ADVERTISEMENT

ಬಿಡದಿಗೆ ಬಿಬಿಎಂಪಿ ಕಸ, ತಟ್ಟಿದ ಮಾಲಿನ್ಯ

ಕಶ್ಮಲಯುಕ್ತ ನೀರಿನಿಂದ ಬೈರಮಂಗಲ, ಸುತ್ತಲಿನ ಗ್ರಾಮಗಳ ಅಂತರ್ಜಲ ಕಲುಷಿತ

​ಪ್ರಜಾವಾಣಿ ವಾರ್ತೆ
Published 19 ಜೂನ್ 2018, 9:47 IST
Last Updated 19 ಜೂನ್ 2018, 9:47 IST
ಬಿಡದಿ ಪುರಸಭೆ ವ್ಯಾಪ್ತಿಯಲ್ಲಿ ಹಾದು ಹೋಗಿರುವ ಬೆಂಗಳೂರು–ಮೈಸೂರು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಬಿಬಿಎಂಪಿಯದ್ದು ಎನ್ನಲಾದ ಕಸ ಸುರಿದಿರುವುದು
ಬಿಡದಿ ಪುರಸಭೆ ವ್ಯಾಪ್ತಿಯಲ್ಲಿ ಹಾದು ಹೋಗಿರುವ ಬೆಂಗಳೂರು–ಮೈಸೂರು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಬಿಬಿಎಂಪಿಯದ್ದು ಎನ್ನಲಾದ ಕಸ ಸುರಿದಿರುವುದು   

ಬಿಡದಿ (ರಾಮನಗರ): ಬಿಡದಿ ವಿಶ್ವ ಕೈಗಾರಿಕಾ ನಕ್ಷೆಯಲ್ಲಿ ಗುರುತಿಸಿಕೊಂಡಿರುವ ಪ್ರಮುಖ ಪಟ್ಟಣ. ಪುರಸಭೆಯ ಆಡಳಿತ ಇರುವ ಬಿಡದಿಗೆ ತಟ್ಟಿರುವ ಮಾಲಿನ್ಯದ ಶಾಪದ ನಡುವೆಯೂ ನಾಗಾಲೋಟದಿಂದ ಬೆಳೆಯುತ್ತಿದೆ. ಬಿಡದಿಯನ್ನು ಕಸದ ಗುಂಡಿಯನ್ನಾಗಿಸುತ್ತಿರುವುದು ಮಗ್ಗಲಲ್ಲೇ ಇರುವ ರಾಜ್ಯದ ರಾಜಧಾನಿ ಬೆಂಗಳೂರು ಮಹಾನಗರ!

ಬೆಂಗಳೂರು ನಗರದಿಂದ ಕಲ್ಮಶವನ್ನು ಹೊತ್ತು ಹರಿಯುತ್ತಿರುವ ವೃಷಭಾವತಿ ನದಿ ನೀರು ಸೇರುತ್ತಿರುವುದು ಬಿಡದಿ ಹೋಬಳಿಯ ಬೈರಮಂಗಲ ಕೆರೆಗೆ. ಈ ಕಲುಷಿತ ನೀರಿನಿಂದಾಗಿ ಬೈರಮಂಗಲ ಮತ್ತು ಸುತ್ತಲಿನ ಗ್ರಾಮಗಳ ಅಂತರ್ಜಲವೂ ಕಲುಷಿತಗೊಂಡಿದೆ. ಈಗ ಬೆಂಗಳೂರು ಮಹಾನಗರ ಪಾಲಿಕೆ ರಾಜಧಾನಿಯ ಕಸವನ್ನು ಬಿಡದಿ ವ್ಯಾಪ್ತಿಯ ಬೆಂಗಳೂರು–ಮೈಸೂರು ಹೆದ್ದಾರಿ ರಸ್ತೆ ಬದಿಯಲ್ಲಿ ವಿಲೇವಾರಿ ಮಾಡಿ ಬಿಡದಿಯ ಪರಿಸರವನ್ನು ಮತ್ತಷ್ಟು ಹದಗೆಡಿಸುತ್ತಿದೆ.

