಲ್ಲಿ ಶನಿವಾರ ನಡೆದಿದೆ.
ನಗರದ ವಿಜಯನಗರ ಬಡಾವಣೆಯ ಶಿವಣ್ಣ ಎಂಬುವರ ಮಗ ಚಂದನ ಕುಮಾರ್ (7) ಗಾಯಾಳು. ಸ್ಥಳೀಯ ಸರ್ಕಾರಿ ಶಾಲೆಯಲ್ಲಿ 2ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಈತ ಶಾಲೆ ಮುಗಿಸಿ ಮನೆಗೆ ತೆರಳುತ್ತಿದ್ದಾಗ ಬೀದಿ ನಾಯಿ ಕಚ್ಚಿದೆ. ಬಾಲಕನ ಮೇಲೆ ದಾಳಿ ನಡೆಸಿದ ನಾಯಿಯು ಎಡಗಣ್ಣಿನ ಮೇಲ್ಭಾಗದ ರೆಪ್ಪೆ, ಕೆನ್ನೆ ಹಾಗೂ ತಲೆ ಮೇಲೆ ಕಚ್ಚಿದೆ.
ಇದನ್ನು ಗಮನಿಸಿದ ಸ್ಥಳೀಯರು ಕಲ್ಲು ತೂರಿ ನಾಯಿಯನ್ನು ಓಡಿಸಿದ್ದಾರೆ. ಬಳಿಕ ಚಂದನ ಕುಮಾರನನ್ನು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ತೀವ್ರ ಗಾಯವಾಗಿದ್ದ ಹಿನ್ನೆಲೆಯಲ್ಲಿ ಬಾಲಕನಿಗೆ ಜಿಲ್ಲಾಸ್ಪತ್ರೆ ವೈದ್ಯರು ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಕೆಂಪೇಗೌಡ ಆಸ್ಪತ್ರೆಗೆ ಕಳುಹಿಸಿದ್ದಾರೆ.
ನಗರಸಭೆ ನಿರ್ಲಕ್ಷ್ಯ: `ವಿಜಯನಗರ ಬಡಾವಣೆಯೂ ಸೇರಿದಂತೆ ರಾಮನಗರದಾದ್ಯಂತ ಬೀದಿ ನಾಯಿಗಳ ಹಾವಳಿ ಬಗ್ಗೆ ವ್ಯಾಪಕ ದೂರುಗಳಿವೆ.
ನಾಯಿಗಳನ್ನು ನಿಯಂತ್ರಿಸುವಂತೆ ನೀಡುತ್ತಿರುವ ದೂರಿಗೆ ನಗರಸಭೆ ಅಧಿಕಾರಿಗಳು ಕವಡೆ ಕಾಸಿನ ಕಿಮ್ಮತ್ತು ನೀಡುತ್ತಿಲ್ಲ' ಎಂದು ಗಾಯಾಳು ಬಾಲಕನ ಸಂಬಂಧಿ ಹರ್ಷಕುಮಾರ್ ಆರೋಪಿಸಿದರು. `ಬೀದಿ ನಾಯಿಗಳ ನಿಯಂತ್ರಣಕ್ಕೆ ಸರ್ಕಾರದಿಂದಲೇ ಸಾಕಷ್ಟು ಅನುದಾನ ಬರುತ್ತಿದೆಯಾದರೂ ಉದ್ದೇಶ ಮಾತ್ರ ಈಡೇರುತ್ತಿಲ್ಲ. ಅಧಿಕಾರಿಗಳು ಹಾಗೂ ಸಿಬ್ಬಂದಿ ಇಲ್ಲ ಸಲ್ಲದ ಸಬೂಬು ಹೇಳಿಕೊಂಡು ಜನರನ್ನು ದಾರಿ ತಪ್ಪಿಸುತ್ತಿದ್ದಾರೆ.
ಬೀದಿ ನಾಯಿಗಳನ್ನು ಹಿಡಿದುಕೊಂಡು ನಗರಸಭೆ ಕಚೇರಿ ಹಾಗೂ ಅಧಿಕಾರಿಗಳ ಮನೆಗೆ ಬಿಡಬೇಕು' ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.ನಾಯಿ ಕಡಿತಕ್ಕೆ ಒಳಗಾದ ಬಾಲಕನಿಗೆ ಪ್ರಥಮ ಚಿಕಿತ್ಸೆಯನ್ನಷ್ಟೇ ಮಾಡಿ ಬೆಂಗಳೂರಿನ ಆಸ್ಪತ್ರೆಗೆ ಸಾಗ ಹಾಕಿದ ರಾಮನಗರ ಜಿಲ್ಲಾ ಸರ್ಕಾರಿ ಆಸ್ಪತ್ರೆಯ ವೈದ್ಯರ ವಿರುದ್ಧ ಬಾಲಕನ ಸಂಬಂಧಿಕರು ಟೀಕಾ ಪ್ರಹಾರ ನಡೆಸಿದರು. `ನಾಯಿ ಕಡಿತಕ್ಕೆ ಚಿಕಿತ್ಸೆ ಇಲ್ಲದ ಈ ಆಸ್ಪತ್ರೆಯನ್ನು ಜಿಲ್ಲಾಸ್ಪತ್ರೆ ಎಂದು ಹೇಳಿಕೊಳ್ಳಲು ನಾಚಿಕೆಯಾಗಬೇಕು' ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.