ADVERTISEMENT

ಬಿಜೆಪಿ ಕಾರ್ಯರ್ತರಿಂದ ಪ್ರತಿಭಟನೆ

ಪಕ್ಷದ ಕಚೇರಿ ಬಳಿಯಿಂದ ತಾಲ್ಲೂಕು ಕಚೇರಿವರೆಗೆ ಹೆದ್ದಾರಿಯಲ್ಲಿ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 29 ಮೇ 2018, 10:33 IST
Last Updated 29 ಮೇ 2018, 10:33 IST
ಚನ್ನಪಟ್ಟಣದ ತಾಲ್ಲೂಕು ಕಚೇರಿ ಎದುರು ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು
ಚನ್ನಪಟ್ಟಣದ ತಾಲ್ಲೂಕು ಕಚೇರಿ ಎದುರು ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು   

ಚನ್ನಪಟ್ಟಣ: ಚುನಾವಣೆಯಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಭರವಸೆ ನೀಡಿರುವಂತೆ ರೈತರ ಎಲ್ಲ ಸಾಲವನ್ನು ಮನ್ನಾ ಮಾಡಬೇಕು ಎಂದು ಒತ್ತಾಯಿಸಿ ಸೋಮವಾರ ಪಟ್ಟಣದಲ್ಲಿ ಬಿಜೆಪಿ ತಾಲ್ಲೂಕು ಘಟಕದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಪಟ್ಟಣದ ಕುವೆಂಪು ಐದನೇ ಅಡ್ಡರಸ್ತೆಯ ಪಕ್ಷದ ಕಚೇರಿ ಬಳಿಯಿಂದ ತಾಲ್ಲೂಕು ಕಚೇರಿವರೆಗೆ ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು, ತಾಲ್ಲೂಕು ಕಚೇರಿ ಎದುರು ಧರಣಿ ನಡೆಸಿ ನಂತರ ತಹಶೀಲ್ದಾರ್‌ಗೆ ಮನವಿ ನೀಡಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಹುಲುವಾಡಿ ದೇವರಾಜು ಮಾತನಾಡಿ, ಕುಮಾರಸ್ವಾಮಿ ಅವರು ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲಿ ರಾಜ್ಯದ ರೈತರ ಎಲ್ಲಾ ಸಾಲವನ್ನು ಮನ್ನಾ ಮಾಡುತ್ತೇನೆ ಎಂದು ಭರವಸೆ ನೀಡಿದ್ದರು. ಆದರೆ ಈಗ ಕಾಲಾವಕಾಶ ಕೊಡಿ ಎಂದು ಹೇಳುವ ಮೂಲಕ ತಮ್ಮ ಮಾತು ಬದಲಾಯಿಸುತ್ತಿದ್ದಾರೆ. ಅವರು ತಮ್ಮ ಮಾತಿನಂತೆ ರೈತರ ಸಾಲ ಮನ್ನಾ ಮಾಡಬೇಕು ಎಂದು ಆಗ್ರಹಿಸಿದರು.

ADVERTISEMENT

ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ರಾಜಣ್ಣ ಮಾತನಾಡಿ, ಚುನಾವಣೆ ವೇಳೆ ಸಾಲ ಮನ್ನಾ ಮಾಡಿ ಎಂದು ರೈತರು ಕುಮಾರಸ್ವಾಮಿ ಅವರನ್ನು ಕೇಳಿರಲಿಲ್ಲ, ಬದಲಾಗಿ ಅವರೇ ಮನ್ನಾ ಮಾಡುತ್ತೇನೆ ಎಂದು ಜನರಿಗೆ ಆಶ್ವಾಸನೆ ಕೊಟ್ಟಿದ್ದರು. ಆದರೆ ಈಗ ಸಾಲ ಮನ್ನಾ ಬಗ್ಗೆ ತಮ್ಮ ಮಾತು ಬದಲಾಯಿಸುತ್ತಿದ್ದಾರೆ. ಕುಮಾರ
ಸ್ವಾಮಿ ಅವರು ಮಾತು ಉಳಿಸಿಕೊಳ್ಳಬೇಕು. ಅಲ್ಲಿಯವರೆಗೂ ಬಿಜೆಪಿ ವತಿಯಿಂದ ಪ್ರತಿಭಟನೆ ಮಾಡುತ್ತಲೇ ಇರುತ್ತೇವೆ ಎಂದರು.

ಪಕ್ಷದ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಎನ್.ಆನಂದಸ್ವಾಮಿ ಮಾತನಾಡಿ, ಕುಮಾರಸ್ವಾಮಿ ಅವರು ಅಧಿಕಾರಕ್ಕೆ ಬಂದ ತಕ್ಷಣ ರೈತರ ಸಾಲ ಮನ್ನಾ ಜೊತೆಗೆ ಹಲವಾರು ಯೋಜನೆಗಳನ್ನು ಅನುಷ್ಟಾನಕ್ಕೆ ತರುವ ಭರವಸೆ ನೀಡಿದ್ದರು. ಆದರೆ ಈಗ ಸಮ್ಮಿಶ್ರ ಸರ್ಕಾರದ ನೆಪ ಹೇಳುತ್ತಿದ್ದಾರೆ. ನುಡಿದಂತೆ ನಡೆಯಲು ಆಗದಿದ್ದರೆ ಕುಮಾರಸ್ವಾಮಿ ಅವರು ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ಒತ್ತಾಯಿಸಿದರು.

