ADVERTISEMENT

ಮತಗಟ್ಟೆ ಅಧಿಕಾರಿಗಳಿಗೆ ತರಬೇತಿ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2013, 12:02 IST
Last Updated 2 ಆಗಸ್ಟ್ 2013, 12:02 IST

ಚನ್ನಪಟ್ಟಣ: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಉಪಚುನಾವಣೆಯ ಮತದಾನದ ವೇಳೆ ಮತಗಟ್ಟೆ ಅಧಿಕಾರಿಗಳು ಹಾಗೂ ಸಹಾಯಕ ಮತಗಟ್ಟೆ ಅಧಿಕಾರಿಗಳು ನಿರ್ವಹಿಸುವ ಕಾರ್ಯದ ಬಗ್ಗೆ ತರಬೇತಿ ನೀಡಲು ಗುರುವಾರ ಪಟ್ಟಣದ ಶಿವಾನಂದ ಚಿತ್ರಮಂದಿರದಲ್ಲಿ ತರಬೇತಿ ಕಾರ್ಯಾಗಾರ ಏರ್ಪಡಿಸಲಾಗಿತ್ತು.

ತರಬೇತಿಯಲ್ಲಿ ಭಾಗವಹಿಸಿದ್ದ ಸಹಾಯಕ ಚುನಾವಣಾಧಿಕಾರಿ ಜಯಮಾಧವ್ ಈ ಸಂದರ್ಭದಲ್ಲಿ ಮಾತನಾಡಿ, `ಚುನಾವಣೆಯಲ್ಲಿ ಎಲೆಕ್ಟ್ರಾನಿಕ್ಸ್ ಮತಯಂತ್ರಗಳ ಬಳಕೆ ಮಾಡಲಾಗುತ್ತಿದ್ದು, ಮತಯಂತ್ರಗಳ ಬಳಕೆಯ ಬಗ್ಗೆ ಮತಗಟ್ಟೆ ಅಧಿಕಾರಿಗಳು ಹಾಗೂ ಸಹಾಯಕ ಮತಗಟ್ಟೆ ಅಧಿಕಾರಿಗಳು ಅರಿತು ಕಾರ್ಯನಿರ್ವಹಿಸಬೇಕು ಎಂದರು.

ಎಲ್ಲಾ ಮತಗಟ್ಟೆ ಅಧಿಕಾರಿಗಳಿಗೂ ಮತದಾನ ಕುರಿತಂತೆ ಮಾರ್ಗಸೂಚಿ ಪುಸ್ತಕ ನೀಡಲಾಗಿದೆ. ಅದರಲ್ಲಿರುವ ಎಲ್ಲಾ ಅಂಶಗಳನ್ನು ಗಮನಿಸಿ ಕಾರ್ಯ ನಿರ್ವಹಿಸಬೇಕು. ಮತದಾನದ ಆರಂಭದಿಂದ ಮುಕ್ತಾಯದವರೆಗೆ ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಬೇಕು ಎಂದು  ತಿಳಿಸಿದರು.

ತಹಶೀಲ್ದಾರ್ ಡಾ.ದಯಾನಂದ್, ತಾ.ಪಂ. ಕಾರ್ಯ ನಿರ್ವಣಾಧಿಕಾರಿ ಎಸ್.ರವಿಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಶಿವಪ್ಪ ಹಾಜರಿದ್ದರು.
ತರಬೇತಿ: ಚುನಾವಣೆ ಸಂದರ್ಭದಲ್ಲಿ ಮತಯಂತ್ರ ಬಳಸುವ ಕುರಿತು ಮತಯಂತ್ರ ಆಪರೇಟರ್‌ಗಳಿಂದ ಮತಗಟ್ಟೆ ಅಧಿಕಾರಿಗಳಿಗೆ ಪಟ್ಟಣದ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನಲ್ಲಿ ತರಬೇತಿ ನೀಡಲಾಯಿತು.

ತರಬೇತುದಾರರಾದ ಸಿ.ರಾಜಶೇಖರ್, ಸ್ವಾಮಿ, ರಾಮಣ್ಣ ಮುಂತಾದವರು ಮತಯಂತ್ರದ ವಿವರ, ಒಟ್ಟು ಮತ, ಮತದಾನದ ಆರಂಭ, ಏಜೆಂಟರ ವಿವರ, ಮತದಾನದ ನಂತರ ಮತಗಳ ವಿವರ ಪಡೆಯುವುದು, ಮತಯಂತ್ರ ದೋಷ ಉಂಟಾದ ಸಂದರ್ಭದಲ್ಲಿ ಕಾರ್ಯನಿರ್ವಹಣೆ ಮಾಡುವುದನ್ನು ತಿಳಿಸಿಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.