ADVERTISEMENT

ಪೂಲ್‌ ಬಾಗ್‌: ಸ್ವಚ್ಛತೆಗೆ ಸ್ಥಳೀಯರ ಆಗ್ರಹ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2017, 6:12 IST
Last Updated 17 ನವೆಂಬರ್ 2017, 6:12 IST
ರಾಮನಗರದ ಪೂಲ್ ಬಾಗ್‌ನಲ್ಲಿನ ಪ್ರದೇಶದಲ್ಲಿ ಅನುಪಯುಕ್ತ ಗಿಡಗಳು ಬೆಳೆದಿರುವುದು
ರಾಮನಗರದ ಪೂಲ್ ಬಾಗ್‌ನಲ್ಲಿನ ಪ್ರದೇಶದಲ್ಲಿ ಅನುಪಯುಕ್ತ ಗಿಡಗಳು ಬೆಳೆದಿರುವುದು   

ರಾಮನಗರ : ಇಲ್ಲಿನ 15ನೇ ವಾರ್ಡ್‌ನ ಲ್ಲಿನ ಪೂಲ್‌್ ಬಾಗ್‌ ಪ್ರದೇಶದಲ್ಲಿ ಸ್ವಚ್ಛತೆ ಎಂಬುದು ಮರೀಚಿಕೆಯಾಗಿದೆ. ಎರಡು ಎಕರೆ ವಿಸ್ತೀರ್ಣವುಳ್ಳ ಈ ಪ್ರದೇಶ ಕಾನೂನು ಬಾಹಿರ ಚಟುವಟಿಕೆಗಳ ತಾಣವಾಗಿ ಮಾರ್ಪಾಡಾಗಿದೆ. ಅನುಪಯುಕ್ತ ಗಿಡಗಳು ಬೆಳೆದು ಕ್ರಿಮಿಕೀಟ, ಸೊಳ್ಳೆಗಳ ತಾಣವಾಗಿದೆ. ಗಾಂಜಾ ಸೇವನೆ, ಜೂಜಾಟ, ಮದ್ಯ ಸೇವನೆ ಇನ್ನಿತರ ಕಾನೂನು ಬಾಹಿರ ಚುಟುವಟಿಕೆಗಳು ನಿರಂತರವಾಗಿ ನಡೆಯುತ್ತಿದ್ದರೂ, ಸಂಬಂಧಪಟ್ಟ ಅಧಿಕಾರಿಗಳು ಕ್ರಮಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಸ್ಥಳೀಯ ಜನರು ಆರೋಪಿಸಿದ್ದಾರೆ.

‘ಈ ಪ್ರದೇಶದಲ್ಲಿ ಹಾವುಗಳ ಸಂಖ್ಯೆ ಹೆಚ್ಚಾಗಿದೆ. ಈಚೆಗೆ ಹಾವು ಕಚ್ಚಿ ವ್ಯಕ್ತಿಯೊಬ್ಬ ಮೃತಪಟ್ಟಿದ್ದಾರೆ. ಇಲ್ಲಿನ ಪರಿಸರ ಸ್ವಚ್ಛಗೊಳಿಸಿ ಎಂದು ನಗರಸಭೆಗೆ ಹಲವು ಬಾರಿ ಮನವಿ ನೀಡಿದ್ದರೂ ಪ್ರಯೋಜನಾಗಿಲ್ಲ’ ಎಂದು ಸ್ಥಳೀಯರು ದೂರಿದ್ದಾರೆ.

ಪಾಳು ಬಿದ್ದಿರುವ ಜಾಗ ಯಾರಿಗೆ ಸೇರಿದೆ ಎಂಬುದು ನಗರಸಭೆ ಅಧಿಕಾರಿಗಳಿಗೂ ಗೊತ್ತಿಲ್ಲ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಈ ಪ್ರದೇಶಕ್ಕೆ ಭೇಟಿ ನೀಡಿ, ವ್ಯವಸ್ಥಿತವಾದ ಉದ್ಯಾನ ನಿರ್ಮಾಣ ಮಾಡಬೇಕು. ಒತ್ತುವರಿ ಜಾಗ ತೆರೆವುಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.

ADVERTISEMENT

ನಗರಸಭಾ ಸದಸ್ಯರಿಗೂ ಈ ಸಮಸ್ಯೆಯನ್ನು ಹಲವು ಬಾರಿ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಪ್ರತಿದಿನ ಹಾವುಗಳು ಮನೆಗಳಿಗೆ ನುಗ್ಗುತ್ತಿವೆ. ಮಕ್ಕಳು ರಸ್ತೆಯಲ್ಲಿ ಓಡಾಡಲು ಭಯಭೀತರಾಗಿದ್ದಾರೆ. ಕೂಡಲೇ ಈ ಪ್ರದೇಶವನ್ನು ಅಭಿವೃದ್ಧಿಗೊಳಿಸಿ, ಜನರಿಗೆ ಅನುಕೂಲ ಮಾಡಿಕೊಡಬೇಕು’ ಎಂದು ಸ್ಥಳೀಯ ನಿವಾಸಿಗಳಾದ ಮಮ್ತಾಜ್‌ ಉನ್ನೀಸಾ, ಆರ್ಶಿಯಾ ತಾಜ್, ರಕೀಬಾ, ಪ್ರವೀಣ್, ತಬಸಮ್, ನಿಜಾಂ, ಸುಲ್ತಾನ್ ಬಾನು, ನಗೀನಾ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.