ಕಸದ ಗುಂಡಿ!: ಬೆಂಗಳೂರು ಮಹಾ ನಗರ ಮಿತಿ ಮೀರಿ ಬೆಳೆಯುತ್ತಿದೆ. ಹೀಗಾಗಿ ಮಗ್ಗುಲಲ್ಲೇ ಇರುವ ಬಿಡದಿಯನ್ನು ಉಪನಗರವನ್ನಾಗಿ ಪರಿವರ್ತಿಸುವ ಬಯಕೆಯನ್ನು ರಾಜ್ಯ ಸರ್ಕಾರ ಪದೇ ಪದೇ ಪ್ರಕಟಿಸುತ್ತಲೇ ಇದೆ. ವಾಸ್ತವದಲ್ಲಿ ಬಿಬಿಎಂಪಿ ಬಿಡದಿಯನ್ನು ಉಪನಗರವನ್ನಾಗಿ ಪರಿಗಣಿಸದೆ ಕಸದ ಗುಂಡಿಯನ್ನಾಗಿ ಪರಿಗಣಿಸಿದೆ ಎಂದು ಇಲ್ಲಿನ ಜನರು ಹಿಡಿ ಶಾಪ ಹಾಕುತ್ತಿದ್ದಾರೆ.

ADVERTISEMENT

ಕೆಲವು ವರ್ಷಗಳ ಹಿಂದೆ ಬೆಂಗಳೂರು ಜಿಲ್ಲೆ ಮತ್ತು ರಾಮನಗರ ತಾಲ್ಲೂಕಿನ ಗಡಿ ಭಾಗದ ಕೊಡಿಯಾಲ ಗ್ರಾಮದ ಹೊರವಲಯದಲ್ಲಿ ಫಲವತ್ತಾದ, ಹಸಿರಿನ ಸಿರಿ ಮೈದುಂಬಿದ್ದ ಸ್ಥಳದಲ್ಲಿ ಬಿಬಿಎಂಇ ತ್ಯಾಜ್ಯ ವಿಲೇವಾರಿಗೆ ಮುಂದಾಗಿತ್ತು. ಆದರೆ ಕೊಡಿಯಾಲ ಗ್ರಾಮಸ್ಥರ ತೀವ್ರ ಪ್ರತಿಭಟನೆಯಿಂದಾಗಿ ಅದು ಸ್ಥಗಿತವಾಗಿತ್ತು.

ಬೆಂಗಳೂರು ನಗರದ ಒಳಗೆ ಕಸ ವಿಲೇವಾರಿಗೆ ಸಮಸ್ಯೆ ತಲೆದೋರಿದೆ. ಆದ್ದರಿಂದ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಬಿಡದಿ ಬಳಿ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ವಿಲೇವಾರಿ ಮಾಡುತ್ತಿದೆ ಎಂಬ ಆರೋಪಗಳು ಕೇಳಿ ಬಂದಿವೆ. ಅಲ್ಲದೆ ವೃಷಭಾವತಿ ನದಿ ನೀರು ಶುದ್ಧೀಕರಣದ ವಿಚಾರದಲ್ಲಿಯೂ ಬಿಬಿಎಂಪಿ ವಿಳಂಬ ಧೋರಣೆ ಅನುಸರಿಸುತ್ತಿದೆ ಎಂದ ಅಪವಾದವೂ ಇದೆ.

ಬೆಂಗಳೂರಿನಿಂದ ಮೈಸೂರು ಕಡೆಗೆ ಪ್ರಯಾಣ ಬೆಳೆಸುವ ಸಾವಿರಾರು ಪ್ರವಾಸಿಗರಿಗೆ ಬಿಡದಿ ಬಿಸಿ ಬಿಸಿ ತಟ್ಟೆ ಇಡ್ಲಿ ಸವಿಯುವ ಆಸೆ. ಬೆಂಗಳೂರು ಗಡಿ ದಾಟಿ ರಾಮನಗರ ಜಿಲ್ಲೆಯ ಗಡಿ ಬಿಡದಿ ಹೋಬಳಿ ಆರಂಭವಾಗುತ್ತಲೇ, ರಸ್ತೆ ಬದಿಯಲಿ ರಾಶಿ ರಾಶಿ ಕಸದ ದರ್ಶನವಾಗುತ್ತದೆ. ಮೊದಲು ಕಸದ ರಾಶಿಯ ದರ್ಶನ ಪಡೆದ ನಂತರವಷ್ಟೇ ಪ್ರವಾಸಿಗರಿಗೆ ತಟ್ಟೆಯ ಇಡ್ಲಿಯ ಹೋಟೆಲ್‌ಗಳ ದರ್ಶನವಾಗುತ್ತಿದೆ.

