ADVERTISEMENT

ಭೈರಮಂಗಲ ಸುತ್ತಮುತ್ತ ಕೃಷಿ ಚಟುವಟಿಕೆ ಕುಂಠಿತ

ಇಲ್ಲಿ ಅತಿಥಿಗಳಿಗೆ ಎಳನೀರು ಕೊಡುವ ಸಂಪ್ರದಾಯ ಕೈಬಿಟ್ಟಿದ್ದಾರೆ..! *ಭೂಮಿ ಒಳಗೇ ಸುಡುತ್ತಿದೆ...

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2012, 19:40 IST
Last Updated 13 ಡಿಸೆಂಬರ್ 2012, 19:40 IST

ರಾಮನಗರ: ಹದಿನೈದು ವರ್ಷದ ಹಿಂದೆ ಸಮೃದ್ಧವಾಗಿ ಕೃಷಿ ಚಟುವಟಿಕೆ ನಡೆಯುತ್ತಿದ್ದ ಪ್ರದೇಶದಲ್ಲಿ ಇಂದು ಕೃಷಿ ಚಟುವಟಿಕೆ ಕುಸಿತ ಕಾಣುತ್ತಿದೆ. ದಿನೇ ದಿನೇ ಕೃಷಿಯಿಂದ ಜನತೆ ವಿಮುಖರಾಗುತ್ತಿದ್ದಾರೆ. ಕೆರೆ ನಿತ್ಯ ತುಂಬಿ ಹರಿಯುತ್ತಿದ್ದರೂ ಕೃಷಿ ಮಾಡಲು ಆಗದ ಸ್ಥಿತಿಯಲ್ಲಿ ಇಲ್ಲಿನ ಜನತೆ ನರಳುತ್ತಿದ್ದಾರೆ.

ಹೌದು, ಅದು ಬೈರಮಂಗಲ ಕೆರೆ. ಹದಿನೈದು-ಇಪ್ಪತ್ತು ವರ್ಷದ ಹಿಂದೆ ಈ ಕೆರೆಯ ನೀರನ್ನು ಬಳಸಿ ಗ್ರಾಮಗಳ ಜನತೆ ಬಹುಪಾಲು ಕೃಷಿ ಚಟುವಟಿಕೆಯಲ್ಲಿ ತೊಡಗುತ್ತಿದ್ದರು. ಆದರೆ ಇಂದು ಕೃಷಿ ಕೈಗೊಳ್ಳಲಾಗದ ಸ್ಥಿತಿಯಲ್ಲಿ ಜನತೆ ಇದ್ದಾರೆ. ಆಗ ಕೃಷಿ ಮಾಡುತ್ತಿದ್ದ ಸಾಕಷ್ಟು ಪ್ರದೇಶ ಈಗ ಬಯಲಾಗಿದೆ.

ಸಾವಿರಾರು ಎಕರೆ ಕುಸಿತ: 1940ರ ಸಂದರ್ಭದಲ್ಲಿ ಈ ಕೆರೆಗೆ ಅಣೆಕಟ್ಟೆ ಕಟ್ಟಲಾಯಿತು. ಕೆರೆ ಆಶ್ರಯದಲ್ಲಿ 4.220 ಹೆಕ್ಟೇರ್ ಸಾಗುವಳಿ ನಡೆಯುತ್ತಿತ್ತು. ಆದರೆ 2011-12ನೇ ಸಾಲಿನಲ್ಲಿ ಬೈರಮಂಗಲ ಕೆರೆ ಅಚ್ಚುಕಟ್ಟು ಪ್ರದೇಶದಲ್ಲಿ ಒಟ್ಟಾರೆ ಕೇವಲ 600 ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಚಟುವಟಿಕೆ ನಡೆಯುತ್ತಿದೆ ಎಂದು ಕೃಷಿ ಇಲಾಖೆಯ ಅಂಕಿ ಅಂಶಗಳು ತಿಳಿಸುತ್ತವೆ.

