ADVERTISEMENT

ಪಿರಮಿಡ್ ಶಾಲೆಯಲ್ಲಿ ನಾಳೆ ಅನ್ನದಾಸೋಹ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2011, 19:30 IST
Last Updated 27 ಅಕ್ಟೋಬರ್ 2011, 19:30 IST

ಮಾಗಡಿ: ತೊರೆಪಾಳ್ಯದ ದಂಡೆಯಲ್ಲಿರುವ ಪಿರಮಿಡ್ ಆಕಾರದ ಪಾರಂಗ ಶಾಲೆ ವೈಶಿಷ್ಟ್ಯವನ್ನು ಮೆರೆಯುತ್ತಿರುವ ಶಾಲೆ.

ಇಲ್ಲಿ ಪಾಠ ಉಚಿತ. ಪಾರಂಗ ಶಾಲೆಯ ಸ್ಥಾಪನೆಯ ಹಿಂದೆ ಮಾನವೀಯ ಕಾಳಜಿ ಇದೆ. ವೈಜ್ಞಾನಿಕ ಚಿಂತನೆಗಳಿವೆ. ಬೆಂಗಳೂರಿನ ಎನ್.ಎ.ಎಲ್.ನಲ್ಲಿ ವಿಜ್ಞಾನಿಯಾಗ್ದ್ದಿದ ಎಂ.ಆರ್.ರಾಮಮೂರ್ತಿ ಸ್ವಯಂ ನಿವತ್ತಿ ಪಡೆದು ಹಳ್ಳಿಗಾಡಿನ ಮಕ್ಕಳಿಗೆ ಅಕ್ಷರ ಕಲಿಸಲು ಅರ್ಪಿಸಿಕೊಂಡಿದ್ದರ ಫಲವೇ ಪಾರಂಗ.

ತಾಯಿ ಪಾರ್ವತಮ್ಮ, ತಂದೆ ರಂಗನಾಥರಾವ್ ಅದನ್ನು ಸಂಕ್ಷಿಪ್ತಗೊಳಿಸಿ, ಟ್ರಸ್ಟಿಗೆ ಪಾರಂಗ ಎಂದು ಕರೆದಿದ್ದಾರೆ. ವರ್ಷಪೂರ್ತಿ ಜುಳು ಜುಳು ನೀರು ಹರಿಯುವ ತೊರೆಯ ದಂಡೆಯ ಮೇಲಿರುವ ವಿಶಾಲ ಆವರಣ, ಹಸಿರು ಹೊದ್ದಿರುವ ಮೈದಾನ, ಬೀಸುವ ತಂಗಾಳಿ, ಸದ್ದಗದ್ದಲ ಇಲ್ಲದ ಪ್ರಶಾಂತ ವಾತಾವರಣ- ಕಲಿಯುವ ಹುಮ್ಮಸ್ಸಿನ ಮಕ್ಕಳಿಗೆ ಇದಕ್ಕಿಂತ ಹೆಚ್ಚಿಗೆ ಇನ್ನೇನು ಬೇಕು?

ಕಳೆದ 11 ವರ್ಷಗಳಿಂದಲೂ ಎಲ್.ಕೆ.ಜಿ ಯಿಂದ ಪ್ರೌಢಶಾಲೆಯವರೆಗೆ ಕನ್ನಡ ಮಾಧ್ಯಮದಲ್ಲಿ ನಡೆಯುತ್ತಿರುವ  ಶಾಲೆ ಎಂಬ ಹೆಗ್ಗಳಿಕೆ ಈ ಶಾಲೆಯದು.

 ಇನ್ನು ಶಿಕ್ಷಣದ ಮಾತು. ಯೋಗ, ಜನಪದ, ಸಂಗೀತ, ಧ್ಯಾನ, ಕ್ರೀಡೆ, ಸಾಂಸ್ಕೃತಿಕ ವಾತಾವರಣ ಆನಂದಮಯವಾಗಿದೆ. ಪಿರಮಿಡ್ ಆಕೃತಿಯ ಕೊಠಡಿಗಳಲ್ಲಿ ಕಲಿಯಲು ಮನಸ್ಸಿನ ಮೇಲೆ ಹೆಚ್ಚಿನ ಪ್ರಭಾವ ಬೀರುತ್ತಿದೆ ಎಂಬುದು ಸ್ಥಾಪಕರ ಅಭಿಪ್ರಾಯವಾಗಿದೆ. ಗಣಿತದಲ್ಲಿ ತಾಲ್ಲೂಕಿನಲ್ಲಿಯೇ ಅತ್ಯುತ್ತಮ ಶಿಕ್ಷಣ ನೀಡುವ ಶಾಲೆ ಎಂಬ ಅಭಿದಾನ ಪಾರಂಗದ್ದು. ದೇಶದಲ್ಲಿಯೇ ಮೊದಲ ಬಾರಿಗೆ ಪಿರಮಿಡ್ ಮಾದರಿಯ ಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳೆಲ್ಲರೂ ಹಳ್ಳಿಗಾಡಿನ ಬಡ ಮಕ್ಕಳು. ಪ್ರತಿಯೊಂದು ಕೊಠಡಿಯು 900 ಚದರ ಅಡಿಗಳನ್ನು ಒಳಗೊಂಡಿದ್ದು ಗಾಳಿ ಬೆಳಕಿಗೆ ಅನುಕೂಲವಾಗಿದೆ.

ನಿಸರ್ಗ ಸಹಜ ಬೆಳಕಿನಿಂದ ಕೂಡಿದ್ದು ಬೇಸಿಗೆಯಲ್ಲಿ ತಂಪು, ಚಳಿಗಾಲದಲ್ಲಿ ಬೆಚ್ಚಗಿನ ತಾಪಮಾನ ಇರುವಂತೆ ಮಂಗಳೂರು ಹೆಂಚುಗಳನ್ನು ಬಳಸಿ ಕಟ್ಟಲಾಗಿದೆ. 450 ಮಕ್ಕಳು ಓದುತ್ತಿದ್ದಾರೆ. ಉತ್ತಮ ಗ್ರಂಥಾಲಯ, ವಿಜ್ಞಾನ ಪ್ರಯೋಗ ಶಾಲೆ, ಆಟದ ಬಯಲು , ಪೀಠೋಪಕರಣಗಳು, ಕುಡಿಯುವ ನೀರು, ಶೌಚಾಲಯಗಳಿವೆ. ಪಾರಂಗ ಧರ್ಮ ಸಂಸ್ಥೆಯ ವತಿಯಿಂದ ಅ.29 ರಂದು ಮೊದಲಬಾರಿಗೆ ಅನುದಾನ ರಹಿತ ಖಾಸಗಿ ಶಾಲೆಯಲ್ಲಿ ದಾನಿಗಳ ನೆರವಿನೊಂದಿಗೆ ಅನ್ನಪೂರ್ಣ ಅನ್ನದಾಸೋಹಕ್ಕೆ ಚಾಲನೆ ದೊರೆಯಲಿದೆ.
-ದೊಡ್ಡಬಾಣಗೆರೆ ಮಾರಣ್ಣ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.