ADVERTISEMENT

ಫಿಲ್ಟರ್ ಮರಳು ದಂದೆ ಸ್ಥಗಿತಕ್ಕೆ ಸಹಕಾರ ನೀಡಿ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2011, 19:30 IST
Last Updated 10 ನವೆಂಬರ್ 2011, 19:30 IST
ಫಿಲ್ಟರ್ ಮರಳು ದಂದೆ ಸ್ಥಗಿತಕ್ಕೆ ಸಹಕಾರ ನೀಡಿ
ಫಿಲ್ಟರ್ ಮರಳು ದಂದೆ ಸ್ಥಗಿತಕ್ಕೆ ಸಹಕಾರ ನೀಡಿ   

ರಾಮನಗರ: ವಿದ್ಯುತ್ ಸಮಸ್ಯೆಗೆ ಪರಿಹಾರ, ರಸಗೊಬ್ಬರದ ಬೆಲೆ ದುಬಾರಿ, ರಸ್ತೆ ವಿಸ್ತರಣೆ ಸೇರಿದಂತೆ ವಿವಿಧ ಸಮಸ್ಯೆಗಳನ್ನು ಚರ್ಚಿಸುವ ಸಲುವಾಗಿ ಬುಧವಾರ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಕರೆದಿದ್ದ ಸಭೆಯಲ್ಲಿ ರೈತಮುಖಂಡರು ಸಂಬಂಧಿಸಿದ ಇಲಾಖೆಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಆರಂಭದಲ್ಲಿ ವಿದ್ಯುತ್ ಸಮಸ್ಯೆ ಕುರಿತು ಚರ್ಚೆ ಆರಂಭವಾದಾಗ, ಬೆಸ್ಕಾಂ ಅಧಿಕಾರಿಗಳೇ ಸಭೆಗೆ ಬಂದಿರಲಿಲ್ಲ. ಇದರಿಂದ ಕುಪಿತಗೊಂಡ ರಾಜ್ಯ ರೈತ ಸಂಘದ ಸಂಚಾಲಕ ಜಿ.ಎ. ಲಕ್ಷ್ಮೀನಾರಾಯಣಗೌಡ, `ವಿದ್ಯುತ್ ಸಮಸ್ಯೆಯಿಂದ ರೈತ ಸಂಕಷ್ಟದಲ್ಲಿದ್ದಾರೆ.
 
3ಗಂಟೆ ವಿದ್ಯುತ್ ಕೊಡುತ್ತಾರೆ. ಅದರಲ್ಲಿ 4-5 ಬಾರಿ ಸಂಪರ್ಕ ಕಡಿತಗೊಳಿಸಲಾಗುತ್ತದೆ. ಈ ಸಮಸ್ಯೆ ಚರ್ಚಿಸಲು ಬಂದರೆ, ಅಧಿಕಾರಿಗಳೇ ನಾಪತ್ತೆ~ ಎಂದು ಬೇಸರ ವ್ಯಕ್ತಪಡಿಸಿದರು.

ರಸಗೊಬ್ಬರ ಪೂರೈಕೆಯಲ್ಲಿ ಏರು ಪೇರಾಗಿದೆ. ಕಾಳಸಂತೆಯಲ್ಲಿ ರಸಗೊಬ್ಬರ ಮಾರಾಟ ಮಾಡಲಾಗುತ್ತಿದೆ. ರಸಗೊಬ್ಬರದ ಮೇಲೆ ಅವೈಜ್ಞಾನಿಕವಾಗಿ ತೆರಿಗೆ ವಿಧಿಸಲಾಗುತ್ತಿದೆ.
 
ಈ ಕುರಿತು ಕೃಷಿ ಇಲಾಖೆ ಗಮನ ಹರಿಸಬೇಕೆಂದು ಗೌಡರು ಒತ್ತಾಯಿಸಿದರು.`60-50 ವರ್ಷದಿಂದ ಉಳುಮೆ ಮಾಡುತ್ತಿರುವ ರೈತರನ್ನು ಅರಣ್ಯ ಇಲಾಖೆ ಬಲವಂತವಾಗಿ ಒಕ್ಕಲೆಬ್ಬಿಸುತ್ತಿದೆ~ ಎಂಬ ರೈತರ ಆರೋಪಕ್ಕೆ ಪ್ರತಿಕ್ರಿಯಿಸಿದ ಅರಣ್ಯ ಇಲಾಖೆ ಅಧಿಕಾರಿಗಳು, `ನಾವು ಯಾವುದೇ ರೈತರನ್ನು ಒಕ್ಕಲೆಬ್ಬಿಸುತ್ತಿಲ್ಲ~ ಎಂದು ಉತ್ತರಿಸಿದರು.

