ADVERTISEMENT

ಪೌರ ಕಾರ್ಮಿಕರ ಕಲ್ಯಾಣಕ್ಕೆ ಬದ್ಧ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2012, 4:50 IST
Last Updated 15 ಅಕ್ಟೋಬರ್ 2012, 4:50 IST

ಚನ್ನಪಟ್ಟಣ: ಪೌರಕಾರ್ಮಿಕರಿಗೆ ಸವಲತ್ತು ಒದಗಿಸಲು ನಗರಸಭೆ ಹಲವಾರು ಯೋಜನೆಗಳನ್ನು ರೂಪಿಸಿದೆ ಎಂದು ನಗರಸಭಾ ಅಧ್ಯಕ್ಷೆ ರೇಷ್ಮಾಭಾನು ಹೇಳಿದರು.

ಪಟ್ಟಣದ ಪುರಭವನದಲ್ಲಿ ಭಾನುವಾರ ನಡೆದ ಪೌರಕಾರ್ಮಿಕರ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪೌರಕಾರ್ಮಿಕರ ಕಾಲೋನಿಗೆ ಅಗತ್ಯ ಸೌಲಭ್ಯಗಳನ್ನು ನೀಡಲು ನಗರಸಭೆ ಸಿದ್ಧವಿದೆ. ಪೌರಕಾರ್ಮಿಕರು ಈ ಸೌಲಭ್ಯ ಉಪಯೋಗ ಮಾಡಿಕೊಳ್ಳಬೇಕು ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿದ ನಗರಸಭೆ ಉಪಾಧ್ಯಕ್ಷ ಕೆ.ಎಲ್.ಕುಮಾರ್ ಮಾತನಾಡಿ, ಪೌರ ಕಾರ್ಮಿಕರಿಗೆ ಸರ್ಕಾರ ಹಲವಾರು ಸೌಲಭ್ಯಗಳನ್ನು ನೀಡುತ್ತಿದೆ. ಈ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ಪೌರ ಕಾರ್ಮಿಕರು ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದರು.

ನಗರಸಭೆಗೆ ಕಡಿಮೆ ಪ್ರಮಾಣದ ಅನುದಾನ ಬರುತ್ತಿದೆ. ಇಲ್ಲಿನ ಪೌರ ಕಾರ್ಮಿಕರ ಸಂಖ್ಯೆ ಆಧಾರದ ಮೇಲೆ ನಿವೇಶನ ಮತ್ತು ಮೂಲಭೂತ ಸೌಕರ್ಯನೀಡಲಾಗುವುದು. ಪಟ್ಟಣದ ಸ್ವಚ್ಛತೆಯಲ್ಲಿ ಬಹುಮುಖ್ಯ ಪಾತ್ರ ವಹಿಸುವ ಪೌರ ಕಾರ್ಮಿಕರು ತಮ್ಮ ಆರೋಗ್ಯದ ಕಡೆಗೂ ಗಮನ ನೀಡಬೇಕು ಎಂದರು.

ಪೌರಾಯುಕ್ತ ಮುನಿಸ್ವಾಮಪ್ಪ ಮಾತನಾಡಿ, ಕೆಲವು ಪೌರ ಕಾರ್ಮಿಕರು ತಮ್ಮ ಆರೋಗ್ಯದ ಕಡೆ ಗಮನ ನೀಡದೆ ದುಶ್ಚಟಗಳಿಗೆ ಬಲಿಯಾಗಿ ಚಿಕ್ಕವಯಸ್ಸಿನಲ್ಲಿಯೇ ಅನಾರೋಗ್ಯ ಪೀಡಿತರಾಗುತ್ತಿರುವುದು ವಿಷಾದನೀಯ ಎಂದರು.

ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ರಮಣಪ್ಪ ಮಾತನಾಡಿ, ಪಟ್ಟಣದ ಸೂಕ್ತ ಸ್ಥಳದಲ್ಲಿ ನಮಗೆ ನಿವೇಶನ ನೀಡಿ ಎಲ್ಲಾ ಮೂಲಭೂತ ಸೌಕರ್ಯವನ್ನು ಒದಗಿಸಿಕೊಡಬೇಕು. ಸರ್ಕಾರದಿಂದ ಬರುವ ಸವಲತ್ತುಗಳನ್ನು ಪ್ರಾಮಾಣಿಕವಾಗಿ ತಲುಪಿಸಬೇಕು ಎಂದು ಮನವಿ ಮಾಡಿದರು.

ನಗರಸಭಾ ಸದಸ್ಯರಾದ ವಾಸಿಲ್ ಅಲಿಖಾನ್, ಪುರುಷೋತ್ತಮ್, ವಿಷಕಂಠಮೂರ್ತಿ, ರಾಜು, ಈಶ್ವರಿ, ಜಯರಾಮು, ದಲಿತ ಮುಖಂಡರಾದ ಸಿ.ವೆಂಕಟಾಚಲಯ್ಯ, ವೆಂಕಟೇಶ್, ಸಿದ್ದರಾಮಯ್ಯ, ಪರಿಸರ ಅಭಿಯಂತರರಾದ ಮೀನಾಕ್ಷಿ, ಕಿರಿಯ ಆರೋಗ್ಯ ಸಹಾಯಕರಾದ ಬಸವರಾಜು, ಮಂಜುನಾಥ್ ಇತರರು ಹಾಜರಿದ್ದರು.

ಇದೇ ವೇಳೆ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ  ಪೌರ ಕಾರ್ಮಿಕರಿಗೆ ಬಹುಮಾನ ವಿತರಿಸಲಾಯಿತು. ಹಾಗೆಯೇ ಹಿರಿಯ ಪೌರ ಕಾರ್ಮಿಕರನ್ನು ಸನ್ಮಾನಿಸಲಾಯಿತು. ಕಾರ್ಮಿಕ ಶ್ರಿನಿವಾಸ್ ಪ್ರಾರ್ಥಿಸಿದರು. ಸಿಇಒ  ಶಿನಾಂಕರೀಗೌಡ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.