ADVERTISEMENT

ಮಹಿಳೆಯರಿಗೆ ಸ್ವಚ್ಛತೆಯ ನಿಗಾ ಅಗತ್ಯ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2012, 19:30 IST
Last Updated 24 ಫೆಬ್ರುವರಿ 2012, 19:30 IST

ಮಾಗಡಿ: ಪಟ್ಟಣದ ಮೊಹಲ್ಲಾಗಳಲ್ಲಿ ಮಹಿಳೆಯರು ಮತ್ತು ಮಕ್ಕಳು ವೈಯುಕ್ತಿಕ ಸ್ವಚ್ಛತೆ ಕಡೆ ಹೆಚ್ಚಿನ ಗಮನ ಕೊಡಬೇಕಿದೆ ಎಂದು ಆರೋಗ್ಯ ಸಹಾಯಕಿ ಮೋನಿಕಾ ರಂಗಧಾಮ್ ನುಡಿದರು.

ಪಟ್ಟಣದ ಹೊಸ ಮಸೀದಿ ಮೊಹಲ್ಲಾದಲ್ಲಿ  ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ವತಿಯಿಂದ ನಡೆದ ರಾಷ್ಟ್ರೀಯ ಆರೋಗ್ಯ ಸಪ್ತಾಹದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಮಹಿಳೆಯರು ಪೌಷ್ಟಿಕ ಆಹಾರ ಸೇವಿಸಬೇಕು. ಹೆರಿಗೆಯಾದ ತಕ್ಷಣ ಮಗುವಿಗೆ ಎದೆ ಹಾಲನ್ನು ಕುಡಿಸ ಬೇಕು. ಜೇನುತುಪ್ಪ, ಸಿಹಿ ನೀರನ್ನು ಕುಡಿಸಬಾರದು. ಬೆಲ್ಲ ಮತ್ತು ದ್ವಿದಳ ಧಾನ್ಯಗಳನ್ನು ಹೆಚ್ಚಾಗಿ ತಿನ್ನುವುದನ್ನು ರೂಢಿಸಕೊಳ್ಳಬೇಕು. ಆರೋಗ್ಯವಂತ ಮಗು ಈ ದೇಶದ ಮುಂದಿನ ಪ್ರಜೆ ಎಂಬುದನ್ನು ಪ್ರತಿಯೊಬ್ಬ ಮಹಿಳೆ ಮನಗಾಣಬೇಕು ಅವರು ವಿವರಿಸಿದರು.

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಅಧ್ಯಕ್ಷ ಅನ್ಸರ್ ಪಾಷಾ ಮಾತನಾಡಿ,  ರೋಗ ಬಂದ ಮೇಲೆ ವೈದ್ಯರ ಬಳಿ ಹೋಗಿ ಹಣ ಖರ್ಚು ಮಾಡುವ ಬದಲು ಬೀದಿಯ ಪರಿಸರವನ್ನು ಸ್ವಚ್ಛವಾಗಿಟ್ಟುಕೊಂಡು ಆರೋಗ್ಯ ಕಾಪಾಡಿಕೊಳ್ಳಲು ಪ್ರಯತ್ನಿಸಬೇಕು ಎಂದರು.

ಮುತುವಲ್ಲಿ ಸೈಯದ್ ರಿಯಾಜ್ ಮಾತನಾಡಿ, `ಸ್ವಚ್ಛತೆ ಇರುವಲ್ಲಿ ದೇವರು ನೆಲೆಸಿರುತ್ತಾನೆ. ಎಲ್ಲರೂ ಸ್ವಚ್ಛತೆಗೆ ಗಮನಹರಿಸಬೇಕು~ ಎಂದರು.

ಪುರಸಭೆ ಸದಸ್ಯ ಇಲಿಯಾಜ್, ಆಜಮ್ ಶಾ ಸಾಹೇಬ್, ಮಹಮದ್ ಇಮ್ರಾನ್, ಜಮೀರ್ ಮಾತನಾಡಿದರು.
ಸದಸ್ಯರಾದ ಮಹಮದ್ ಜಮೀರ್, ವಾಸೀಮ್, ಅಫ್ಜಲ್, ಫಯಾಜ್, ಅಫ್ಸರ್ ಇದ್ದರು.

ಹೊಸಮಸೀದಿ ಮೊಹಲ್ಲಾದಲ್ಲಿ ಜಾಥಾ ನಡೆಸಿ ನಿವಾಸಿಗಳಲ್ಲಿ ಆರೋಗ್ಯದ ಅರಿವು ಮೂಡಿಸಿದರು.

ಇಂದು ಪೌರಾಣಿಕ ನಾಟಕ:
ತಾಲ್ಲೂಕಿನ ಕೆಂಪಸಾಗರದ ಈಜಿನ ಕಟ್ಟೆಯ ಶನೇಶ್ವರ ಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ಫೆ.25ರಂದು ರಾತ್ರಿ 8 ಗಂಟೆಗೆ ಶ್ರೀರಂಗನಾಥ ಸ್ವಾಮಿ ಕೃಪಾಪೋಷಿತ ನಾಟಕ ಮಂಡಳಿ ವತಿಯಿಂದ ಕುರುಕ್ಷೇತ್ರ  ಪೌರಾಣಿಕ ನಾಟಕವನ್ನು ಕಲಾವಿದ ಎಚ್.ಪಿ. ಹನುಮಂತಪ್ಪ ನೇತೃತ್ವದಲ್ಲಿ ಏರ್ಪಡಿಸಲಾಗಿದೆ. 

ಮಾಜಿ ಸಚಿವ ಎಚ್.ಎಂ.ರೇವಣ್ಣ ಉದ್ಘಾಟಿಲಿದ್ದಾರೆ. ಕೆಂಪೇಗೌಡ ಅಭಿವೃದ್ಧಿ ಸಮಿತಿ ಅಧ್ಯಕ್ಷ ಎಚ್.ಎಂ.ಕೃಷ್ಣಮೂರ್ತಿ ಅಧ್ಯಕ್ಷತೆ ವಹಿಸಲಿದ್ದಾರೆ. ಶಾಸಕ ಎಚ್.ಸಿ.ಬಾಲಕೃಷ್ಣ, ಕೆ. ಬಾಗೇಗೌಡ, ಕೆಪಿಸಿಸಿ ಸದಸ್ಯ ಎ. ಮಂಜು,  ಇತರರು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.