ADVERTISEMENT

ಪರಿಸರ ಸ್ವಚ್ಛತೆ ಎಲ್ಲರ ಜವಾಬ್ದಾರಿ

‘ಶಾಲಾ ನೈರ್ಮಲ್ಯ ಪ್ರಚಾರ’ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2018, 10:38 IST
Last Updated 17 ಏಪ್ರಿಲ್ 2018, 10:38 IST

ಕನಕಪುರ: ‘ಸಮಾಜ ಅಭಿವೃದ್ಧಿಯಲ್ಲಿ ಪ್ರತಿಯೊಬ್ಬರ ಪಾತ್ರವಿದ್ದು, ಜವಾಬ್ದಾರಿಯಿಂದ ನಾವು ಕೆಲಸ ಮಾಡಬೇಕಿದೆ’ ಎಂದು ನಗರಸಭೆ ಅಧ್ಯಕ್ಷ ಕೆ.ಎನ್‌.ದಿಲೀಪ್‌ ಹೇಳಿದರು.

ನಗರದ ಮೆಳೆಕೋಟೆ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಏರ್ಪಡಿಸಿದ್ದ ‘ಶಾಲಾ ನೈರ್ಮಲ್ಯ ಪ್ರಚಾರ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಹಾರೋಹಳ್ಳಿ ಆಸರೆ ಸಂಸ್ಥೆಯು ಸಾಮಾಜಿಕ ಕಳಕಳಿಯಿಂದ ಕೆಲಸ ಮಾಡುತ್ತಿದೆ, ‘ಜರೋಧ ಕೇರ್ಸ್ ಹಾಗೂ ಆಕ್ಷನ್ ಏಡ್ ಬೆಂಗಳೂರು’ ಇವರ ಹಣಕಾಸಿನ ನೆರವಿನಿಂದ ಕನಕಪುರದ ಮೆಳೆಕೋಟೆ ಸರ್ಕಾರಿ ಶಾಲೆಯಲ್ಲಿ 4ಶೌಚಾಲಯಗಳ ನಿರ್ಮಾಣ ಮಾಡಿದೆ ಎಂದರು.

ADVERTISEMENT

ಶಾಲೆಗೆ ಅವಶ್ಯಕವಾಗಿ ಬೇಕಿರುವ ನೀರು ಸರಬರಾಜನ್ನು ತ್ವರಿತವಾಗಿ ಮಾಡಿಕೊಡಲಿದೆ. ನಗರ ವ್ಯಾಪ್ತಿಯಲ್ಲಿ ಶೌಚಾಲಯಗಳ ಅವಶ್ಯಕತೆಯಿದ್ದರೆ ಖಂಡಿತ ಅದನ್ನು ನಗರಸಭೆ ನಿರ್ಮಾಣ ಮಾಡಿಕೊಡಲಿದೆ ಎಂದು ಅವರು ತಿಳಿಸಿದರು.

ಆಸರೆ ಮಹಿಳಾ ಸಂಸ್ಥೆ ಸಂಯೋಜಕಿ ನಾಗರತ್ನ ಬಂಜಗೆರೆ ಮಾತನಾಡಿ, ಕನಕಪುರ ತಾಲ್ಲೂಕಿನ 9 ಶಾಲೆಗಳಲ್ಲಿ ಒಟ್ಟು 20 ಶೌಚಾಲಯ ನಿರ್ಮಾಣ ಮಾಡಲು ಜರೋದ ಕೇರ್ಸ್ ಹಾಗೂ ಆಕ್ಷನ್ ಏಡ್ ನ ನೆರವಿನಿಂದ ಸಾಧ್ಯವಾಗಿದೆ. ಹಳ್ಳಿಗಾಡಿನ ಶೋಷಿತ ವರ್ಗದ ಮಕ್ಕಳ ಮೂಲ ಅಗತ್ಯ ಪೂರೈಕೆ‌ಯಾಗಿದೆ. ಸರ್ಕಾರಿ ಶಾಲೆಗಳಲ್ಲಿ ಶೌಚಾಲಯ ವ್ಯವಸ್ಥೆ ಇಲ್ಲದಿರುವುದರಿಂದ ಮಕ್ಕಳು ಮೂತ್ರ ವಿಸರ್ಜನೆಗೆ ಬೇಲಿ, ಬಯಲು ಪ್ರದೇಶ, ಗಲ್ಲಿಗಳನ್ನು ಆಶ್ರಯಿಸಬೇಕಿದೆ, ಈ ರೀತಿ ಹೋಗುವುದು ದುರದೃಷ್ಟಕರ ಎಂದರು.