ಇದರಿಂದ ಕೋಪಗೊಂಡ ರೈತಮುಖಂಡರು, `ರೈತರ ಜಮೀನಿನಲ್ಲಿ ಅರಣ್ಯಸಸಿಗಳನ್ನು ಏಕೆ ನೆಡುತ್ತಿದ್ದೀರಿ~ ಎಂದು ಪ್ರಶ್ನಿಸಿದರು. ಮಧ್ಯೆ ಪ್ರವೇಶಿಸಿದ ಜಿಲ್ಲಾಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

`ಫಿಲ್ಟರ್ ಮರಳು ದಂಧೆಗೆ ಕಡಿವಾಣ: ಜಿಲ್ಲೆಯಲ್ಲಿ ಫಿಲ್ಟರ್ ಮರಳು ಅವ್ಯಾಹತವಾಗಿ ನಡೆಯುತ್ತಿದೆ. ಮರಳು ದಂಧೆಗೆ ಪೊಲೀಸರ ಕುಮ್ಮಕ್ಕಿದೆ ಎಂದು ರೈತ ಮುಖಂಡರು ಆರೋಪಿಸಿದರು. ಫಿಲ್ಟರ್ ಮರಳು ದಂಧೆಗೆ ಇತಿಶ್ರೀ ಹಾಡಲು ಜಿಲ್ಲಾಡಳಿತ ಸಜ್ಜಾಗಿದೆ. ಇದಕ್ಕೆ ರೈತರು ಸಹಕರಿಸಬೇಕು.

ಫಿಲ್ಟರ್ ಮರಳುಗಾರಿಕೆ ನಡೆಸುವ ರೈತರ ಜಮೀನನ್ನು ಸರ್ಕಾರದ ವಶಕ್ಕೆ ತೆಗೆದುಕೊಳ್ಳುವ ಕಠಿಣ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಸಿ. ಪುಟ್ಟಸ್ವಾಮಿ ತಿಳಿಸಿದರು. ಜಿಲ್ಲೆಯಲ್ಲಿ ಸ್ಮಶಾನಗಳ ಕುರಿತು ತಹಶೀಲ್ದಾರ್‌ರಿಂದ ವಿವರ ಕೇಳಿದ ಜಿಲ್ಲಾಧಿಕಾರಿಗಳು, ಅವಶ್ಯಕವಿರುವು ಸ್ಮಶಾನಗಳ ನಿರ್ಮಾಣಕ್ಕೆ ಮುಂದಾಗಿ ಎಂದು ಸೂಚಿಸಿದರು.

ಬಸ್ ಸಂಚಾರ : ದೊಡ್ಡಮರಳವಾಡಿ - ಬಸವನಗುಡಿ ಗ್ರಾಮದ ನಡುವಿನ ರಸ್ತೆ ಬಹಳ ಕಿರಿದಾಗಿದೆ. ಸಂಚಾರ ತೊಂದರೆ ಆಗಿದೆ. ಈ ರಸ್ತೆಯನ್ನು ವಿಸ್ತರಿಸಬೇಕೆಂದು ರೈತರಾದ ಗಣೇಶ್, ಮುತ್ತುರಾಜ್ ಜಿಲ್ಲಾಧಿಕಾರಿ ಅವರಲ್ಲಿ ಮನವಿ ಮಾಡಿದರು.

ಸಾರಿಗೆ ಇಲಾಖೆ ರಾಮನಗರ ಘಟಕದಿಂದ ನೂತನವಾಗಿ ಆರು ಮಾರ್ಗಗಳಿಗೆ ಬಸ್ ಸಂಚಾರ ಆರಂಭಿಸಲಾಗಿದೆ. ಆದರೆ ಸ್ಥಳೀಯ ವ್ಯಾನ್ ಮಾಲೀಕರು ರಾಜಕೀಯ ಒತ್ತಡ ತಂದು ಈ ಸಂಚಾರ ವ್ಯವಸ್ಥೆಯನ್ನು ನಿಲ್ಲಿಸುವ ಪಿತ್ತೂರಿ ನಡೆಸುತ್ತಿದ್ದಾರೆ. ಯಾವುದೇ ಕಾರಣಕ್ಕೂ ಸರ್ಕಾರ ಈ ಸಂಚಾರ ನಿಲ್ಲಿಸಬಾರದೆಂದು ರೈತ ಮುಖಂಡ ಬಸವರಾಜು ಜಿಲ್ಲಾಧಿಕಾರಿ ಮನವಿ ಮಾಡಿದರು.

ಸಭೆಯಲ್ಲಿ ಮರಳವಾಡಿ ಹೋಬಳಿ ರೈತಸಂಘದ ಅಧ್ಯಕ್ಷ ಪುಟ್ಟರಾಜು, ಸಂಚಾಲಕ ರಾಜು, ಅಪರ ಜಿಲ್ಲಾಧಿಕಾರಿ ಅರ್ಚನ, ಉಪ ವಿಭಾಗಧಿಕಾರಿ ನವೀನ್‌ಕುಮಾರ್, ತಹಶೀಲ್ದಾರ್‌ಗಳಾದ ರವಿ ತೀರ್ಲಾಪುರ, ಪ್ರಜ್ಞಾ ಅಮ್ಮೆಂಬಳ, ಅರುಣಪ್ರಭ, ಪ್ರಕಾಶ್, ಮತ್ತಿತರ ಇಲಾಖಾ ಅದಿಕಾರಿಗಳು ಭಾಗವಹಿಸಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.