ಮುಖಂಡ ಮಲವೇಗೌಡ, ತಾಲ್ಲೂಕು ಬಿಜೆಪಿ ಘಟಕದ ಪದಾಧಿಕಾರಿಗಳು ಭಾಗವಹಿಸಿದ್ದರು.

ಬಂದ್ ವಿಫಲ

ಚನ್ನಪಟ್ಟಣ: ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಸಾಲ ಮನ್ನಾ ವಿಳಂಭವನ್ನು ಖಂಡಿಸಿ ಸೋಮವಾರ ಕರೆ ನೀಡಲಾಗಿದ್ದ ಬಂದ್ ತಾಲ್ಲೂಕಿನಲ್ಲಿ ಸಂಪೂರ್ಣ ವಿಫಲವಾಯಿತು.ಪಟ್ಟಣದಲ್ಲಿ ಎಲ್ಲವೂ ಎಂದಿನಂತಿತ್ತು. ಅಂಗಡಿ ಮುಂಗಟ್ಟುಗಳು, ಹೋಟೆಲ್ ಗಳು, ಚಿತ್ರಮಂದಿರಗಳು, ಪೆಟ್ರೋಲ್ ಬಂಕ್, ಮಾರುಕಟ್ಟೆ, ಶಾಲಾ ಕಾಲೇಜುಗಳು ಸೇರಿದಂತೆ ಎಲ್ಲವೂ ಎಂದಿನಂತೆ ಕಾರ್ಯನಿರ್ವಹಿಸಿದವು.ಸರ್ಕಾರಿ ಬಸ್ಸುಗಳು, ಖಾಸಗಿ ಬಸ್ಸುಗಳು ಎಂದಿನಂತೆ ಓಡಾಡಿದವು. ಬೆಂಗಳೂರು ಮೈಸೂರು ರಸ್ತೆಯಲ್ಲಿ ವಾಹನ ಸಂಚಾರ ಎಂದಿನಂತಿತ್ತು. ಪಟ್ಟಣದ ಜನನಿಬಿಡ ಪ್ರದೇಶಗಳಾದ ಪೇಟೆ ಬೀದಿ, ಎಂ.ಜಿ.ರಸ್ತೆ, ಜೆ.ಸಿ.ರಸ್ತೆ, ಅಂಚೆ ಕಚೇರಿ ರಸ್ತೆ, ಬಸ್ ನಿಲ್ದಾಣ ಎಂದಿನಂತೆ ಇದ್ದವು. ಬಿಜೆಪಿ ಕಾರ್ಯಕರ್ತರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದ್ದನ್ನು ಬಿಟ್ಟರೆ ಬಂದ್ ಎನ್ನುವ ಯಾವುದೇ ವಾತಾವರಣ ಇರಲಿಲ್ಲ. ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಕ್ಷೇತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಚನ್ನಪಟ್ಟಣದಲ್ಲಿ ಬಂದ್ ಯಶಸ್ವಿಯಾಗಬಹುದು ಎಂಬ ನಿರೀಕ್ಷೆ ಸುಳ್ಳಾಯಿತು.

ಬಂದ್‌ ಕರೆಗೆ ನೀರಸ ಪ್ರತಿಕ್ರಿಯೆ

ರಾಮನಗರ: ರೈತರ ಸಾಲ ಮನ್ನಾಕ್ಕೆ ಆಗ್ರಹಿಸಿ ಬಿಜೆಪಿಯು ಸೋಮವಾರ ಕರೆ ನೀಡಿದ್ದ ಕರ್ನಾಟಕ ಬಂದ್‌ಗೆ ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು.

ಬಿಜೆಪಿಯ ಸ್ವಯಂಪ್ರೇರಿತ ಬಂದ್‌ ಕರೆಗೆ ಸಾರ್ವಜನಿಕರು ಸ್ಪಂದಿಸಲಿಲ್ಲ. ಜನಜೀವನ ಎಂದಿನಂತೆ ಇತ್ತು, ಶಾಲೆ, ಕಾಲೇಜು, ಸರ್ಕಾರಿ ಕಚೇರಿಗಳು, ಬ್ಯಾಂಕುಗಳು ಎಂದಿನಂತೆ ಕಾರ್ಯ ನಿರ್ವಹಿಸಿದವು. ರೇಷ್ಮೆ ಮಾರುಕಟ್ಟೆ, ಎಪಿಎಂಸಿಯಲ್ಲಿಯೂ ವಹಿವಾಟು ಎಂದಿನಂತೆ ಇತ್ತು. ಅಂಗಡಿ ಮುಂಗಟ್ಟುಗಳು, ಚಿತ್ರಮಂದಿರಗಳು ತೆರೆದಿದ್ದವು. ಬೆಂಗಳೂರು -ಮೈಸೂರು ಹೆದ್ದಾರಿಯಲ್ಲಿ ವಾಹನಗಳ ಸಂಚಾರ ಸುಗಮವಾಗಿತ್ತು. ಕೆಎಸ್‌ಆರ್‌ಟಿಸಿ, ಖಾಸಗಿ ಬಸ್‌ಗಳು, ಆಟೊಗಳು ಎಂದಿನಂತೆ ಸಂಚರಿಸಿದವು.

ಬಲವಂತವಾಗಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸಬಾರದು ಎಂದು ಬಿಜೆಪಿ ಕಾರ್ಯಕರ್ತರಿಗೆ ಪೊಲೀಸರು ಎಚ್ಚರಿಕೆ ನೀಡಿದ್ದರು. ಮುಂಜಾಗ್ರತಾ ಕ್ರಮವಾಗಿ ಹೆಚ್ಚಿನ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.