ಮಾಗಡಿ: ಇಲ್ಲಿನ ತಿರುಮಲ ರಂಗನಾಥಸ್ವಾಮಿ ರಥೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಗುರುವಾರ ವೈಭವದಿಂದ ನಡೆಯಿತು. ಮುಜರಾಯಿ ಅಧಿಕಾರಿ ನಿರಂಜನಬಾಬು ದೇವರ ಉತ್ಸವಮೂರ್ತಿಗೆ ಪೂಜೆ ಸಲ್ಲಿಸಿದ ನಂತರ, ಭಕ್ತರು ಗೋವಿಂದಾ, ಗೋವಿಂದಾ ಎಂದು ನಾಮಸ್ಮರಣೆಯ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು.
ಪುಷ್ಪಾಲಂಕೃತವಾದ ರಥದ ಮೇಲೆ ಶ್ರೀದೇವಿ, ಭೂದೇವಿ ಸಹಿತ ರಂಗನಾಥಸ್ವಾಮಿ ಉತ್ಸವಮೂರ್ತಿಯನ್ನು ಇಡಲಾಗಿತ್ತು.
ಕಾಕತಾಳೀಯ ಎಂಬಂತೆ ರಥೋತ್ಸವಕ್ಕೆ ಚಾಲನೆ ನೀಡಿದ ತಕ್ಷಣ ಆಕಾಶದಲ್ಲಿ ಗರುಡ ಪಕ್ಷಿ ರಥದ ಮೇಲೆ ಮೂರು ಸುತ್ತು ಹಾಕಿ ಕಣ್ಮರೆಯಾಯಿತು. ಬಾಳೆಹಣ್ಣಿಗೆ ದವನ ಸಿಕ್ಕಿಸಿ ಭಕ್ತರು ರಥಕ್ಕೆ ಎಸೆದರು.
ಶಾಸಕ ಎಚ್.ಸಿ.ಬಾಲಕೃಷ್ಣ, ಮಾಜಿ ಸಚಿವ ಎಚ್.ಎಂ.ರೇವಣ್ಣ, ಸಮಾಜ ಸೇವಕ ಕೆ.ಬಾಗೇಗೌಡ, ಪುರಸಭಾಧ್ಯಕ್ಷ ಪುರುಷೋತ್ತಮ, ಜಿ.ಪಂ. ಸದಸ್ಯ ಮುದ್ದುರಾಜ್‌ಯಾದವ್, ಶ್ರೀರಂಗ ಸೇವಾಟ್ರಸ್ಟ್‌ನ ಅಧ್ಯಕ್ಷ ಟಿ.ಎಸ್. ಸತೀಶ್, ಶ್ರೀರಂಗಾಚಾರ್, ಕಲಾವಿದ ಎಚ್.ಆರ್.ಬ್ಯಾಟಪ್ಪ, ನಾಗೇಶ್ವರಯ್ಯ, ವೆಂಕಟೇಶ್ ಅಯ್ಯಂಗಾರ್ ಇದ್ದರು.
ರಥ ಬೀದಿಯಲ್ಲಿ ವಿವಿಧ ಸಮುದಾಯದವರು ಅರವಂಟಿಕೆಗಳನ್ನು ತೆರೆದು ನೀರು ಮಜ್ಜಿಗೆ, ಪಾನಕ, ರಸಾಯನ ವಿತರಿಸಿದರು. ಸೋಲೂರಿನ ಆರ್ಯ ಈಡಿಗರ ಮಠದ ಆರ್ಯ ರೇಣುಕಾನಂದ ಶ್ರೀಗಳು ಅನ್ನದಾಸೋಹಕ್ಕೆ ಚಾಲನೆ ನೀಡಿದರು. ಮಂಗಳವಾದ್ಯ ಸಹಿತ ರಥಬೀದಿಯಲ್ಲಿ ದೇವರ ಉತ್ಸವಮೂರ್ತಿಯ ಮೆರವಣಿಗೆ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.