`ಬೆಂಗಳೂರು ನಗರ ಬೆಳೆದಂತೆ ಈ ಕೆರೆ ಮತ್ತು ಕೆರೆ ಅಚ್ಚುಕಟ್ಟು ಪ್ರದೇಶದ ಜನತೆಗೆ ಕೇಡುಗಾಲ ಎದುರಾಗಿದೆ. ಹದಿನೈದು ವರ್ಷದಿಂದ ಎದುರಾಗಿರುವ ಈ ಕೇಡನ್ನು ಜೀರ್ಣಿಸಿಕೊಳ್ಳಲಾರದ ಸ್ಥಿತಿಯಲ್ಲಿ ಇಲ್ಲಿನ ಜನತೆ ಇದ್ದಾರೆ. ನಗರೀಕರಣ, ಕೈಗಾರಿಕೀಕರಣದಿಂದ ಬೃಹತ್ ಪ್ರಮಾಣದಲ್ಲಿ ಕಲುಷಿತ ಮತ್ತು ರಾಸಾಯನಿಕ ತ್ಯಾಜ್ಯ ನೀರು ವೃಷಭಾವತಿ ನದಿ ಮೂಲಕ ಬೈರಮಂಗಲ ಕೆರೆಗೆ ಹರಿದು ಬರುತ್ತಿದೆ.

ಅಣೆಕಟ್ಟೆ ನಿತ್ಯ ಭರ್ತಿಯಾಗಿ, ಕೋಡಿ ಹರಿಯುತ್ತಿರುತ್ತದೆ ಎಂದರೆ ಉದ್ಯಾನನಗರಿ ಬೆಂಗಳೂರಿನಿಂದ ಎಷ್ಟು ಪ್ರಮಾಣದಲ್ಲಿ ನೀರು ಹರಿದು ಬರುತ್ತದೆ ಎಂಬುದನ್ನು ಊಹಿಸಬಹುದು' ಎಂದು ಗ್ರಾಮದ ಜನತೆ ಅಸಮಾಧಾನ ವ್ಯಕ್ತಪಡಿಸುತ್ತಾರೆ.

`ಕಲುಷಿತ ನೀರಿನ ಪರಿಣಾಮ ಬೈರಮಂಗಲ ಕೆರೆಯ ಅಚ್ಚುಕಟ್ಟು ಪ್ರದೇಶದಲ್ಲಿ ಸಾವಿರಾರು ಎಕರೆ ಕೃಷಿ ಭೂಮಿ ನಾಶವಾಗಿದೆ. ಕೃಷಿಯನ್ನೇ ನಂಬಿದ್ದವರ ಜೀವನ ಬೀದಿಪಾಲಾಗಿದೆ' ಎಂದು ಗ್ರಾಮದ ಜನತೆ ಬೇಸರದಿಂದ ಹೇಳುತ್ತಾರೆ. ಕುಡಿಯುವ ನೀರಿನ ಸಮಸ್ಯೆ, ಆರೋಗ್ಯ ಸಮಸ್ಯೆ ಹಾಗೂ ಸಾಮಾಜಿಕ ಸಮಸ್ಯೆಗಳನ್ನು ತಂದೊಡ್ಡಿರುವ ಈ ಕಲುಷಿತ ನೀರು, ರೈತರು ಜೀವನ ನಡೆಸಲು ಇದ್ದ ಕೃಷಿ ಭೂಮಿಯನ್ನು ಬರಡು ಭೂಮಿಯನ್ನಾಗಿಸಿದೆ ಎಂಬ ಆಕ್ರೋಶ ಜನತೆಯಲ್ಲಿ ಮನೆ ಮಾಡಿದೆ. ಈ ಭಾಗದ ಹಲವು ರೈತರ ಜಮೀನು ಕೈಗಾರಿಕಾ ಪ್ರದೇಶಕ್ಕೆ ಸ್ವಾಧೀನವಾಗಿದ್ದರೆ, ಮತ್ತೆ ಕೆಲವರು ಕೃಷಿ ಮಾಡಲಾಗದೆ ಕಡಿಮೆ ಬೆಲೆಗೆ ಮಾರಿದ್ದಾರೆ ಎಂದು ತಿಳಿದು ಬಂದಿದೆ.

