ADVERTISEMENT

ಬೂಟು ಕಾಲಿನಿಂದ ಏಟು –ನಿಂದನೆ

ಪ್ರಜಾವಾಣಿ ಫಲಶ್ರುತಿ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2013, 6:48 IST
Last Updated 26 ಸೆಪ್ಟೆಂಬರ್ 2013, 6:48 IST

ರಾಮನಗರ: ಚನ್ನಪಟ್ಟಣದ ಸಾರ್ವ ಜನಿಕ ವಿದ್ಯಾಸಂಸ್ಥೆಯಲ್ಲಿ ದೈಹಿಕ ಶಿಕ್ಷಕ ಸಿ.ವಿ.ಕುಮಾರ್‌ ಅವರು ಶಾಲೆಯ ಎಂಟನೇ ತರಗತಿಯ ವಿದ್ಯಾರ್ಥಿ ಯೊಬ್ಬನ ಮೇಲೆ ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ತಂಡ ಮಂಗಳವಾರ ಶಾಲೆಗೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿ ವಿಸ್ತೃತ ವರದಿಯನ್ನು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ (ಸಿಡಬ್ಲ್ಯುಸಿ)ಬುಧವಾರ ಸಲ್ಲಿಸಿದೆ.

ಹಲ್ಲೆಗೆ ಒಳಗಾದ ವಿದ್ಯಾರ್ಥಿ, ಆತನ ಸಹಪಾಠಿಗಳು, ಶಾಲೆಯ ಇತರ ಶಿಕ್ಷಕರು ಹಾಗೂ ವಿದ್ಯಾರ್ಥಿಯ ಪೋಷ ಕರನ್ನು ಭೇಟಿ ಮಾಡಿ ಹೇಳಿಕೆ ಪಡೆ ದಿರುವ ಮಕ್ಕಳ ರಕ್ಷಣಾ ಘಟಕದ ತಂಡ ವರದಿ ಸಿದ್ಧಪಡಿಸಿದೆ.

‘ದೈಹಿಕ ಶಿಕ್ಷಕರು ವಿದ್ಯಾರ್ಥಿಯನ್ನು ಮೇಲಿಂದ ಕೆಳಕ್ಕೆ ಹಾಕಿ ಬೂಟಿನ ಕಾಲಿನಿಂದ ಥಳಿಸಿರುವುದು ಸತ್ಯವಾಗಿದೆ ಎಂದು ವಿಚಾರಣೆ ವೇಳೆ ಹಲವರು ಹೇಳಿಕೆ ನೀಡಿದ್ದಾರೆ. ಹೀಗೆ ಮಗುವಿಗೆ ಮಾನಸಿಕ, ದೈಹಿಕ ಹಿಂಸೆ ನೀಡಿದ ಶಿಕ್ಷಕರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲು ಘಟಕ ಶಿಫಾರಸು ಮಾಡಿ ಸಿಡಬ್ಲ್ಯುಸಿಗೆ ವರದಿ ಸಲ್ಲಿಸಿದೆ’ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಕೆ.ರಾಧಾ ‘ಪ್ರಜಾ ವಾಣಿ’ಗೆ ತಿಳಿಸಿದರು.

ಘಟನೆ ವಿವರ:  ಕಳೆದ 18ರಂದು ಶಾಲೆಯ ಆರಂಭಕ್ಕೂ ಮುನ್ನ ನಡೆ ಯುವ ಪ್ರಾರ್ಥನೆ ಸಂದರ್ಭದಲ್ಲಿ ವಿದ್ಯಾರ್ಥಿಗಳು ಸರದಿ ಸಾಲಿನಲ್ಲಿ ನಿಂತಿದ್ದಾರೆ. ಆದರೆ ಒಬ್ಬ ವಿದ್ಯಾರ್ಥಿ ಸರಿಯಾಗಿ ನಿಂತಿರಲಿಲ್ಲ. ಇದರಿಂದ ಆಕ್ರೋಶಗೊಂಡ ದೈಹಿಕ ಶಿಕ್ಷಕರು ಕೋಪದಿಂದ ಏಕಾಏಕಿ ಆ ವಿದ್ಯಾರ್ಥಿ ಯನ್ನು ನಿಂದಿಸಿ, ಹಲ್ಲೆ ನಡೆಸಿದ್ದರು.

ಈ ಘಟನೆಯ ನಂತರ ಆ ವಿದ್ಯಾರ್ಥಿ ಮಾನಸಿಕವಾಗಿ ಕುಸಿದು ಹೋಗಿ, ಖಿನ್ನತೆ ಅನುಭವಿಸುತ್ತಿದ್ದ. ಮನೆಯಲ್ಲಿ ಊಟ, ತಿಂಡಿ ಮಾಡದೇ ಬೇಸರ ಗೊಂಡಿದ್ದ. ಮೂರು ದಿನದ ನಂತರ ಪೋಷಕರು ಬಲವಂತ ಮಾಡಿದ್ದಕ್ಕೆ ಶಾಲೆಯಲ್ಲಿ ನಡೆದ ಘಟನೆಯನ್ನು ತಿಳಿಸಿದ. ನಂತರ ಪೋಷಕರು ಈ ಕುರಿತು ಸಾರ್ವಜನಿಕ ಶಿಕ್ಷಣ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿಗೆ ದೂರು ನೀಡಿದ್ದರು. ಆ ವಿದ್ಯಾರ್ಥಿಗೆ ವರ್ಷದ ಹಿಂದೆಯಷ್ಟೆ ‘ಅಪೆಂಡೀಸ್‌’ ಶಸ್ತ್ರಚಿಕಿತ್ಸೆ ಮಾಡ ಲಾಗಿತ್ತು.

ಈ ಕುರಿತು ‘ಪ್ರಜಾವಾಣಿ’ಯಲ್ಲಿ ಮಂಗಳವಾರದ ಸಂಚಿಕೆಯಲ್ಲಿ ಸುದ್ದಿ ಪ್ರಕಟವಾಯಿತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಮತ್ತು ಸಿಬ್ಬಂದಿಯ ತಂಡ ಮಂಗಳ ವಾರವೇ ಶಾಲೆಗೆ ಹೋಗಿ ತಪಾಸಣೆ ನಡೆಸಿತು.

ಸಮಿತಿಯ ಪ್ರತಿಕ್ರಿಯೆ:  ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ವರದಿಯಲ್ಲಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ಸಲ್ಲಿಸಿದೆ. ಈ ಕುರಿತು ಮುಂದಿನ ವಾರ ವಿಚಾರಣೆ ನಡೆಸಿ, ಜೆ.ಜೆ. ಕಾಯ್ದೆಯ ಪ್ರಕಾರ ಕ್ರಮತೆಗೆದುಕೊಳ್ಳಲಾಗುವುದು ಎಂದು ಸಮಿತಿಯ ಅಧ್ಯಕ್ಷ ಜಾರ್ಜ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.