ಬಿಡದಿ ಪುರಸಭೆ ವ್ಯಾಪ್ತಿಯಲ್ಲಿ ಪ್ರತಿ ದಿನ ಸುಮಾರು 13-14 ಟನ್ ಕಸ ಸಂಗ್ರಹಣೆಯಾಗುತ್ತಿದೆ. ಕಸ ವಿಲೇವಾರಿಗೆ ಸೂಕ್ತ ಸ್ಥಳ ಇಲ್ಲದ್ದರಿಂದ ಪುರಸಭೆ ಕೂಡ ರೈಲು ನಿಲ್ದಾಣದ ಬಳಿ ಹೆದ್ದಾರಿ ರಸ್ತೆ ಬದಿಯಲ್ಲೇ ಬಹಳ ವರ್ಷಗಳಿಂದ ವಿಲೇವಾರಿ ಮಾಡುತ್ತಿದೆ. ಕೆಲವು ಖಾಸಗಿಯವರು ತಮ್ಮ ಜಮೀನಿನಲ್ಲಿ ಕಸ ವಿಲೇವಾರಿಗೆ ಅವಕಾಶ ಮಾಡಿಕೊಟ್ಟಿದ್ದಾರೆ.

ಆದರೂ ರಸ್ತೆ ಬದಿಯಲ್ಲೇ ಕಸ ವಿಲೇವಾರಿ ಮಾಡುವುದು ಅನಿವಾರ್ಯವಾಗಿ ಬಿಟ್ಟಿದೆ. ತಮ್ಮದೇ ಕಸದ ರಾಶಿ ಒಂದೆಡೆಯಾದರೆ ರಾತ್ರೋರಾತ್ರಿ ಬಿಬಿಎಂಪಿ ವ್ಯಾಪ್ತಿಯ ಕಸವೂ ಕೂಡ ಬಿಡದಿ ಹೋಬಳಿ ವ್ಯಾಪ್ತಿಯ ಹೆದ್ದಾರಿ ರಸ್ತೆ ಬದಿಯಲ್ಲಿ ವಿಲೇವಾರಿ ಆಗುತ್ತಿರುವುದು ಪುರಸಭೆಗೆ ತಲೆ ನೋವಾಗಿ ಪರಿಣಮಿಸಿದೆ. ಸರ್ಕಾರದ ಸ್ಥಳೀಯ ಸಂಸ್ಥೆಗಳೇ ಪರಿಸರ ಕಾಪಾಡಲು ಬದ್ದರಾಗದ ಕಾರಣ ಬಿಡದಿಯ ಕೆಲವು ಕೈಗಾರಿಕೆಗಳು ರಾಸಾಯನಯುಕ್ತ ತ್ಯಾಜ್ಯವನ್ನು, ಖಾಸಗಿಯವರು ಕಟ್ಟಡ ತ್ಯಾಜ್ಯ ರಸ್ತೆ ಬದಿಯಲ್ಲಿ ಸುರಿಯಲಾರಂಭಿಸಿದ್ದಾರೆ.

ಇವೆಲ್ಲದರ ಅರಿವಿರುವ ಜಿಲ್ಲಾಡಳಿತ ಮತ್ತು ಹೈವೆ ನಿಯಂತ್ರಣ ಪ್ರಾಧಿಕಾರದ ಅಧಿಕಾರಿಗಳು ಮಾತ್ರ ನಿದ್ದೆಗೆ ಜಾರಿ ಬಿಟ್ಟಿದ್ದಾರೆ. ರಾತ್ರಿ ವೇಳೆ ಗಸ್ತು ತಿರುಗಿ ಕಸ ವಿಲೇ ಮಾಡುತ್ತಿರುವವರನ್ನು ಹಿಡಿಯದೆ, ಪರಮ ನಿರ್ಲಕ್ಷ್ಯ ವಹಿಸಿದ್ದಾರೆ. ಜಿಲ್ಲೆಯಲ್ಲಿ ವೈಜ್ಞಾನಿಕ ಕಸ ವಿಲೇವಾರಿಗೆ ಸೂಕ್ತ ಸ್ಥಳವನ್ನು ಗುರುತಿಸಿ ಸರ್ಕಾರಕ್ಕೆ ಶಿಫಾರಸು ಮಾಡುವಲ್ಲಿಯೂ ಅಧಿಕಾರಿಗಳು ದಿವ್ಯ ಮೌನ ವಹಿಸಿದ್ದಾರೆ ಎಂದು ಸಾರ್ವಜನಿಕರು ದೂರುತ್ತಿದ್ದಾರೆ.