ಮಣ್ಣಿನಲ್ಲಿ ನೈಟ್ರೇಟ್ ಅಂಶ: ಒಂದೂವರೆ ದಶಕದ ಹಿಂದೆ ಯಥೇಚ್ಛವಾಗಿ ಬೆಳೆಯುತ್ತಿದ್ದ ಕಬ್ಬು, ಭತ್ತ, ರೇಷ್ಮೆ ಗಣನೀಯ ಪ್ರಮಾಣದಲ್ಲಿ ಕುಸಿತ ಕಂಡಿದೆ. ಕೃಷಿ ಇಲಾಖೆ ಮಾಹಿತಿ ಪ್ರಕಾರ 2011-12ನೇ ಸಾಲಿನಲ್ಲಿ ಬೈರಮಂಗಲ ಕೆರೆ ಅಚ್ಚುಕಟ್ಟು ಪ್ರದೇಶದಲ್ಲಿ ಕೇವಲ 100 ಹೆಕ್ಟೇರ್‌ನಲ್ಲಿ ಭತ್ತ ಮತ್ತು 110 ಹೆಕ್ಟೇರ್‌ನಲ್ಲಿ ಕಬ್ಬು ಬೆಳೆಯಲಾಗುತ್ತಿದೆ. `ಕಾರ್ಖಾನೆಯಿಂದ ಹೊರಬರುವ ವಿಷಯುಕ್ತ ತ್ಯಾಜ್ಯ ನೀರಿನಿಂದ ಮಣ್ಣಿನಲ್ಲಿ ನೈಟ್ರೇಟ್ ಅಂಶ ಹೆಚ್ಚಾಗಿದೆ. ಹಾಗಾಗಿ ಈ ಪ್ರದೆಶದ ಭತ್ತ ಮತ್ತು ಕಬ್ಬು ಬೆಳೆಯಲು ಯೋಗ್ಯವಾಗಿಲ್ಲ' ಎಂದು ಕೃಷಿ ಇಲಾಖೆಯ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ಕಾರಣದಿಂದಾಗಿ ಇಲ್ಲಿ ಭತ್ತ ಬೇಸಾಯ ಶೇ 90ರಷ್ಟು ನಾಶವಾಗಿದೆ. ಒಂದು ವೇಳೆ ಬೆಳೆದರೂ ಜೊಳ್ಳಾಗುತ್ತದೆ. ಇಲ್ಲವೆ ಬೂದಿ ರೋಗಕ್ಕೆ ತುತ್ತಾಗಿ ಗಿಡಗಳೇ ಸುಟ್ಟು ಹೋಗುತ್ತವೆ ಎನ್ನುತ್ತಾರೆ ಕೃಷಿ ತಜ್ಞರು. ಇನ್ನು ಇಲ್ಲಿ ಬೆಳೆಯುವ ಕಬ್ಬು ಸಿಹಿ ಕಳೆದುಕೊಂಡು, ಉಪ್ಪು ಮಿಶ್ರಿತವಾಗಿದೆ. ತೆಂಗಿನ ಮರಗಳು ರೋಗಗ್ರಸ್ತವಾಗಿವೆ. ಮರದ ಗರಿಗಳು ಸುಟ್ಟು ಕರಕಲಾಗಿವೆ. ಹಲವು ತೆಂಗಿನ ಮರಗಳ ಸುಳಿಗಳು ಸುಟ್ಟು ಭಸ್ಮವಾಗಿವೆ. ಕಲುಷಿತ ಮತ್ತು ವಿಷಯುಕ್ತ ನೀರಿನ ಪರಿಣಾಮ ಈ ಭಾಗದ ಎಳನೀರು ಸಪ್ಪೆ ಅಥವಾ ಕಡಿಮೆ ಸಿಹಿಯಿಂದ ಕೂಡಿವೆ ಎಂದು ಗ್ರಾಮಸ್ಥರು ಹೇಳುತ್ತಾರೆ.