ಸರ್ಕಾರವು ಎಲ್ಲ ಸರ್ಕಾರಿ ಶಾಲೆಗಳಲ್ಲಿ ಕಡ್ಡಾಯ ಶೌಚಾಲಯ ನಿರ್ಮಾಣ ಮಾಡಿ ಮೂಲ ಸೌಕರ್ಯ ಕಲ್ಪಿಸಬೇಕೆಂದು ಆಗ್ರಹಿಸಿದರು. ಆಕ್ಷನ್ ಏಡ್ ಸಂಸ್ಥೆಯ ರೇಶ್ಮಾ ಮಾತನಾಡಿ, ಗುಣಮಟ್ಟದ ಶಿಕ್ಷಣ ಮಕ್ಕಳ ಶಿಕ್ಷಣದ ಹಕ್ಕಿನ ಭಾಗವಾಗಿದೆ, ಮೂಲಸೌಕರ್ಯದ ಭಾಗವಾಗಿ ಬಳಕೆ ಯೋಗ್ಯ ಶೌಚಾಲಯದ ಅಗತ್ಯವು ಶಾಲೆಗಳಲ್ಲಿ ಪ್ರಮುಖ ವಿಷಯವಾಗಿದೆ. ಪ್ರತೀ ಶಾಲೆಯಲ್ಲಿ ಸೂಕ್ತವಾದ, ಬಳಕೆಗೆ ಯೋಗ್ಯ ಶೌಚಾಲಯದ ನಿರ್ಮಾಣ ಸರ್ಕಾರ ಹಾಗೂ ಸಮಾಜದ ಕರ್ತವ್ಯ ಹಾಗೂ ಹೊಣೆಗಾರಿಕೆಯಾಗಿದೆ. ಅದನ್ನು ನಿರ್ವಂಚನೆಯಿಂದ ಒದಗಿಸಬೇಕಿದೆ ಎಂದು ಒತ್ತಾಯಿಸಿದರು.

ನಗರ ಸಭೆ ಸದಸ್ಯ ಪ್ರಕಾಶ್ ಕಟ್ಟಡ ನಿರ್ಮಾಣದ ಕಾರ್ಯ ನೆರವೇರಿಸಿದ ಕುಮಾರ್ ಹಾಗೂ ಜರೋಧ ಕೇರ್ಸ್ ನ ಪ್ರತಿನಿಧಿ ಸಿ.ಎಸ್.ಆರ್ ಮುಖ್ಯಸ್ಥ ಪ್ರೀತೀಶ್ ಕುಮಾರ್ ಅವರಿಗೆ ಆಸರೆ ಸಂಸ್ಥೆ ಗೌರವ ಸನ್ಮಾನ ನೆರವೇರಿಸಿತು.

ಶಾಲಾ ಮುಖ್ಯೋಪಾಧ್ಯಾಯ ಶಿವಕುಮಾರ್, ಆಸರೆ ಸಂಸ್ಥೆಯ ಶೋಭಾ ಬೆಳಗುಳಿ, ಎಸ್.ಡಿ.ಎಂ.ಸಿ ಸದಸ್ಯರು, ಅಂಬೇಡ್ಕರ್ ಸಂಘದ ಪದಾಧಿಕಾರಿಗಳು, ಮಕ್ಕಳ ಪೋಷಕರು, ಸಮುದಾಯದ ಮುಖಂಡರು, ಶಾಲಾ ಮಕ್ಕಳು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.