ADVERTISEMENT

ಮುಂಗಾರು: ಮುನ್ನೆಚ್ಚರಿಕೆ ವಹಿಸಲು ಸೂಚನೆ

ರಾಮನಗರ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅಜಯ್‌ ಸೇಠ್‌ ನೇತೃತ್ವದಲ್ಲಿ ಪೂರ್ವಸಿದ್ಧತಾ ಸಭೆ

​ಪ್ರಜಾವಾಣಿ ವಾರ್ತೆ
Published 13 ಜೂನ್ 2018, 11:02 IST
Last Updated 13 ಜೂನ್ 2018, 11:02 IST

ರಾಮನಗರ: ಮುಂಗಾರು ಆರಂಭಗೊಂಡಿದ್ದು, ಮುಂಬರುವ ದಿನಗಳಲ್ಲಿ ಯಾವುದೇ ರೀತಿಯ ಅವಘಡಗಳು ಸಂಭವಿಸದಂತೆ ಎಚ್ಚರ ವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅಜಯ್ ಸೇಠ್ ಹೇಳಿದರು.

ಇಲ್ಲಿನ ಜಿಲ್ಲಾ ಕಚೇರಿಗಳ ಸಂಕೀರ್ಣದ ಸಭಾಂಗಣದಲ್ಲಿ ಸೋಮವಾರ ಸಂಜೆ ನಡೆದ ವಿವಿಧ ಇಲಾಖೆಗಳೊಂದಿಗೆ ಮುಂಬರುವ ದಿನಗಳಲ್ಲಿ ಕೈಗೊಳ್ಳಬೇಕಿರುವ ಕಾರ್ಯಚಟುವಟಿಕೆಗಳ ಕುರಿತ ಪೂರ್ವ ಸಿದ್ಧತೆಗಳ ಸಭೆಯಲ್ಲಿ ಅವರು ಮಾತನಾಡಿದರು.

‘ಜಿಲ್ಲೆಯಲ್ಲಿ ಮುಂಗಾರು ಉತ್ತಮ ಆರಂಭ ಕಂಡಿದೆ, ಮಳೆಯಿಂದಾಗಿ ವಿದ್ಯುತ್ ಕಂಬಗಳು ಉರುಳುವುದು, ಮನೆಗಳಿಗೆ ಹಾನಿ ಸೇರಿದಂತೆ ಯಾವುದೇ ರೀತಿಯ ತೊಂದರೆ ಸಂಭವಿಸಿದ್ದಲ್ಲಿ ಕೂಡಲೇ ಕ್ರಮ ಕೈಗೊಳ್ಳಬೇಕು. ಮಳೆಯಿಂದಾಗಿ ಹಾನಿಗೀಡಾಗುವ ಪ್ರಕರಣಗಳ ಬಗ್ಗೆ ನಿಗಾ ವಹಿಸಬೇಕು’ ಎಂದು ತಿಳಿಸಿದರು.

ADVERTISEMENT

ಮುಂಗಾರು ಹಂಗಾಮಿನಲ್ಲಿ ರೈತರಿಗೆ ಅಗತ್ಯವಿರುವ ಬಿತ್ತನೆ ಬೀಜಗಳು ಹಾಗೂ ರಸಗೊಬ್ಬರಗಳು ನಿರ್ದಿಷ್ಟ ಅವಧಿಯೊಳಗೆ ವಿತರಿಸಬೇಕು. ಕೃಷಿ ಇಲಾಖೆಯಿಂದ ರೈತರಿಗೆ ನೀಡಲಾಗುವ ಎಲ್ಲ ಸೌಲಭ್ಯಗಳನ್ನು ಅವಧಿಯೊಳಗೆ ವಿತರಿಸಬೇಕು ಎಂದು ತಿಳಿಸಿದರು.

ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಎಂ.ಎಸ್. ದೀಪಜಾ ಮಾತನಾಡಿ ‘ಜಿಲ್ಲೆಯಲ್ಲಿ ಈವರೆಗೆ 373 ಮಿ. ಮೀ. ಮಳೆಯಾಗಿದ್ದು, ಶೇ 50 ರಷ್ಟು ಹೆಚ್ಚಿನ ಪ್ರಮಾಣದ ವರ್ಷಧಾರೆಯಾಗಿದೆ. ಜಿಲ್ಲೆಯಲ್ಲಿ ಸಾಗುವಳಿಗೆ ಯೋಗ್ಯವಾದ ಭೂಮಿ 1,64,965 ಹೆಕ್ಟೇರ್ ಇದ್ದು, ಮುಂಗಾರು ಹಂಗಾಮಿನಲ್ಲಿ ಕೃಷಿ ಬೆಳೆಗಳ ಬಿತ್ತನೆಗೆ 1.14 ಲಕ್ಷ ಹೆಕ್ಟೇರ್ ಗುರಿ ಇದೆ. ಸೋಮವಾರದ ಅಂತ್ಯಕ್ಕೆ 2,390 ಹೆಕ್ಟೇರ್ ಬಿತ್ತನೆಯಾಗಿದೆ’ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ವಿವಿಧ ಬೆಳೆಗಳಿಗೆ 4 ಸಾವಿರ ಕ್ವಿಂಟಲ್ ದೃಢೀಕೃತ ಬಿತ್ತನೆ ಬೀಜಗಳ ಬೇಡಿಕೆ ಇದ್ದು, ಈವರೆಗೆ ಕೃಷಿ ಇಲಾಖೆಗೆ 767 ಕ್ವಿಂಟಲ್ ಬಿತ್ತನೆ ಬೀಜಗಳ ಸರಬರಾಜಾಗಿದೆ. ರೈತ ಸಂಪರ್ಕ ಕೇಂದ್ರಗಳ ಮೂಲಕ 203.8 ಕ್ವಿಂಟಲ್ ಬಿತ್ತನೆ ಬೀಜಗಳ ವಿತರಣೆ ಮಾಡಲಾಗಿದೆ. 563.25 ಕ್ವಿಂಟಲ್ ಬಿತ್ತನೆ ಜೀಜಗಳ ದಾಸ್ತಾನಿದ್ದು, ವಿತರಣೆ ಪ್ರಗತಿಯಲ್ಲಿದೆ ಎಂದು ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ 14,400 ಟನ್ ರಸಗೊಬ್ಬರಕ್ಕೆ ಬೇಡಿಕೆ ಇದೆ, ಈಗಾಗಲೇ 2,913 ಟನ್ ಸಂಗ್ರಹವಿದೆ. 1,478 ಟನ್ ರೈತರಿಗೆ ವಿತರಣೆಯಾಗಿದ್ದು, 1,435 ಟನ್ ದಾಸ್ತಾನಿರಿಸಲಾಗಿದೆ. ರೈತರ ಆಧಾರ್ ಕಾರ್ಡ್ ಹಾಗೂ ಬಯೋಮೆಟ್ರಿಕ್ ಪಡೆದು ರಸಗೊಬ್ಬರವನ್ನು ವಿತರಿಸಲಾಗುತ್ತಿದೆ. 180 ರಸಗೊಬ್ಬರ ವಿತರಕರಿದ್ದಾರೆ ಎಂದು ತಿಳಿಸಿದರು.

ಬೆಳೆ ವಿಮೆಯಡಿ 2018-19ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ರಾಜ್ಯ ರೈತ ಸುರಕ್ಷಾ ಫಸಲ್ ಯೋಜನೆಯಡಿ ರಾಗಿ, ಭತ್ತ, ಮುಸಕಿನ ಜೋಳ, ತೊಗರಿ, ಹುರುಳಿ, ಎಳ್ಳು ಹಾಗೂ ನೆಲಗಡಲೆ ಬೆಳೆಗಳನ್ನು ಅಧಿಸೂಚಿತ ಬೆಳೆಗಳನ್ನಾಗಿ ನಿಗದಿಪಡಿಸಲಾಗಿದೆ ಎಂದು ತಿಳಿಸಿದರು.

ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಗುಣವಂತ್ ಮಾತನಾಡಿ ‘ಜಿಲ್ಲೆಯಲ್ಲಿ ಮಾವು ತೋಟಗಾರಿಕೆಯ ಪ್ರಮುಖ ಬೆಳೆಯಾಗಿದೆ. ಈ ಬಾರಿ ಮಾರ್ಚ್ – ಏಪ್ರಿಲ್‌ನಲ್ಲಿ ಹೆಚ್ಚು ಮಳೆಯಾದ ಕಾರಣ ನಿರೀಕ್ಷಿತ ಗುಣಮಟ್ಟದ ಹಣ್ಣುಗಳ ಉತ್ಪಾದನೆಯಾಗಲಿಲ್ಲ, ಹಣ್ಣುಗಳಲ್ಲಿ ಸಕ್ಕರೆಯ ಪ್ರಮಾಣ ಕಡಿಮೆಯಾಗಿ, ಸಿಕ್ಸ್ ಡಿಗ್ರಿ ಬಿಟ್ಸ್ ಇಲ್ಲದ ಕಾರಣ ಜ್ಯೂಸ್ ಕಂಟೆಂಟ್‍ ಗಳು ಹಣ್ಣಿನಲ್ಲಿ ಕಡಿಮೆಯಾದವು’ ಎಂದರು.

‘ಇದರಿಂದ ಜ್ಯೂಸ್ ತಯಾರಿಸುವ ಕಾರ್ಖಾನೆಗಳು ಹಣ್ಣುಗಳನ್ನು ಖರೀದಿಸಲಿಲ್ಲ. ಇದರೊಂದಿಗೆ ಹಣ್ಣಿನಲ್ಲಿ ಹುಳುಗಳು ಕಂಡುಬಂದವು, ರಾಜ್ಯದಲ್ಲಿ ಅತಿ ಬೇಗ ಮಾರುಕಟ್ಟೆ ಪ್ರವೇಶಿಸುವ ಮಾವು ಈ ಬಾರಿ ಮಳೆಯಿಂದಾಗಿ ತುಸು ತಡವಾಗಿ ಮಾರುಕಟ್ಟೆ ಪ್ರವೇಶಿಸಿತು. ಮೇ ಅಂತ್ಯದೊಳಗೆ ಜಿಲ್ಲೆಯಲ್ಲಿನ ಮಾವು ಸಂಪೂರ್ಣ ಖಾಲಿಯಾಗಬೇಕಿತ್ತು. ಆದರೆ ಇನ್ನೂ ಶೇ 5 ರಿಂದ 10 ರಷ್ಟು ಮಾವು ಕೊಯ್ಲಾಗಬೇಕಿದೆ’ ಎಂದು ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಈ ಬಗ್ಗೆ ಬೆಂಗಳೂರಿನ ಲಾಲ್‍ ಬಾಗ್‌ ತಾಂತ್ರಿಕ ಸಮಿತಿಯಿಂದ ವರದಿ ನೀಡಬೇಕು ಎಂದು ಉಪ ನಿರ್ದೇಶಕರಿಗೆ ಸೂಚಿಸಿದರು.

ಶಾಲೆ ವಿದ್ಯಾರ್ಥಿಗಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಶಾಲಾ ಮಕ್ಕಳ ಆರೋಗ್ಯದಲ್ಲಿ ಪ್ರಗತಿ ಸಾಧಿಸಬೇಕು, ಬಾಲ್ಯಾವಸ್ಥೆಯಲ್ಲಿ ಮಕ್ಕಳನ್ನು ಕಾಡುವ ಸಾಮಾನ್ಯ ರೋಗಗಳ ಬಗ್ಗೆ ಆರೋಗ್ಯ ಇಲಾಖೆ ವೈದ್ಯರು ನಿಗಾ ವಹಿಸಿ ಕಾಲ ಕಾಲಕ್ಕೆ ತಪಾಸಣೆ ನಡೆಸಬೇಕು ಎಂದರು.

