ರಾಮನಗರ: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಹಸಿರು ಕ್ರಾಂತಿಯ ಹರಿಕಾರ ಡಾ.ಬಾಬು ಜಗಜೀವನ್‌ರಾಮ್ ಇಬ್ಬರೂ ಅಸ್ಪೃಶ್ಯತೆ ವಿಚಾರದಲ್ಲಿ ಸಮಾನ ದುಃಖಿಗಳು. ಸಮಾಜದಲ್ಲಿನ ಅಸಮಾನತೆಯನ್ನು ಹೋಗಲಾಡಿಸುವಲ್ಲಿ ಇಬ್ಬರೂ ಶ್ರಮಿಸಿದ್ದಾರೆ. ಹಾಗಾಗಿ ಇವರನ್ನು ಪ್ರತ್ಯೇಕಿಸಿ ನೋಡುವುದು ಸರಿಯಲ್ಲ ಎಂದು ಕವಿ ಪ್ರೊ.ಕೆ.ಬಿ.ಸಿದ್ದಯ್ಯ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಸಮಾಜ ಕಲ್ಯಾಣ ಇಲಾಖೆ ಹಾಗೂ ನಗರಸಭೆ ಜಂಟಿಯಾಗಿ ನಗರದ ಡಾ. ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಗುರುವಾರ ನಡೆದ ಬಾಬು ಜಗಜೀವನ್‌ರಾಮ್ ಅವರ 105ನೇ ಜನ್ಮದಿನಾಚರಣೆಯಲ್ಲಿ ಅವರು ಮಾತನಾಡಿದರು.
ಕೆಲ ರಾಜಕಾರಣಿಗಳು ಈ ಇಬ್ಬರೂ ಮಹಾನ್ ವ್ಯಕ್ತಿಗಳನ್ನು ಪ್ರತ್ಯೇಕಿಸುವ ಹುನ್ನಾರ ಮಾಡುತ್ತಿದ್ದಾರೆ. ಈ ಮೂಲಕ ದಲಿತ ಸಂಘಟನೆ ಒಗ್ಗಟ್ಟು ಒಡೆಯುವ ತಂತ್ರಗಳು ನಡೆಯುತ್ತಿವೆ ಎಂದರು.
ಸಮಾರಂಭ ಉದ್ಘಾಟಿಸಿದ ಶಾಸಕ ಕೆ.ರಾಜು ಮಾತನಾಡಿ, ಜಗಜೀವನರಾಮ್ ಅವರ ಕನಸು ನನಸು ಮಾಡುವ ನಿಟ್ಟಿನಲ್ಲಿ ಚುನಾಯಿತ ಪ್ರತಿನಿಧಿಗಳು ಕೆಲಸ ಮಾಡಬೇಕು. ಪ್ರಜ್ಞಾವಂತ, ವಿದ್ಯಾವಂತ ಜನತೆಯೇ ಜಾತಿ ವ್ಯವಸ್ಥೆಯನ್ನು ಪೋಷಿಸುತ್ತಿರುವುದು ದುರಂತವೆಂದು ವಿಷಾದಿಸಿದರು.
ರಾ-ಚ ಪ್ರಾಧಿಕಾರದ ಅಧ್ಯಕ್ಷ ಕೆ.ಶೇಷಾದ್ರಿ, ಜಿಲ್ಲಾ ಉಸ್ತುವಾರಿ ಮತ್ತು ಅರಣ್ಯ ಸಚಿವ ಸಿ.ಪಿ.ಯೋಗೇಶ್ವರ್ ಮಾತನಾಡಿದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಯು.ಪಿ.ನಾಗೇಶ್ವರಿ, ಉಪಾಧ್ಯಕ್ಷೆ ಮಾದೇವಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಭಾನುಮತಿ, ಉಪಾಧ್ಯಕ್ಷೆ ಶೋಭಾ, ನಗರಸಭೆ ಅಧ್ಯಕ್ಷ ಸಾಬಾನ್‌ಸಾಬ್, ಉಪಾಧ್ಯಕ್ಷ ಬಿ.ಉಮೇಶ್, ಜಿ.ಪಂ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ರಂಗಸ್ವಾಮಿ, ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ, ಉಪ ವಿಭಾಗಾಧಿಕಾರಿ ಡಾ.ಸ್ನೇಹ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗರವಾಲ್, ಜಿ.ಪಂ. ಸಿಇಒ ಕೆ.ಎಸ್.ವೆಂಕಟೇಶಪ್ಪ, ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ನಾರಾಯಣಸ್ವಾಮಿ, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಟಿ.ಎಸ್.ತಿಮ್ಮಪ್ಪ, ಪೌರಾಯುಕ್ತ ಸಿದ್ದರಾಜು, ಅಂಬೇಡ್ಕರ್ ಅಭಿವೃದ್ಧಿ ನಿಗಮದ ತಾಲ್ಲೂಕು ಅಧಿಕಾರಿ ಬಿ. ಸರೋಜದೇವಿ ಇತರರು ಇದ್ದರು.
ಗಾಯಕ ವಿ.ಲಿಂಗರಾಜು ಮತ್ತು ತಂಡ ನಾಡ ಗೀತೆ, ರೈತಗೀತೆ ಪ್ರಸ್ತುತಪಡಿಸಿದರು.
ಇದೇ ಸಂದರ್ಭದಲಿ ರಾಮನಗರದ ಸಿ.ವೆಂಕಟೇಶ್, ಬಿ.ಸರೋಜದೇವಿ, ಚನ್ನಪಟ್ಟಣದ ಲಕ್ಷ್ಮೀಪತಿ, ಮಂಗಳವಾರಪೇಟೆ, ಕನಕಪುರದ ಎಚ್.ಕೆ.ಕೃಷ್ಣಪ್ಪ, ಮಾದೇವಿ, ಮಾಗಡಿಯ ಗಂಗಾಧರ್ ಅವರನ್ನು ಸನ್ಮಾನಿಸಲಾಯಿತು.