ಬಿಬಿಎಂಪಿಗೆ ನೋಟಿಸ್‌

ರಸ್ತೆ ಬದಿಯಲ್ಲಿ ಕಸ ವಿಲೇವಾರಿ ಮಾಡುತ್ತಿರುವ ಬಿಬಿಎಂಪಿಗೆ ನೋಟಿಸ್ ಜಾರಿ ಮಾಡುವ ಬಗ್ಗೆಯು ಪ್ರಸ್ತಾಪಿಸಲಾಗುವುದು ಎಂದು ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಸಿ. ಉಮೇಶ್‌ ತಿಳಿಸಿದರು. ವಿಧಾನಸಭಾ ಚುನಾವಣೆ, ಪದವೀಧರ ಕ್ಷೇತ್ರದ ಚುನಾವಣೆಗಳ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿತ್ತು. ಹೀಗಾಗಿ ಸಭೆಗಳನ್ನು ನಡೆಸಲು ಸಾಧ್ಯವಾಗಲಿಲ್ಲ. ಸದ್ಯದಲ್ಲೇ ಪುರಸಭೆಯ ಸದಸ್ಯರ ಸಭೆಯಲ್ಲಿ ಕಸ ವಿಲೇವಾರಿ ಬಗ್ಗೆ ಸೂಕ್ತ ನಿರ್ಧಾರವನ್ನು ತೆಗೆದುಕೊಳ್ಳಲಾಗುವುದು ಎಂದರು.

ಸ್ವಚ್ಛತೆಗೆ ಗಮನ ಕೊಡಿ

ಬೆಂಗಳೂರಿನಿಂದ ಮೈಸೂರಿಗೆ ತೆರಳುವ, ಮೈಸೂರಿನಿಂದ ಬೆಂಗಳೂರಿಗೆ ತೆರಳುವ ಬಹುಪಾಲು ಪ್ರವಾಸಿಗರು ಬಿಡದಿಯ ತಟ್ಟೆ ಇಡ್ಲಿ ತಿಂದು ಹೋಗುತ್ತಾರೆ. ಆದರೆ ಹೆದ್ದಾರಿ ರಸ್ತೆ ಬದಿಯಲ್ಲಿ, ಖಾಲಿ ಇರುವ ಜಾಗದಲ್ಲಿ ಕಸ ಸುರಿಯುತ್ತಿರುವುದರಿಂದ ಹೋಟೆಲ್‌ ಗೆ ಬರುವ ಗ್ರಾಹಕರು ಕಡಿಮೆಯಾಗುತ್ತಿದ್ದಾರೆ. ಬಿಡದಿ ಪುರಸಭೆ ಸ್ವಚ್ಛತೆಯ ಕಡೆಗೂ ಗಮನ ನೀಡಬೇಕು ಎಂದು ‘ಸುಚಿತ್ರಾ ಹೋಟೆಲ್’ ಮಾಲೀಕ ಮಲ್ಲಿಕಾರ್ಜುನ್‌ ತಿಳಿಸಿದರು.

ರೋಗ ಹೆಚ್ಚಳ: ಬಿಡದಿ ಪ್ರದೇಶಕ್ಕೆ ಕಸ ತಂದು ಸುರಿಯಲಾಗುತ್ತಿದೆ. ಇದರಿಂದ ಸಾಂಕ್ರಾಮಿಕ ರೋಗಗಳು ಹೆಚ್ಚಾಗುತ್ತಿವೆ. ಜತೆಗೆ ಬಿಡದಿ ಪಟ್ಟಣದ ಸೌಂದರ್ಯಕ್ಕೆ ಧಕ್ಕೆಯಾಗುತ್ತಿದೆ ಎಂದು ಸ್ಥಳೀಯ ರವಿ ತಿಳಿಸಿದರು.

ಈಗಾಗಲೇ ಬಿಡದಿ ಕೈಗಾರಿಕಾ ಪ್ರದೇಶ ಎಂದು ಗುರುತಿಸಿಕೊಂಡಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಕೈಗಾರಿಕೆಗಳು ಸ್ಥಾಪನೆಯಾಗಲಿದೆ. ಆದ್ದರಿಂದ ಪುರಸಭೆ ಕೂಡಲೇ ಎಚ್ಚೆತ್ತುಕೊಂಡು ತ್ಯಾಜ್ಯ ತಂದು ಸುರಿಯುತ್ತಿರುವವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.