ಆರ್ ಟಿಇ ಯೋಜನೆಯಡಿ ಖಾಸಗಿ ಶಾಲೆಗಳಲ್ಲಿ ಸೀಟು ಪಡೆದಿರುವ ವಿದ್ಯಾರ್ಥಿಗಳಿಗೆ ಖಾಸಗಿ ಶಾಲೆಗಳು ತಾರತಮ್ಯ ಮಾಡದಂತೆ ಶಿಕ್ಷಣ ಇಲಾಖೆ ಅಧಿಕಾರಿಗಳು ಗಮನ ಹರಿಸಬೇಕು. ವಿದ್ಯಾರ್ಥಿಗಳಿಂದ ಹೆಚ್ಚುವರಿ ಹಣ ಪಡೆದ ದೂರು ಬಂದರೆ ಅಂತಹ ಶಾಲೆಗಳ ಆಡಳಿತ ಮಂಡಳಿ ಬಗ್ಗೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಕ್ಯಾಪ್ಟನ್ ಕೆ. ರಾಜೇಂದ್ರ, ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಮುಲ್ಲೈ ಮುಹಿಲನ್, ಉಪವಿಭಾಗಾಧಿಕಾರಿ ಡಾ. ಎಚ್.ಎಲ್. ನಾಗರಾಜ್, ಆರ್‌ಸಿಎಚ್ ಅಧಿಕಾರಿ ಡಾ.ಆರ್.ಎನ್‌. ಲಕ್ಷ್ಮೀಪತಿ ಇದ್ದರು.

ಜನರಲ್ಲಿ ಜಾಗೃತಿ ಮೂಡಿಸಿ

‘ಜಿಲ್ಲೆಯಲ್ಲಿ ನಿಫಾ ವೈರಸ್ ಕುರಿತಂತೆ ವದಂತಿಗಳು ಹರಡುತ್ತಿದೆ. ಯಾವುದೇ ರೀತಿಯ ಹಣ್ಣುಗಳನ್ನು ಸೇವಿಸಬಾರದು ಎಂಬ ಸಂಗತಿ ಹಬ್ಬಿದೆ, ಇದೆಲ್ಲಾ ಸತ್ಯಕ್ಕೆ ದೂರವಾಗಿದ್ದು, ಆರೋಗ್ಯ ಇಲಾಖೆ ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು. ಇದಕ್ಕಾಗಿ ಆಂದೋಲನ ಹಮ್ಮಿಕೊಳ್ಳಬೇಕು’ ಎಂದು ಅಜಯ್‌ ಸೇಠ್‌ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು. ‘ನಿಫಾ ವೈರಸ್ ಕೇರಳದಲ್ಲಿ ಕಂಡು ಬಂದಿದ್ದು, ಈ ವೈರಸ್ ಪೀಡಿತರಿಂದ ಇತರರಿಗೆ ಹರಡುವ ಸಾಧ್ಯತೆಗಳಿರುತ್ತವೆಯೇ ಹೊರತು ಯಾವುದೇ ಕಾರಣಕ್ಕೂ ಮಾವಿನ ಹಣ್ಣುಗಳ ಸೇವನೆಯಿಂದ ಬರುವುದಿಲ್ಲ ಎಂಬುವ ಬಗ್ಗೆ ಜಾಗೃತಿ ಮೂಡಿಸಬೇಕು’ ಎಂದರು.

ಪ್ರಕೃತಿಯಲ್ಲಿ ವೈಪರಿತ್ಯಗಳ ಸಂದರ್ಭ ಬೆಳೆಗಳ ಬಗ್ಗೆ ರೈತರ ಮೊಬೈಲ್‍ ಗಳಿಗೆ ಮಾರ್ಗದರ್ಶನ ಸಂದೇಶ ಕಳುಹಿಸಬೇಕು ಎನ್‌ಐಸಿ ವತಿಯಿಂದ ಈ ಕಾರ್ಯ ನಿರ್ವಹಿಸಬಹುದು
ಅಜಯ್ ಸೇಠ್‌, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.