ಸಮುದಾಯ ಭವನ
ಚನ್ನಪಟ್ಟಣ: ತಾಲ್ಲೂಕಿನಲ್ಲಿ 1 ಕೋಟಿ ರೂಪಾಯಿ ವೆಚ್ಚದಲ್ಲಿ ಬಾಬು ಜಗಜೀವನ್ ರಾಮ್ ಸಮುದಾಯ ಭವನ ನಿರ್ಮಿಸಲು ಸರ್ಕಾರ ಮುಂದಾಗಿದೆ ಎಂದು ಸಿ.ಪಿ.ಯೋಗೇಶ್ವರ್ ಹೇಳಿದರು.
ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಸಮಿತಿಯ ಪುರಭವನದ ಆವರಣದಲ್ಲಿ ಗುರುವಾರ ಏರ್ಪಡಿಸಿದ್ದ ಬಾಬುಜೀ ಅವರ ಜನ್ಮದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಂಗಳವಾರಪೇಟೆ ಸರ್ಕಾರಿ ಪ್ರೌಢಶಾಲೆ ಶಿಕ್ಷಕ ಎಸ್.ತಿಮ್ಮರಾಜು, ಜಗಜೀವನ್‌ರಾಮ್ ಗುಣಗಾನ ಮಾಡಿದರು.
ನಗರಸಭಾ ಅಧ್ಯಕ್ಷೆ ರೇಷ್ಮಾಭಾನು, ಉಪಾಧ್ಯಕ್ಷ ಕೆ.ಎಲ್.ಕುಮಾರ್, ನಗರಸಭಾ ಸದಸ್ಯರಾದ ಪುರುಷೋತ್ತಮ್, ವಿಷಕಂಠು, ಕಾರ್ಯನಿರ್ವಹಣಾಧಿಕಾರಿ ರವಿಕುಮಾರ್, ತಹಶೀಲ್ದಾರ್ ಅರುಣಪ್ರಭಾ, ಸಮಾಜ ಕಲ್ಯಾಣಾಧಿಕಾರಿ ಮಾಲತಿ, ಕ್ಷೇತ್ರಶಿಕ್ಷಣಾಧಿಕಾರಿ ಶಿವಪ್ಪ, ಪೌರಾಯುಕ್ತ ರಾಮಚಂದ್ರು ಇತರರು ಇದ್ದರು. ಈ ಸಂದರ್ಭದಲ್ಲಿ ಪತ್ರಕರ್ತ ಲಕ್ಷ್ಮೀಪತಿ, ಪಿಎಚ್‌ಡಿ ಪದವೀಧರರಾದ ಸರ್ವಮಂಗಲ, ನಗರಸಭೆ ನೌಕರ ರಮಣಯ್ಯ ಅವರನ್ನು ಸನ್ಮಾನಿಸಲಾಯಿತು.
ಹಸಿರು ಕ್ರಾಂತಿಯ ಹರಿಕಾರ
ಕನಕಪುರ: ದೇಶದಲ್ಲಿ ಹಸಿರು ಕ್ರಾಂತಿಗೆ ಕಾರಣರಾದವರು ಬಾಬು ಜಗಜೀವನ್‌ರಾಮ್ ಎಂದು ಪುರಸಭೆಯ ಮುಖ್ಯಾಧಿಕಾರಿ ಮಾಯಣ್ಣಗೌಡ ಹೇಳಿದರು.
ತಾಲ್ಲೂಕು ಕಚೇರಿಯಲ್ಲಿ ನಡೆದ ಮಾಜಿ ಉಪ ಪ್ರಧಾನಿ ಜಗಜೀವನ್‌ರಾಮ್ ಅವರ ಜನ್ಮ ದಿನಾಚರಣೆಯಲ್ಲಿ ಮಾತನಾಡಿ, ದೇಶದಲ್ಲಿ ಆಹಾರ ಕ್ಷಾಮ ತಲೆದೋರಿದಾಗ ಅದನ್ನು ನೀಗಿಸಲು ಹಸಿರು ಕ್ರಾಂತಿಗೆ ಕಾರಣರಾದವರು ಬಾಬೂಜೀ ಎಂದರು.
ಬಿ.ಎಸ್.ಪಿ. ಜಿಲ್ಲಾ ಅಧ್ಯಕ್ಷ ಮಲ್ಲಿಕಾರ್ಜುನ್, ಬಾಬು ಜಗಜೀವನ್ ರಾಮ್ ಅಸ್ಪೃಶ್ಯತೆ, ಅಸಮಾನತೆ ವಿರುದ್ಧ ದ್ವನಿ ಎತ್ತಿದವರು. ಅಂಬೆಡ್ಕರ್ ಮತ್ತು ಜಗಜೀವನ್ ರಾಮ್ ಶೋಷಿತ ಸಮುದಾಯದ ಆಶಾಕಿರಣಗಳು ಎಂದರು.
ತಹಶೀಲ್ದಾರ್ ಡಾ. ದಾಕ್ಷಾಯಿಣಿ ಅಧ್ಯಕ್ಷತೆವಹಿಸಿದ್ದರು. ಉಪ ತಹಶೀಲ್ದಾರ್ ತಿಮ್ಮಪ್ಪ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಬಾಲಚಂದ್ರ, ಬಿಇಒ ಶಿವರಾಮೇಗೌಡ, ರಘು, ದಲಿತ ಶಿವಲಿಂಗಯ್ಯ ಇತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.