ಎಳನೀರು ಕೊಡಲು ಹಿಂಜರಿಕೆ: `ಸಂಬಂಧಿಕರು ಅಥವಾ ಸ್ನೇಹಿತರು ಗ್ರಾಮಗಳಿಗೆ ಬಂದರೆ ಅವರಿಗೆ ಕುಡಿಯಲು ಎಳನೀರು ಕೊಡಲು ನಮ್ಮ ಮನಸ್ಸು ಒಪ್ಪುವುದಿಲ್ಲ' ಎಂದು ಬೈರಮಂಗಲ, ಸುತ್ತಮುತ್ತಲ ಗ್ರಾಮಗಳ ನಿವಾಸಿಗಳು ಅಳಲು ತೋಡಿಕೊಳ್ಳುತ್ತಾರೆ. `ಇದೆಲ್ಲದರ ನಡುವೆ ನಮ್ಮ ಗ್ರಾಮಗಳ ಬಳಿಯೇ ಬೆಂಗಳೂರಿನ ಕಸ ತಂದು ಸುರಿಯಲು ಸರ್ಕಾರ ನಿರ್ಧಾರ ತೆಗೆದುಕೊಂಡಿರುವುದು ಸರಿಯಲ್ಲ. ನಮ್ಮ ಜೀವನ ಮೊದಲೇ ಮೂರಾಬಟ್ಟೆಯಾಗಿದೆ. ಅದರ ಮೇಲೆ ಮತ್ತೆ ಗದಾಪ್ರಹಾರ ಮಾಡಿದರೆ ಹೇಗೆ' ಎಂದು ಅವರು ಕಂಬನಿ ಮಿಡಿಯುತ್ತಾರೆ.

ಬೈರಮಂಗಲ ಭಾಗದ ಕೃಷಿ ಚಟುವಟಿಕೆ ಕುರಿತು `ಪ್ರಜಾವಾಣಿ' ಗೆ ಪ್ರತಿಕ್ರಿಯಿಸಿದ ಜಿಲ್ಲಾ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಗೋಪಾಲಗೌಡ ಅವರು `ಬೈರಮಂಗಲ ಕೆರೆ ಕಲುಷಿತ ನೀರಿನಿಂದ ತುಂಬಿರುವುದರಿಂದ ಇಲ್ಲಿ ಕೃಷಿ ಚಟುವಟಿಕೆ ಕ್ಷೀಣಿಸುತ್ತಿದೆ. ಭತ್ತ, ಕಬ್ಬು ಸೇರಿದಂತೆ ಇತರೆ ಕೃಷಿ ಕಷ್ಟಕರವಾಗಿದೆ.

ಜೀವಕ್ಕೆ ಮಾರಕವಾಗುವಂತಹ ರಾಸಾಯನಿಕ ಪದಾರ್ಥಗಳು ಈ ನೀರಿನಲ್ಲಿ ಮಿಶ್ರಣವಾಗಿರುವುದರಿಂದ ಕೃಷಿ ಚಟುವಟಿಕೆ ಕುಸಿಯಲು ಕಾರಣವಾಗಿದೆ. ಹಿಂದೆ ಶುದ್ಧ ನೀರು ಇದ್ದ ಸಂದರ್ಭದಲ್ಲಿ ಈ ಭಾಗದಲ್ಲಿ ಯಥೇಚ್ಛವಾಗಿ ಕಬ್ಬು ಬೆಳೆಯಲಾಗುತ್ತಿತ್ತು. ಹಾಗಾಗಿ ಅಲ್ಲಿ ಸಕ್ಕರೆ ಕಾರ್ಖಾನೆ ಕೂಡ ಇತ್ತು. ಆದರೆ ಕಲುಷಿತ ನೀರಿನ ಪರಿಣಾಮ ಕಬ್ಬು ಸಿಹಿ ಕಳೆದುಕೊಳ್ಳಲಾರಂಭಿಸಿತು. ಜತೆಗೆ ಇಳುವರಿಯೂ ಕಡಿಮೆಯಾಗಿದೆ.

ಹಿಂದೆ ಎಕರೆಯಲ್ಲಿ 60ರಿಂದ 70 ಟನ್ ಕಬ್ಬು ಬೆಳೆಯಲಾಗುತ್ತಿತ್ತು. ಆದರೆ ಈಗ ಅದು ಕೇವಲ 20ರಿಂದ 30 ಟನ್‌ಗೆ ಇಳಿದಿದೆ. ಸಕ್ಕರೆ ಕಾರ್ಖಾನೆಗೆ ಅಗತ್ಯವಿರುವಷ್ಟು ಕಬ್ಬು ಈ ಪ್ರದೇಶದಲ್ಲಿ ದೊರೆಯದ ಕಾರಣ ಇತ್ತೀಚೆಗೆ ಕಾರ್ಖಾನೆಯನ್ನೇ ಮುಚ್ಚಲಾಗಿದೆ' ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.