ADVERTISEMENT

ಮಾಹಿತಿ ನಿರಾಕರಣೆ: ಅಧಿಕಾರಿಗೆ ₹10 ಸಾವಿರ ದಂಡ

​ಪ್ರಜಾವಾಣಿ ವಾರ್ತೆ
Published 26 ಮೇ 2018, 12:40 IST
Last Updated 26 ಮೇ 2018, 12:40 IST

ರಾಮನಗರ: ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಿದ್ದ ಮಾಹಿತಿಯನ್ನು ನೀಡದ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಸಾರ್ವಜನಿಕ ಮಾಹಿತಿ ಅಧಿಕಾರಿಯೂ ಆಗಿರುವ ಸಹಾಯಕ ಆಡಳಿತಾಧಿಕಾರಿಗಳಿಗೆ ಕರ್ನಾಟಕ ಮಾಹಿತಿ ಆಯೋಗವು ₹10 ಸಾವಿರ ದಂಡ ವಿಧಿಸಿ ಆದೇಶಿಸಿದೆ.

ಪೊಲೀಸ್ ಕಾನ್‌ಸ್ಟೆಬಲ್‌ ಅನ್ನು ಕರ್ತವ್ಯಕ್ಕೆ ತೆಗೆದುಕೊಳ್ಳುವ ಸಂದರ್ಭದಲ್ಲಿ ಸಲ್ಲಿಸಿರುವ ವರದಿಯ ದೃಢೀಕೃತ ಜೆರಾಕ್ಸ್ ನಕಲನ್ನು ಅರ್ಜಿದಾರರಿಗೆ ನೀಡದ ಕಾರಣ ಎಸ್ಪಿ ಕಚೇರಿಯಲ್ಲಿರುವ ಸಾರ್ವಜನಿಕ ಮಾಹಿತಿ ಅಧಿಕಾರಿ ಮಲ್ಲಿಕಾರ್ಜುನ ದಂಡ ಕಟ್ಟಬೇಕು ಎಂದು ಆಯೋಗವು ಸೂಚಿಸಿದೆ. ಈ ಕುರಿತು ಕ್ರಮ ಜರುಗಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ. ರಮೇಶ್ ಅವರಿಗೆ ನಿರ್ದೇಶನ ನೀಡಿದೆ. ನಿವೃತ್ತ ಪಿಎಸ್ ಐ ದೊಡ್ಡ ಮಾದಯ್ಯ ಮಾಹಿತಿ ಹಕ್ಕಿನಲ್ಲಿ ಅರ್ಜಿ ಸಲ್ಲಿಸಿದ್ದರು.

ದೊಡ್ಡಮಾದಯ್ಯರವರು 2014ರ ಫೆಬ್ರುವರಿ 11ರಂದು ಮಾಹಿತಿ ಹಕ್ಕು ಕಾಯ್ದೆಯ ಅಡಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಹಾಗೂ ಸಾರ್ವಜನಿಕ ಮಾಹಿತಿ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಿದ್ದರು. ಅಕ್ಕೂರು ಪೊಲೀಸ್ ಠಾಣೆ ಪಿ.ಸಿ.159 ಕೆ.ವಿ.ಜಗದೀಶ ಅವರನ್ನು ಕರ್ತವ್ಯಕ್ಕೆ ತೆಗೆದುಕೊಳ್ಳುವ ಬಗ್ಗೆ ಅಂಚೆ ಮೂಲಕ ಸಲ್ಲಿಸಲಾದ ದಾಖಲಾತಿಗಳನ್ನು ಒದಗಿಸುವಂತೆ ಕೋರಿದ್ದರು.

ADVERTISEMENT

ಆದರೆ ಸಾರ್ವಜನಿಕ ಸಂಪರ್ಕಾಧಿಕಾರಿ ಮಾಹಿತಿ ಕೊಟ್ಟಿರಲಿಲ್ಲ. ಹೀಗಾಗಿ ಅರ್ಜಿದಾರರು ಆಯೋಗದ ಮೊರೆ ಹೋಗಿದ್ದರು. 2016ರ ಅಕ್ಟೋಬರ್ 30ರಂದು ಪ್ರಕರಣದ ವಿಚಾರಣೆ ನಡೆಸಿದ ಆಯೋಗವು 30 ದಿನಗಳ ಒಳಗೆ ಅಂಚೆ ಮೂಲಕ ಮಾಹಿತಿಯ ಪ್ರತಿಗಳನ್ನು ನೀಡಬೇಕು. ಹಾಗೂ ಅದನ್ನು ಮುಂದಿನ ವಿಚಾರಣೆ ದಿನದಂದು ಖುದ್ದು ಹಾಜರಿದ್ದು ವರದಿ ಸಲ್ಲಿಸುವಂತೆ ನಿರ್ದೇಶಿಸಿತ್ತು.

ಆದರೂ ಮೇಲ್ಮನವಿದಾರರಿಗೆ ಮಾಹಿತಿ ನೀಡದೆ ಕೇವಲ ಹಿಂಬರಹ ನೀಡಿದಕ್ಕಾಗಿ ಆಯೋಗ ಕಾರಣ ಕೇಳಿತ್ತು. ಲಿಖಿತ ಸಮಜಾಯಿಷಿ ನೀಡುವಂತೆ ಸೂಚಿಸಿತ್ತು. 2018ರ ಜನವರಿ 23ರಂದು ಮೇಲ್ಮನವಿದಾರರು ಆಯೋಗಕ್ಕೆ ಮತ್ತೆ ಪತ್ರ ಬರೆದು ಪ್ರಕರಣದಲ್ಲಿ ಕೋರಿಕೊಂಡಿರುವ ದಾಖಲೆಗಳನ್ನು ನೀಡುವಂತೆ ಸೂಚಿಸಲು ಕೋರಿದ್ದರು.

ಮೇಲ್ಮನವಿದಾರರ ಪರವಾಗಿ ವಿಚಾರಣೆಗೆ ಹಾಜರಾಗಿದ್ದ ಕಂಚನಹಳ್ಳಿ ರವಿಕುಮಾರ್ ಅವರ ವಾದವನ್ನು ಆಲಿಸಿದ ಆಯೋಗ ಮೇಲ್ಮನವಿದಾರರಿಗೆ ನಾಲ್ಕು ವರ್ಷವಾದರೂ ಮಾಹಿತಿ ಒದಗಿಸದಿರುವುದು ಹಾಗೂ ಆಯೋಗದ ಆದೇಶವನ್ನೂ ಪಾಲನೆ ಮಾಡದೆ ಉಲ್ಲಂಘಿಸಿರುವುದನ್ನು ಗಂಭೀರವಾಗಿ ಪರಿಗಣಿಸಿತು. ಅಲ್ಲದೆ ₹10 ಸಾವಿರ ದಂಡ ವಿಧಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.